ದಾವಣಗೆರೆ: ಈ ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಊಹಾಪೋಹಗಳ ನಡುವೆ ಡಿಸೆಂಬರ್ ವೇಳೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಸವರಾಜು ವಿ.ಶಿವಗಂಗಾ ಅವರು ಭಾನುವಾರ ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಜಯಭೇರಿ ಬಾರಿಸುವ ನಿರೀಕ್ಷೆ ಇದ್ದು, ಡಿಸೆಂಬರ್‌ನಿಂದ ಮುಂದಿನ ಏಳೂವರೆ ವರ್ಷಗಳ ಕಾಲ ಶಿವಕುಮಾರ್ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಡಿಸೆಂಬರ್ ನೊಳಗೆ ಇದು ನಡೆಯುತ್ತಿದೆ. ಬರೆದಿಟ್ಟುಕೊಳ್ಳಿ. ಬೇಕಾದರೆ ಇದನ್ನು ರಕ್ತದಲ್ಲಿ ಬರೆದು ಕೊಡುತ್ತೇನೆ, ಡಿಸೆಂಬರ್ ವೇಳೆಗೆ ಅವರು ಸಿಎಂ ಆಗುತ್ತಾರೆ. ಅವರು ಡಿಸೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡರೆ, ಮುಂದಿನ ಐದು ವರ್ಷಗಳ ಅವಧಿಯನ್ನು ಒಳಗೊಂಡಂತೆ ಆಡಳಿತವನ್ನು ನಡೆಸುತ್ತಾರೆ, ಆದ್ದರಿಂದ ಅವರು 7.5 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದರು.
ಅಧಿಕಾರ ಹಂಚಿಕೆ ಒಪ್ಪಂದ ಆಗಿದೆಯೇ ಎಂಬುದನ್ನು ಸ್ಪಷ್ಟವಾಗಿ ಖಚಿತಪಡಿಸದ ಚನ್ನಗಿರಿ ಶಾಸಕ, ಶಿವಕುಮಾರ್ ಅವರು ಪಕ್ಷಕ್ಕೆ ನೀಡಿರುವ ಕೊಡುಗೆಗಳನ್ನು ಒತ್ತಿಹೇಳಿದರು.ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಎರಡರಲ್ಲೂ ಪಕ್ಷದ ಸ್ಥಾನವನ್ನು ಹೆಚ್ಚಿಸಿದ ಕೀರ್ತಿ ಶಿವಕುಮಾರ್ ಅವರಿಗೆ ಸಲ್ಲುತ್ತದೆ ಎಂದರು.
ಡಿಕೆ ಶಿವಕುಮಾರ್ ಇತಿಹಾಸನಿರ್ಮಿಸಿದ್ದಾರೆ. ಪಕ್ಷವನ್ನು ಸಂಘಟಿಸಿದ್ದಾರೆ, ತಮ್ಮ ಸಂಪನ್ಮೂಲ ಹೂಡಿಕೆ ಮಾಡಿದ್ದಾರೆ. ಅದಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಅವರ ಮೌನ ಅಥವಾ ಶಾಂತತೆಯನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬಾರದು. ಹೈಕಮಾಂಡ್‌ಗೆ ಎಲ್ಲದರ ಬಗ್ಗೆ ತಿಳಿದಿದೆ ಮತ್ತು ನನಗೆ ನೂರಕ್ಕೆ ನೂರು ಖಚಿತವಾಗಿದೆ, ಅವರು ಡಿಸೆಂಬರ್‌ನಲ್ಲಿ ಸಿಎಂ ಆಗುತ್ತಾರೆ ಎಂದು ಅವರು ಹೇಳಿದರು.