ನವದೆಹಲಿ: ಮಹಾರಾಷ್ಟ್ರದಂತೆ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲೂ ಚುನಾವಣಾ ಆಯೋಗವು ಮತ ವಂಚನೆಗೆ ಅವಕಾಶ ನೀಡಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಸ್ಟ್ 4 ರಂದು ಬೆಂಗಳೂರಿನಲ್ಲಿ ಚುನಾವಣಾ ಆಯೋಗ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ಚುನಾವಣಾ ಆಯೋಗದ ವಿರುದ್ಧ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಆಗಸ್ಟ್ 4 ರಂದು ಬೆಂಗಳೂರಿನಲ್ಲಿ ಪಾದಯಾತ್ರೆ ನಡೆಸಲಿದೆ.
ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸಲಾದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ನಗರದಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯವರೆಗೆ ಈ ಪಾದಯಾತ್ರೆ ನಡೆಯಲಿದೆ.
ರಾಹುಲ್ ಗಾಂಧಿ ಅವರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಹಿರಿಯ ನಾಯಕರು, ಸಚಿವರು ಮತ್ತು ಶಾಸಕರು ಭಾಗವಹಿಸಲಿದ್ದಾರೆ.
ಕರ್ನಾಟಕದ ಒಂದು ಸ್ಥಾನದಲ್ಲಿ ಚುನಾವಣಾ ಆಯೋಗವು ವಂಚನೆಗೆ ಅವಕಾಶ ನೀಡಿದೆ ಎಂಬುದಕ್ಕೆ ನಮ್ಮ ಬಳಿ "ಶೇಕಡಾ 100 ರಷ್ಟು ದೃಢವಾದ ಪುರಾವೆ" ಇದೆ ಎಂದು ರಾಹುಲ್ ಗಾಂಧಿ ಇತ್ತೀಚಿಗೆ ಹೇಳಿದ್ದರು.