ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಜೆಡಿಎಸ್ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕ್ ಪಂಚಾಯಿತಿ ಚುನಾವಣೆಯಲ್ಲಿ ಪುನಶ್ಚೇತನಕ್ಕೆ ಪ್ರಯತ್ನಿಸುತ್ತಿದೆ. ಜೂನ್ ನಲ್ಲಿ ಈ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸಲು ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಮತ್ತು ಚುನಾವಣಾ ಆಕಾಂಕ್ಷಿಗಳೊಂದಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಂಗಳವಾರ ಸಭೆ ನಡೆಸಿದ್ದಾರೆ. ಮೈಸೂರು,ಚಾಮರಾಜನಗರ ಮತ್ತು ಮಂಡ್ಯ ವಿಧಾನಸಭಾ ಕ್ಷೇತ್ರಗಳ ಪಕ್ಷದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಹಲವು ತಾಲೂಕುಗಳಲ್ಲಿ ಸ್ವಂತ ಬಲದಿಂದ ಗೆಲ್ಲುವ ಬಲವಾದ ನೆಲೆಯನ್ನು ಪಕ್ಷ ಹೊಂದಿದ್ದು, ಪ್ರತಿಯೊಂದು ಸ್ಥಾನದಲ್ಲೂ ಪಕ್ಷದ ಬಲ ನೋಡಿಕೊಂಡು ನಾಯಕರು ಮುಂದೆ ಸಾಗಬೇಕು. ಈ ಚುನಾವಣೆಯು ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬುವ ಮತ್ತು ಹಳೇ ಮೈಸೂರಿನಲ್ಲಿ ಪಕ್ಷವನ್ನು ಬಲಪಡಿಸುವ ಗುರಿ ಹೊಂದಿರಬೇಕು. ಇದರಿಂದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಕ್ಷದ ಮೈತ್ರಿ ಪಾಲುದಾರ ಬಿಜೆಪಿಯೊಂದಿಗೆ ಸ್ಥಾನ ಹಂಚಿಕೆ ವಿಚಾರದಲ್ಲಿ ಮೇಲುಗೈ ಸಾಧಿಸುವಲ್ಲಿ ನೆರವಾಗಲಿದೆ ಎಂದು ಅನೇಕ ನಾಯಕರು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ಮುಖಂಡರ ಮಾತುಗಳನ್ನು ಆಲಿಸಿದ ನಿಖಿಲ್, ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಕಾರ್ಯಕರ್ತರ ಹಿತಾಸಕ್ತಿಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಪಕ್ಷದ ಕಾರ್ಯಕರ್ತರ ಅಹವಾಲು ಆಲಿಸಲು ಪಕ್ಷದ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಬಿಜೆಪಿಯೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವ ಮೊದಲು ಕಾರ್ಯಕರ್ತರ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಸಭೆಯಲ್ಲಿ ಪಕ್ಷ ಸಂಘಟನೆ ಬಲವರ್ಧನೆಗೆ ಒತ್ತು ನೀಡಲಾಗಿದ್ದು, ಮಾರ್ಚ್ 14ರಂದು ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ನಿಖಿಲ್ ಘೋಷಿಸಿದರು. ಕುಮಾರಸ್ವಾಮಿ ಅವರೇ ಮುಂದುವರಿಯಬೇಕೆಂದು ಪಕ್ಷದ ಅನೇಕರು ಬಯಸಿರುವುದರಿಂದ ತಾವು ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಎಸ್ ಸಿ, ಎಸ್ ಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.