ಬೆಂಗಳೂರು: ಎಐಸಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ನಂತರ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆಯಿಂದ ಕಾಂಗ್ರೆಸ್ ಶಾಸಕರೊಂದಿಗೆ ನಾಲ್ಕು ದಿನ ಸರಣಿ ಸಭೆ ನಡೆಸಲಿದ್ದಾರೆ. ಜಿಲ್ಲಾವಾರು ಶಾಸಕರೊಂದಿಗೆ ಸಭೆ ನಡೆಸಲಿರುವ ಮುಖ್ಯಮಂತ್ರಿ ಕುಂದುಕೊರತೆಗಳನ್ನು ಆಲಿಸಲಿದ್ದು, ಅಭಿವೃದ್ಧಿ ಯೋಜನೆಗೆ ಅನುಷ್ಟಾನಕ್ಕೆ ಸಲಹೆ ಸೂಚನೆ ನೀಡಲಿದ್ದಾರೆ.
ನಾಳೆಯಿಂದ ನಾಲ್ಕು ದಿನಗಳ ಸಭೆ ನಡೆಯಲಿದ್ದು, 30 ನಿಮಿಷದಿಂದ ಒಂದು ಗಂಟೆಯವರೆಗೂ ಶಾಸಕರೊಂದಿಗೆ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದಾರೆ. ಮೊದಲ ದಿನ ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ಹಾಸನ ಜಿಲ್ಲೆಗಳ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಿಎಂ ಸಭೆ ನಡೆಸಿದ್ದಾರೆ. ನಾಳೆ ಸಂಜೆ 5 ಗಂಟೆಗೆ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ಶಾಸಕರೊಂದಿಗೆ ಸಭೆ ಆರಂಭವಾಗಲಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ, ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಮತ್ತು ಶಾಸಕರಾದ ಡಿ. ರವಿಶಂಕರ್, ಅನಿಲ್ ಚಿಕ್ಕಮಾಧು, ದರ್ಶನ್ ಧ್ರುವನಾರಾಯಣ್ .ಕೆ. ಹರೀಶ್ ಗೌಡ ಮತ್ತು ತನ್ವೀರ್ ಸೇಠ್ ಪಾಲ್ಗೊಳ್ಳಲಿದ್ದಾರೆ. ತದನಂತರ ಚಾಮರಾಜನಗರ ಜಿಲ್ಲೆಯ ಶಾಸಕರಾದ ಎಆರ್ ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ ಮತ್ತು ಹೆಚ್ಎಂ ಗಣೇಶ್ ಪ್ರಸಾದ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರೊಂದಿಗೆ ಸಭೆ ನಿಗದಿಯಾಗಿದೆ.
ಸಂಜೆ 5-30ರಿಂದ 6-45ರವರೆಗೂ ತುಮಕೂರು ಶಾಸಕರ ಸಭೆ ನಡೆಯಲಿದೆ. ಇದರಲ್ಲಿ ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಣಣ್ಣ, ಶಾಸಕರಾದ ಟಿಬಿ ಜಯಚಂದ್ರ, ಕೆ.ಷಡಕ್ಷರಿ, ಹೆಚ್. ಡಿ. ರಂಗನಾಥ್, ಎಸ್ ಶ್ರೀನಿವಾಸ್ ಮತ್ತು ಹೆಚ್.ವಿ. ವೆಂಕಟೇಶ್ ಪಾಲ್ಗೊಳ್ಳಲಿದ್ದಾರೆ. ಸಂಜೆ 6-45 ರಿಂದ 7-45ರವರೆಗೂ ಕೊಡಗು, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶಾಸಕರೊಂದಿಗೆ ಸಭೆ ನಿಗದಿಯಾಗಿದೆ.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಬೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಮತ್ತು ಶಾಸಕ ಡಾ. ಮಂಥರ್ ಗೌಡ ಇದರಲ್ಲಿ ಭಾಗವಹಿಸಲಿದ್ದಾರೆ. ಹಾಸನದಿಂದ ಕೆಎಂ ಶಿವಲಿಂಗೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ದಕ್ಷಿಣ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು.ಟಿ. ಖಾದರ್ ಮತ್ತು ಶಾಸಕ ಅಶೋಕ್ ಕುಮಾರ್ ರೈ ಅವರೊಂದಿಗೆ ಸಿಎಂ ಸಭೆ ನಡೆಸಲಿದ್ದಾರೆ.
ಇತ್ತೀಚಿನ ಪಕ್ಷದ ಹೈಕಮಾಂಡ್ ಮಧ್ಯ ಪ್ರವೇಶದ ನಂತರ ನಡೆಯುತ್ತಿರುವ ಈ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಾಗಲೇ ಶಾಸಕರಿಗೆ ರೂ.50 ಕೋಟಿ ಅನುದಾನವನ್ನು ಬಿಡುಗಡೆ ಮಾಡಿರುವುದಾಗಿ ಮೂಲಗಳು ಹೇಳಿವೆ.