ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2025-26ರ ಬಜೆಟ್ ರೈತರು, ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ನಿರಾಸೆ ಮೂಡಿಸಿದೆ ವಿಧಾನ ಪರಿಷತ್ತಿನ ಬಿಜೆಪಿ ಮುಖ್ಯ ಸಚೇತಕ ಎನ್. ರವಿ ಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಕೃಷ್ಣಾ ಮೇಲ್ದಂಡೆ ಯೋಜನೆ, ತುಂಗಭದ್ರಾ, ಭೀಮಾ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ಮುಖ್ಯಮಂತ್ರಿಗಳು ಹಣ ಮಂಜೂರು ಮಾಡಿಲ್ಲ. ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಕಿಡಿಕಾರಿದರು.
ಸರ್ಕಾರ ಈ ಹಿಂದೆ ಎಸ್‌ಸಿಎಸ್‌ಟಿ/ಟಿಪಿಎಸ್ ಅನುದಾನವನ್ನು ಇತರ ಉದ್ದೇಶಗಳಿಗೆ ಬಳಸಬಾರದು ಎಂದು ಕಾನೂನನ್ನು ಜಾರಿಗೆ ತಂದಿತ್ತು. ಆದರೆ ಎಸ್‌ಸಿ-ಎಸ್‌ಟಿಗಳಿಗೆ ಮೀಸಲಿಟ್ಟಿದ್ದ 41,000 ಕೋಟಿ ರೂ.ಗಳಲ್ಲಿ 13,913 ಕೋಟಿ ರೂ.ಗಳನ್ನು 5 ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಕಾಯ್ದೆಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿದರು.
2023-24ರಲ್ಲಿ 39,000 ಕೋಟಿ ರೂ.ಗಳನ್ನು ಮತ್ತು 2024-25ರಲ್ಲಿ 11,144 ಕೋಟಿ ರೂ.ಗಳನ್ನು ವಿಭಿನ್ನ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗಿದೆ. ಈ ಮೂಲಕ ಸರ್ಕಾರ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಇದರ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿದೆ. ವಿಧಾನಸಭೆಯಲ್ಲಿ ಅಧಿವೇಶನ ಆರಂಭವಾದಾಗ ಈ ವಿಚಾರವನ್ನು ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.