ಮೈಸೂರು: ರಾಜ್ಯದಲ್ಲಿ ಅಹಿಂದ ಮಾಡಿದ್ದು ಯಾರು? ಸಿ.ಎಸ್. ದ್ವಾರಕನಾಥ್ ಮತ್ತು ಆರ್.ಎಲ್. ಜಾಲಪ್ಪ. ಆದರೆ, ನೀವು ಮಾಡಿದ್ದು ಏನು? ಕೋಲಾರದಲ್ಲಿ ರಾತ್ರೋ ರಾತ್ರಿ ಜಾಲಪ್ಪ ಅವರ ಫೋಟೋ ತೆಗೆದುಹಾಕಿ ತಮ್ಮ ಫೋಟೋ ಹಾಕಿಕೊಂಡಿದ್ದು ಯಾರು? ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಗುರುವಾಪ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮನ್ನು ತಾವೇ ಹಿ೦ದುಳಿದವರ ಚಾಂಪಿಯನ್ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಅಹಿಂದ ಮಾಡಿದ್ದು ಯಾರು? ಸಿ.ಎಸ್. ದ್ವಾರಕನಾಥ್ ಮತ್ತು ಆರ್.ಎಲ್. ಜಾಲಪ್ಪ. ಆದರೆ ನೀವು ಮಾಡಿದ್ದು ಏನು? ಕೋಲಾರದಲ್ಲಿ ರಾತ್ರೋ ರಾತ್ರಿ ಜಾಲಪ್ಪ ಅವರ ಫೋಟೋ ತೆಗೆದುಹಾಕಿ ತಮ್ಮ ಫೋಟೋ ಹಾಕಿಕೊಂಡಿದ್ದು ಯಾರು? ಎಂದು ಪ್ರಶ್ನಿಸಿದರು.
ನಿಜವಾದ ಹಿಂದುಳಿದವರ, ಬಡವರ ನಾಯಕ ಡಿ. ದೇವರಾಜ ಅರಸು. ಅವರು ಮಾಡಿದ್ದನ್ನು ನಾನು ಮಾಡಿದ್ದು ಎಂದು ಹೇಳಿಕೊಳ್ಳುವ ಚಟ ನಿಮಗೆ, ರಾಹುಲ್ ಗಾಂಧಿಗೆ ನ್ಯಾಯ ಯೋಧ ಅಂತ ಪ್ರಶಸ್ತಿ ನೀಡುವುದಾಗಿ ಗೊತ್ತಾಗಿದೆ. ಅಧಿಕಾರಕ್ಕಾಗಿ ಇಂಥ ಚಮಚಾಗಿರಿ, ಇದು ನಾಚಿಕೆಗೇಡಿನ ಸಂಗತಿ. ನಿಜ ಹೇಳಬೇಕೆಂದರೆ ಇಬ್ಬರೂ ನ್ಯಾಯ ಯೋಧರಲ್ಲ.
ಹಿಂದುಳಿದವರಲ್ಲಿ ಕುರುಬ, ಕುಂಬಾರ, ಉಪ್ಪಾರ ಮುಂತಾದ ಐದಾರು ಜಾತಿ ಹೆಸರು ಬಿಟ್ಟು ಬೇರೆ ಜಾತಿ ಹೆಸರೇಳಲಿ ಸಿದ್ದರಾಮಯ್ಯ. ಏಕೆಂದರೆ ಸಿದ್ದರಾಮಯ್ಯ ಕೆಳಗಿರುವ ಜಾತಿಗಳ ಸಂಪರ್ಕವೇ ಇಲ್ಲ.
ನೀವು ಹಿಂದುಳಿದ ನಾಯಕರಾಗಿದ್ದರೆ ನಾಲ್ಕು ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡಿರುವುದು ಯಾರಿಗೆ? ಈಡಿಗ ಸಮುದಾಯದ ಅಮೀನ್ ಮಟ್ಟು ನಿಮ್ಮ ಭಂಟ, ಮತ್ತೊಬ್ಬರು ಮಾಜಿ ಸಚಿವರ ಪುತ್ರಿ, ಉಳಿದದ್ದು ದಲಿತರಿಗೆ. ಹಿಂದುಳಿದವರಿಗೆ ಕೊಟ್ಟಿದ್ದು ಏನು ಎಂದು ಅವರು ಪ್ರಶ್ನಿಸಿದರು.
ಸುಮ್ಮನೆ ಬಿಜೆಪಿಯನ್ನು ಹಿಂದುಳಿದ ವರ್ಗಗಳ ವಿರೋಧಿ ಎಂದು ಹೇಳುತ್ತೀರಲ್ಲ. ರಾಜ್ಯಸಭಾ ಸದಸ್ಯ ಸ್ಥಾನವನ್ನು ಸಿದ್ಧಿ ಸಮುದಾಯಕ್ಕೆ ಮತ್ತು ತೀರ ಹಿಂದುಳಿದ ವರ್ಗದ ಅಶೋಕ್ ಗಸ್ತಿಗೆ ನೀಡಲಾಯಿತು. ಆದ್ದರಿಂದ ಮಾತನಾಡುವ ಮು೦ಚೆ ನೋಡಿ ಮಾತನಾಡಿ ಎಂದು ಅವರು ತಿರುಗೇಟು ನೀಡಿದರು.
ಸ್ವತಃ ಕುರುಬ ಜನಾಂಗದ ರಕ್ಷಣೆಗೆ ಸಿದ್ದರಾಮಯ್ಯ ಮುಂದಾಗಿಲ್ಲ, ಉತ್ತರ ಕರ್ನಾಟಕ ಭಾಗದಲ್ಲಿ ಕುರುಬ ಜನಾಂಗದ ಪಾಡು ಹೇಳತೀರದು. ಇನ್ನು ಮೈಸೂರಿನಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಿಸಿ ಅರ್ಧಕ್ಕೆ ಬಿಟ್ಟಿದ್ದಾರೆ. ಅದನ್ನೂ ಪೂರ್ಣಗೊಳಿಸಿಲ್ಲ ಜನ ಧಂಗೆ ಹೇಳುವ ಕಾಲ ಬಂದಿದೆ ಎಂದು ಕಿಡಿಕಾರಿದರು.
ನಿಮಗೆ ತೊಂದರೆ ಎದುರಾದಾಗ ಸಾಧನಾ ಸಮಾವೇಶದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತೀರಿ.ನಿಮ್ಮ ಅವಧಿಯಲ್ಲಿ ಎರಡೂವರೆ ಸಾವಿರ ಸರ್ಕಾರಿ ಶಾಲೆಗೆ ಬೀಗ ಹಾಕಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ರಸ್ತೆ ಗುಂಡಿ ಮುಚ್ಚುತ್ತಿಲ್ಲ. ಇದು ಯಾವ ಸುಭೀಕ್ಷಾ ರಾಜ್ಯ? ಸಾ.ರಾ. ಮಹೇಶ್ ಕಾಲದ ರಸ್ತೆ ಕಾಮಗಾರಿಗೆ ಈಗ ಗುದ್ದಲಿ ಹಿಡಿಯುವುದು ಸರಿಯೇ? ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ಸುಮಾರು 1 ಲಕ್ಷ ಮಂದಿ ಸ್ಥಳೀಯ ಪ್ರತಿನಿಧಿಗಳ ಅಧಿಕಾರವನ್ನು ಕಿತ್ತುಕೊಂಡಿದ್ದಾರೆಂದು ಆರೋಪಿಸಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಲು ಸಾಲ ಮಾಡಲಾಗುತ್ತಿದೆ. 7500 ಲಕ ಕೋಟಿ ಸಾಲವಾಗಿದೆ. ಮತ್ತೊಂದೆಡೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿಕೊಳ್ಳುವುದಕ್ಕೆ ಅನುದಾನ ಕೋರಿಕೊಂಡು ಕೇಂದ್ರದ ಮುಂದೆ ನೀರಾವರಿ ಸಚಿವರು ನಿಂತಿದ್ದಾರೆ. ಗ್ಯಾರಂಟಿಯಂತ ಯೋಜನೆಯನ್ನು ನಾವು ಸುಭೀಕ್ಷೆವಾಗಿ ಇದ್ದಾಗ ಮಾಡಬೇಕು. ನೀವು ಹೇಳಿದ ಪಂಚ ಗ್ಯಾರಂಟಿಯಲ್ಲಿ ಯುವ ನಿಧಿ ಆರಂಭವಾಗಿಯೇ ಇಲ್ಲ? ಬರಿ ಬೊಗಳೆಯೇ ಆಯಿತು. ಯಾವುದಾದರೂ ಚುನಾವಣೆ ಬಂದಾಗ ಹಣ ಕೊಟ್ಟು ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದರು.
ಕಳೆದ ಎರಡೂವರೆ ವರ್ಷದಲ್ಲಿ ಮೈಸೂರಿಗೆ ಏನು ಮಾಡಿದ್ದೀರಿ? ಕಳೆದ ಅವಧಿಯಲ್ಲಿ ನಾವೇ ಒಂದು ರೂ.ಗೆ ಅಕಿ ಕೊಡಿ, ಭಾಗ್ಯ ಜ್ಯೋತಿ ಕೊಡಿ ಎಂಬ ಸಲಹೆ ನೀಡಿದ್ದೆವು. ಅಂತೆಯೇ ಸಾಲ ಮನ್ನಾಕ್ಕೂ ಹೇಳಿದ್ದೆವು. ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿತ್ತು. ಈ ವಿಷಯಗಳ ಪ್ರಸ್ತಾಪವೇ ಇಲ್ಲದೆ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರ ದುಡ್ಡನ್ನು ಹೀಗೆ ಹಾಳು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ವಿಳಂಬ ಕುರಿತಂತೆ ಸರ್ಕಾರದ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಹಿರಿಯ ಪತ್ರಕರ್ತ ಕೆ.ಬಿ. ಗಣಪತಿ ನಿಧನರಾದಾಗ ಸಿಎಂ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ. ಮಹದೇವಪ್ಪ ಬರಲಿಲ್ಲ. ಇದು ಸಿಎಂ ಸಿದ್ದರಾಮಯ್ಯ ಅವರು ಕೆಬಿಜಿ ಅವರ ಮೇಲೆ ದ್ವೇಷ ಸಾಧಿಸಿದ್ದಾರೆ. ಇದು ಕೆಬಿಜಿ ಅವರ ಪತ್ರಿಕಾ ಸೇವೆಗೆ ಮಾಡಿದ ಅಪಮಾನ ಎಂದು ಆರೋಪಿಸಿದರು.
ಪತ್ರಕರ್ತ ರಾಜಶೇಖರ ಕೋಟಿ ಅವರ ನಿಧನರಾದಾಗ ಪೊಲೀಸ್ ಗೌರವ ಸಲ್ಲಿಸಲಾಯಿತು. ರಾಜಶೇಖರ ಕೋಟಿ ಅವರಷ್ಟೆ ಹಿರಿಯರು ಕೆ.ಬಿ. ಗಣಪತಿ. ಅವರಿಗೇಕೆ ಸರ್ಕಾರಿ ಗೌರವ ಕೊಡಲಿಲ್ಲ? ಇದು ಖಂಡನೀಯ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ತಾಖತ್ ಇದ್ದರೆ ನಾಳೆ ಸಿಎಂ ಕಾರ್ಯಕ್ರಮ ಬಹಿಷ್ಕರಿಸಲಿ ಎಂದು ಸವಾಲು ಹಾಕಿದರು.