ಬೆಂಗಳೂರು: ರಾಜ್ಯ ಸರ್ಕಾರ SCP-TSP ಅನುದಾನ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು ಮತ್ತು ಇದು ದಲಿತ ವಿರೋಧಿ ಸರ್ಕಾರ ಎಂದು ಟೀಕಿಸಿದೆ.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, “ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೊಳಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ನಿಗದಿಪಡಿಸಿದ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಮತ್ತು ದುಷ್ಟ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಬೇಕಾಗಿದೆ ” ಎಂದರು.
"ಭ್ರಷ್ಟ ಮತ್ತು ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು. ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಮತ್ತು ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ನಾನು ಕರೆ ನೀಡುತ್ತೇನೆ. ನಾಳೆ ಬೆಳಗ್ಗೆ ಇದೇ ಸ್ಥಳದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಮತ್ತು ಎಲ್ಲರೂ ಭಾಗವಹಿಸುವಂತೆ ನಾನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.
ಬಿಜೆಪಿ ಸರ್ಕಾರ, ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾದ ಹಣವನ್ನು ಎಂದಿಗೂ ದುರುಪಯೋಗಪಡಿಸಿಕೊಂಡಿಲ್ಲ ಎಂದು ಅವರು ಪ್ರತಿಪಾದಿಸಿದರು.
ಸರ್ಕಾರದ ದಲಿತ ವಿರೋಧಿ ನೀತಿಗಳ ವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಡುತ್ತಿದೆ. ಬಿಜೆಪಿ ಯಾವಾಗಲೂ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ಸಮುದಾಯಗಳ ಪರವಾಗಿ ನಿಂತಿದೆ ಎಂದು ವಿಜಯೇಂದ್ರ ಹೇಳಿದರು.
ಇದೇ ವೇಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ವಿಜಯೇಂದ್ರ ಒತ್ತಿ ಹೇಳಿದರು.
ಮುಂಬರುವ ಬಿಬಿಎಂಪಿ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳು ಪಕ್ಷದ ಕಾರ್ಯಕರ್ತರಿಗೆ ಚೈತನ್ಯ ತುಂಬುತ್ತವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಹೀಗಾಗಿ ದಲಿತ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆ. 'ಸಿದ್ದಣ್ಣ, ಲೂಟಿ ಗ್ಯಾರಂಟಿ ಅಣ್ಣ' ಎಂಬಂತೆ ವರ್ತಿಸುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್, ಶಾಸಕರಾದ ಎಸ್.ಆರ್. ವಿಶ್ವನಾಥ್, ಬೈರತಿ ಬಸವರಾಜ್, ಮಾನಪ್ಪ ವಜ್ಜಲ್, ಉದಯ್ ಗರುಡಾಚಾರ್, ರಘು, ಭಾಗೀರಥಿ ಮರುಳಸಿದ್ದಯ್ಯ, ಮಾಜಿ ಶಾಸಕ ಹಾಲಪ್ಪ, ಶರಣು ತಳ್ಳಿಕೇರಿ, ಉಮೇಶ್ ಶೆಟ್ಟಿ, ರವೀಂದ್ರ, ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಹರೀಶ್, ರಾಮಮೂರ್ತಿ, ಮತ್ತು ಸಪ್ತಗಿರಿ ಗೌಡ ಸೇರಿದಂತೆ ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.