ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರಗಳ ಕೊಡುಗೆಯೇ ಹೆಚ್ಚು. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ 1 ಲಕ್ಷ ಕೋಟಿ ಮೊತ್ತದ ದೊಡ್ಡ ಯೋಜನೆಗಳನ್ನು ಹಮ್ಮಿಕೊಂಡಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಕಳೆದ 20 ವರ್ಷಗಳಲ್ಲಿ ಬೆಂಗಳೂರು ಜನತೆ 70 ಲಕ್ಷದಿಂದ 1.50 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿಗೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 1 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಿದ್ದೇವೆ.
ನಿಮ್ಮ ಕ್ಷೇತ್ರದಲ್ಲಿ ಹಾದು ಹೋಗುವ ನೆಲಮಂಗಲ ಮೇಲ್ಸೇತುವೆ ಬಿಜೆಪಿಯವರು ಮಾಡಿದ್ದಲ್ಲ, ಕೃಷ್ಣ ಭೈರೇಗೌಡ ಅವರ ಕ್ಷೇತ್ರದಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆ, ಹೊಸೂರು ರಸ್ತೆಯಲ್ಲಿರುವ ಮೇಲ್ಸೇತುವೆ, ಕೋಲಾರಕ್ಕೆ ಡಬಲ್ ರೋಡ್ ಮಾಡಿದ್ದು ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ. ಬೆಂಗಳೂರಿನಲ್ಲಿ ಇಂತಹ ಯಾವುದೇ ಕಾರ್ಯಕ್ರಮವಿದ್ದರೂ ಅದು ಕಾಂಗ್ರೆಸ್ ಸರ್ಕಾರದ ಕೊಡುಗೆಯೇ ವಿನಃ ಬಿಜೆಪಿ ಸರ್ಕಾರವಲ್ಲ" ಎಂದು ತಿಳಿಸಿದರು.
"ಬೆಂಗಳೂರು ಬೆಳೆಯುತ್ತಿದೆ. ಹೀಗಾಗಿ ನಾವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿದ್ದೇವೆ. ಇದರಲ್ಲಿ ಎಷ್ಟು ಪಾಲಿಕೆ ಮಾಡಬೇಕು ಎಂದು ಚರ್ಚೆ ಮಾಡಲು ಸಚಿವರು ಹಾಗೂ ಶಾಸಕರ ಸಭೆ ಮಾಡಿದ್ದೇನೆ. ಇನ್ನೊಂದು ವಾರದಲ್ಲಿ ಮತ್ತೊಂದು ಸಭೆ ಮಾಡಿ ಅಂತಿಮ ತೀರ್ಮಾನ ಮಾಡಲಾಗುವುದು. ಪಾಲಿಕೆ ರಚಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಮಾಡುತ್ತೇವೆ. ಹೊಸ ಪಾಲಿಕೆ ಸದಸ್ಯರು ಆಯ್ಕೆಯಾಗಬೇಕು.
ಮುಂದೆ ದಾಸರಹಳ್ಳಿಯಲ್ಲಿ ಶಾಸಕ ಹಾಗೂ ಕಾರ್ಪೊರೇಟರ್ ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಎಂಬ ನಂಬಿಕೆ ಇದೆ" ಎಂದು ತಿಳಿಸಿದರು. "ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಲು ಇತ್ತೀಚೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದೆವು. ಅದರಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದವಾಗಿವೆ" ಎಂದರು.
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಶಾಸಕ ಮಂಜುನಾಥ್ ಗೆ ಎಲ್ಲಾ ರೀತಿ ಹೇಳಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ, ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳಿದ್ದೆ. ಮಂಜಣ್ಣ ನನ್ನ ಮಾತು ಕೇಳಿದ್ದರೆ, ನನ್ನ ಹಾಗೂ ಕೃಷ್ಣ ಭೈರೇಗೌಡ ಅವರ ಮಧ್ಯೆ ವಿಧಾನಸೌಧದಲ್ಲಿ ಕೂರುತ್ತಿದ್ದರು. ಮಂಜಣ್ಣ ಇಲ್ಲಿ ಶಾಸಕರಾಗಿ ಗೆದ್ದಿದ್ದು, ತನ್ನ ಸಾಮರ್ಥ್ಯದ ಮೇಲೆ ಹೊರತು ಜೆಡಿಎಸ್ ಪಕ್ಷದಿಂದ ಅಲ್ಲ ಎಂದರು.
ಈಗ ಆಗಿಹೋಗಿರುವುದನ್ನು ಬಿಟ್ಟು, ಮುಂಬರುವ 2028ರ ಚುನಾವಣೆಯಲ್ಲಿ ನೀವು ಮಂಜಣ್ಣ ಅವರನ್ನು ವಿಧಾನ ಸೌಧದಲ್ಲಿ ಕೂರಿಸಬೇಕು. ನಮ್ಮ ಸರ್ಕಾರ ಈ ದೇಶಕ್ಕೆ ಮಾದರಿ. ಬಿಜೆಪಿ ಭಾವನೆ ಮೇಲೆ ರಾಜಕೀಯ ಮಾಡಿದರೆ, ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ.
ನಮಗೆ ನಿಮ್ಮ ಬದುಕು ಮುಖ್ಯ. ನಿಮಗೆ ಪ್ರತಿ ತಿಂಗಳು ಕನಿಷ್ಠ 5 ಸಾವಿರ ಉಳಿತಾಯ ಆದರೆ ನಿಮಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ನಾವು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು. ಬೆಲೆ ಏರಿಕೆ ಸಮಸ್ಯೆಯಿಂದ ಜನರನ್ನು ರಕ್ಷಣೆ ಮಾಡಲಾಗಿದೆ" ಎಂದು ವಿವರಿಸಿದರು.
"ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಾಲ್ಕು ವರ್ಷ ಅಧಿಕಾರದಲ್ಲಿತ್ತು. ಬಿಜೆಪಿ ಇಂತಹ ಒಂದೇ ಒಂದು ಯೋಜನೆಯನ್ನು ನೀಡಲಿಲ್ಲ. ನಿಮ್ಮ ಶಾಸಕರು ಕೇವಲ ಬರಿ ಮಾತಲ್ಲೇ ನಿಮಗೆ ಮರಳು ಮಾಡುತ್ತಿದ್ದಾರೆ. ಖಾಲಿ ಡಬ್ಬಾದಂತೆ ಕೇವಲ ಸದ್ದು ಮಾತ್ರ ಮಾಡುತ್ತಾರೆ. ಮಂಜಣ್ಣ ಇಲ್ಲಿ ಸೋತಿದ್ದರು.
8 ಸಾವಿರ ಕುಟುಂಬಗಳ ಆಸ್ತಿಯನ್ನು ಇ ಖಾತಾ ಮಾಡುಸಿದ್ದಾರೆ. ನಮ್ಮ ಪಾಲಿಗೆ ಇಲ್ಲಿ ಮಂಜುನಾಥ್ ಅವರೇ ಶಾಸಕರು. ಅವರು ಹೇಳಿದಂತೆ ನಾವು ಕೇಳುತ್ತೇವೆ. ನಿಮ್ಮ ಆಸ್ತಿ ದಾಖಲೆ ಸರಿಪಡಿಸಿ, ಅದನ್ನು ನಿಮ್ಮ ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ" ಎಂದರು.
"ಕಾಂಗ್ರೆಸ್ ಪಕ್ಷ ಸದಾ ಜನರ ಬದುಕಿನ ಬಗ್ಗೆ ಆಲೋಚನೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಅದರದೇ ಇತಿಹಾಸವಿದೆ. ಇತ್ತೀಚೆಗೆ ದೇಶದಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಜನ ಇಂದಿರಾ ಗಾಂಧಿ ಅವರನ್ನು ಸ್ಮರಿಸುತ್ತಿದ್ದರು. ಇಂದಿರಾ ಗಾಂಧಿ ಇದ್ದಿದ್ದರೆ ದೇಶವನ್ನು ಹೇಗೆ ಮುನ್ನಡೆಸುತ್ತಿದ್ದರು ಎಂದು ಜನ ಆಲೋಚನೆ ಮಾಡಿದರು" ಎಂದರು.
"ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ಬಿಟ್ಟರು. ಸೋನಿಯಾ ಗಾಂಧಿ ಅವರು ಈ ದೇಶಕ್ಕಾಗಿ ಪ್ರಧಾನಮಂತ್ರಿ ಸ್ಥಾನವನ್ನು ಎರಡು ಬಾರಿ ತ್ಯಾಗ ಮಾಡಿದರು. ಇದು ಕಾಂಗ್ರೆಸ್ ಪಕ್ಷದ ಶಕ್ತಿ. ಬಿಜೆಪಿಯಲ್ಲಿ ಇಂತಹ ತ್ಯಾಗ ಮಾಡಿರುವವರು ಒಬ್ಬರಾದರೂ ಇದ್ದಾರಾ?" ಎಂದು ಪ್ರಶ್ನಿಸಿದರು.