ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಬದಲಾವಣೆಯ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸುವುದನ್ನು ಡಿಸಿಎಂ ಡಿ.ಕೆ ಶಿವಕುಮಾರ್ ವಾರ್ನಿಂಗ್ ಕೊಡುವ ಮೂಲಕ ತಡೆದಿದ್ಗಾರೆ. ಇದರ ಜೊತೆಗೆ ಒಕ್ಕಲಿಗ ಭದ್ರಕೋಟೆಯಾದ ಹಳೆ ಮೈಸೂರು ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರ ಸಹಾನುಭೂತಿಯನ್ನು ಗಳಿಸುತ್ತಿರುವಂತೆ ಕಾಣುತ್ತಿದೆ.
ಶಿವಕುಮಾರ್ ಅವರು ಶಾಸಕರ ಬಾಯಿ ಮುಚ್ಚಿಸಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಆಗಬೇಕಂದು ಬೆಂಬಲಿಸಿ ಹೇಳಿಕೆ ನೀಡಿದ್ದಕ್ಕಾಗಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಶನಿವಾರ, ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಶಿವಕುಮಾರ್ ಅವರು ಮುಂದಿನ ಸಿಎಂ ಎಂಬ ಘೋಷಣೆ ಕೂಗಿದರು. ಶಿವಕುಮಾರ್ ಅವರ ಪ್ರಭಾವದಿಂದಾಗಿ, 2023 ರ ವಿಧಾನಸಭಾ ಚುನಾವಣೆಯಲ್ಲಿ 4-5% ಮತಗಳು ಕಾಂಗ್ರೆಸ್ ಪರವಾಗಿ ಬಂದಿವೆ. ಪಕ್ಷವು ಮಂಡ್ಯದಲ್ಲಿ ಎಂಟು ಸ್ಥಾನಗಳಲ್ಲಿ ಆರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಹಾಸನ ಲೋಕಸಭಾ ಸ್ಥಾನವನ್ನು ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.
ತಮ್ಮ ವಿರೋಧಿಗಳ ಪ್ರಚೋದನೆಗೆ ಪ್ರತಿಕ್ರಿಯಿಸದ ಕಾರಣ ಶಿವಕುಮಾರ್ ಕಾರ್ಯಕರ್ತರ ಸಹಾನುಭೂತಿ ಗಳಿಸುತ್ತಿದ್ದಾರೆ ಎಂದು ಹಳೆಯ ಮೈಸೂರು ಪ್ರದೇಶದ ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದಾರೆ.
ಕಾರ್ಯಕರ್ತರು ಡಿಕೆಶಿ ಬಗ್ಗೆ ಸಹಾನುಭೂತಿ ಹೊಂದಿರಬಹುದು, ಆದರೆ ಶಾಸಕರ ಬೆಂಬಲವಿದ್ದರೇ ಮಾತ್ರ ಸಿಎಂಆಗಲು ಸಾಧ್ಯ. ಒಂದು ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಲು ಮನಸ್ಸು ಮಾಡಿದರೆ, ಯಾವುದೇ ಕಡೆಯಿಂದ ವಿರೋಧ ಇರುವುದಿಲ್ಲ ಎಂದು ಶಿವಕುಮಾರ್ ಅವರ ಬೆಂಬಲಿಗರಲ್ಲಿ ಒಬ್ಬರು ತಿಳಿಸಿದ್ದಾರೆ. ಶಿವಕುಮಾರ್ ಅವರಿಗೆ ಕೇವಲ ಎರಡರಿಂದ ಮೂರು ಶಾಸಕರ ಬೆಂಬಲವಿದೆ ಎಂದು ಸಿದ್ದರಾಮಯ್ಯ ಇತ್ತೀಚೆಗೆ ನವದೆಹಲಿಯಲ್ಲಿ ಹೇಳಿದ್ದರು.
ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಹೇಳಿಕೆಗಳ ಹೊರತಾಗಿಯೂ, ಶಿವಕುಮಾರ್ ಅವರು ತೋರಿಸಿದ ಸಂಯಮವನ್ನು ಎರಡನೇ ಮತ್ತು ಮೂರನೇ ಹಂತದ ನಾಯಕರು ಸಹ ಗಮನಿಸಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
ಕಳೆದ ವಾರ ಮೈಸೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರ ಹೆಸರನ್ನು ಬಳಸದಿರಲು ಸಿದ್ದರಾಮಯ್ಯ ನಿರ್ಧರಿಸಿದ್ದು ಪಕ್ಷದ ಕಾರ್ಯಕರ್ತರಲ್ಲಿ ಉರಿಸುಮುರಿಸು ಉಂಟಾಗಿತ್ತು. ಕಾರ್ಯಕ್ರಮದಲ್ಲಿದ್ದ ಸಿಎಂಗೆ ಶಿವಕುಮಾರ್ ಮಾಹಿತಿ ನೀಡಿದ ನಂತರವೇ ಹೊರಟುಹೋದ ಕಾರಣ ಸಿದ್ದರಾಮಯ್ಯ ಈ ರೀತಿ ಪ್ರತಿಕ್ರಿಯಿಸಬಾರದಿತ್ತು ಎಂದು ಹಲವರು ಭಾವಿಸಿದ್ದಾರೆ ಎಂದು ಅವರು ಹೇಳಿದರು.
ಟೆಂಪಲ್ ರನ್ ಮಾಡುತ್ತಿರುವ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂದು ಹಲವು ಧಾರ್ಮಿಕ ಮುಖಂಡರು ಸಹ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ.