ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಾಸಕರು, ಸಚಿವರ ಔತಣಕೂಟದ ಬಗ್ಗೆ ಅನಗತ್ಯ ಆತಂಕಗಳೇಕೆ? ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬುಧವಾರ ಪ್ರಶ್ನಿಸಿದ್ದಾರೆ.
ಎಸ್‌ಸಿ/ಎಸ್‌ಟಿ ಸಮುದಾಯಗಳ ಕೆಲವು ಉನ್ನತ ಕಾಂಗ್ರೆಸ್ ನಾಯಕರು ಏರ್ಪಡಿಸಿದ್ದ ಔತಣಕೂಟ ವಿವಾದ ಕುರಿತು ಪ್ರತಿಕ್ರಿಯಿಸಿರುವ ಅವರು, ನಮ ಸಭೆಯಲ್ಲಿ ನಾವು ಊಟ ಮಾಡಿಕೊಳ್ಳುತ್ತೇವೆ. ನಮದೇ ಆದ ಅಜೆಂಡಾಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಇದರ ಬಗ್ಗೆ ಬೇರೆಯವರು ಆತಂಕ ಪಡುವುದೇಕೆ? ಎಂದು ಪ್ರಶ್ನಿಸಿದರು.
ಸಭೆಯನ್ನು ಯಾವ ಉದ್ದೇಶಕ್ಕೆ ಕರೆಯಲಾಗಿತ್ತು ಎಂದು ನನಗೆ ಮಾಹಿತಿ ಇಲ್ಲ. ನನ್ನನ್ನು ಆಹ್ವಾನಿಸಲಾಗಿತ್ತು. ಆದರೆ ಸಭೆಯ ಕಾರ್ಯಸೂಚಿಗಳೇನೆಂದು ಗೊತ್ತಿರಲಿಲ್ಲ. ಯಾವ ಕಾರಣಕ್ಕೆ ಸಭೆ ಕರೆಯಲಾಗಿದೆ ಎಂದು ಗೃಹ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ಈಗ ಏಕೆ ಸಭೆ ರದ್ದಾಗಿದೆ ಎಂದು ಕೂಡ ನನಗೆ ಮಾಹಿತಿ ಇಲ್ಲ. ಬೇರೆಯವರು ಈ ವಿಚಾರವಾಗಿ ಗೊಂದಲಗೊಳ್ಳುವುದೇಕೆ ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ಗಾಗಲೀ, ಬೇರೆ ಯಾರಿಗೇ ಆಗಲಿ ಆತಂಕ ಬೇಡ. ಮುಂದಿನ ದಿನಗಳಲ್ಲಿ ಸಭೆ ಸೇರುವ ಬಗ್ಗೆ ಹೈಕಮಾಂಡ್ ನಾಯಕರ ಮನವೊಲಿಸಲಾಗುವುದು. ರಾಜಕೀಯದಲ್ಲಿ ಹಿನ್ನಡೆ, ಮುನ್ನಡೆ ಸಹಜ. ಇಲ್ಲಿ ಸೋಲು-ಗೆಲುವು ಎಂಬುದನ್ನು ಪರಿಗಣಿಸಬೇಕಿಲ್ಲ. ಒಮ್ಮೆ ನಾವು ಗೆಲ್ಲುತ್ತೇವೆ, ಇನ್ನೊಮ್ಮೆ ಬೇರೆಯವರು ಗೆಲ್ಲುತ್ತಾರೆ. ರಾಜಕೀಯದಲ್ಲಿ ಈ ರೀತಿಯ ಮುಸುಕಿನ ಗುದ್ದಾಟಗಳು ಇದ್ದೇ ಇರುತ್ತವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಗೃಹ ಸಚಿವರು ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ಮಾಡಿ ಸಭೆಯ ದಿನಾಂಕ ನಿಗದಿ ಮಾಡಲಿದ್ದಾರೆ. ಸಭೆ ನಡೆಸಬಾರದು ಎಂದು ಯಾರೂ ಹೇಳಿಲ್ಲ. ಹೈಕಮಾಂಡ್ ಗಮನಕ್ಕೆ ಹೋಗಿರುವುದರಿಂದ ಅದರಲ್ಲೂ ಪರ-ವಿರೋಧ ಇರುವುದರಿಂದ ಹೈಕಮಾಂಡ್ ಅನುಮತಿ ಪಡೆದು ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ನಾನು ರಾಜಕೀಯದ ಕೇಂದ್ರಬಿಂದುವಲ್ಲ. ನನ್ನ ಪಾಡಿಗೆ ನಾನಿದ್ದೇನೆ. ಸಹಜವಾಗಿಯೇ ನಾನು ಕೇಂದ್ರ ಬಿಂದುವಾದರೆ ಅದಕ್ಕೆ ನಾನೇನೂ ಮಾಡಲಾಗುವುದಿಲ್ಲ ಎಂದರು.