ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಕೆಪಿಎಸ್ ಸಿ ಹಗರಣದ ಬಗ್ಗೆ ಮಾತನಾಡಲು ಹೋಗಿ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಹಗರಣ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡ ಪ್ರಸಂಗ ನಡೆಯಿತು.
ಸದನದಲ್ಲಿ ಕಲಾಪ ನಡೆಯುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ಕೆಪಿಎಸ್ ಸಿ ಹಗರಣದ ಬಗ್ಗೆ ಮಾತನಾಡಲು ಆರಂಭಿಸಿದ್ದರು. ಈ ವೇಳೆ ಕರ್ನಾಟಕ ಲೋಕಸೇವಾ ಆಯೋಗ ಕೆಪಿಎಸ್ ಸಿ ಎನ್ನುವ ಬದಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕೆಪಿಸಿಸಿ ಎಂದು ತಪ್ಪಾಗಿ ಹೇಳಿದರು.
ಇದನ್ನೇ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯರನ್ನು ವಿಪಕ್ಷ ಬಿಜೆಪಿ ಸದಸ್ಯರು ಕಾಲೆಳೆದರು. ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕೆಂದುಕೊಂಡಿದ್ದಾರೆ. ಅದನ್ನೇ ತಲೆಯಲ್ಲಿಟ್ಟುಕೊಂಡಿರುವ ಕಾರಣ ಕೆಪಿಸಿಸಿ ಎಂದೇ ಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಲೆಳೆದರು. ಈ ವೇಳೆ ಕೊಂಚ ಗದ್ದಲವೇರ್ಪಟ್ಟಿತು.
ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್ ಏನೋ ಬಾಯ್ತಪ್ಪಿ ಒಂದು ಅಕ್ಷರ ತಪ್ಪಾಯ್ತು. ಅದನ್ನೇ ಇಟ್ಟುಕೊಂಡು ಚರ್ಚೆ ಮಾಡಬೇಕಾ? ಮೊದಲೇ ಸಮಯವಿಲ್ಲ, ನೀವು ಮುಂದುವರಿಸಿ ಎಂದು ಸಿಎಂಗೆ ಮಾತು ಮುಂದುವರಿಸಲು ಸೂಚಿಸಿದರು.
ತಕ್ಷಣ ಸಿದ್ದರಾಮಯ್ಯ ತಿರುಗೇಟು ನೀಡಿದರು. ವಿಜಯೇಂದ್ರ ಮತ್ತು ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಗುಂಪುಗಾರಿಕೆಯನ್ನು ಉಲ್ಲೇಖಿಸಿ, ಶಿವಕುಮಾರ್ ಅವರನ್ನು ನಾವು ಕೆಪಿಸಿಸಿ ಅಧ್ಯಕ್ಷ ಎಂದು ಒಪ್ಪಿಕೊಳ್ಳುತ್ತೇವೆ, ಹಾಗೆಯೇ ನೀವು ವಿಜಯೇಂದ್ರ ಅವರನ್ನು ನಿಮ್ಮ ಅಧ್ಯಕ್ಷ ಎಂದು ಒಪ್ಪಿಕೊಳ್ಳುವಿರಾ ಎಂದು ಸಿದ್ದರಾಮಯ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪ್ರಶ್ನಿಸಿದರು.