ಬೆಂಗಳೂರು:ಕಳ್ಳವೋಟಿನಿಂದ ಗೆದ್ದು ಬಂದಿಲ್ಲ. ಸದಸ್ಯರಿಂದ ಆರಿಸಿ ಬಂದಿದ್ದೇನೆಂಬ ಬಿಕೆ.ಹರಿಪ್ರಸಾದ್ ಅವರ ಹೇಳಿಕೆ ವಿಧಾನಪರಿಷತ್ ನಲ್ಲಿ ಗುರುವಾರ ಭಾರೀ ಸದ್ದು ಮಾಡಿತು.
ಬುಧವಾರ ನಡೆದಿದ್ದ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸರ್ಕಾರ ಅಲ್ಪ ಸಂಖ್ಯಾತರನ್ನು ಒಲೈಸಲು 2 ಕೋಟಿ ರೂ. ವರೆಗಿನ ಎಲ್ಲಾ ಬಗೆಯ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲು ಕಲ್ಪಿಸಲು ಹೊರಟಿದೆ. ಇದು ಸಮಾಜದ ಎಲ್ಲಾ ವರ್ಗಗಳ ಮೇಲೆ ಪರಿಣಾಮ ಬೀರಲಿದೆ. ಸರ್ಕಾರದ ಬಜೆಟ್ ಹಲಾಲ್ ಬಜೆಟ್‌ಎಂಬ ಭಾವನೆ ವ್ಯಕ್ತವಾಗಿದೆ. ಆದರೆ ನಾನು ಆ ರೀತಿ ಹೇಳುವುದಿಲ್ಲ ಎಂದು ಟೀಕಿಸಿದ್ದರು.
ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಅದಕ್ಕೆ ಆಕ್ಷೇಪ ಎತ್ತಿ, ಕೇವಲ ಅಲ್ಪ ಸಂಖ್ಯಾತರಿಗೆ ಮಾತ್ರ ನೀಡುತ್ತಿಲ್ಲ, ಹಿಂದುಳಿದವರು, ಎಸ್ಸಿ ಎಸ್ಟಿಗೂ ಗುತ್ತಿಗೆಯಲ್ಲೂಮೀಸಲು ನೀಡಲಾಗುತ್ತಿದೆ. ಕೇವಲ ಒಂದು ಸಮುದಾಯವನ್ನು ಹೆಸರಿಸಿ ಆರೋಪ ಮಾಡುವುದು ಸರಿಯಲ್ಲ, ತಮಗೂ ಮಾತನಾಡಲು ಆ ಕುರಿತು ಮಾತನಾಡಲು ಅವಕಾಶ ನೀಡಬೇಕೆಂದು ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿಗೆ ಮನವಿ ಮಾಡಿದ್ದರು. ಆದರೆ ಉಪಸಭಾಪತಿ ಕೆ.ಎಂ.ಪ್ರಾಣೇಶ್, ಕಾಂಗ್ರೆಸ್ ಸದಸ್ಯರಿಗೆ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ.
ಈ ವಿಷಯ ಗುರುವಾರ ಪ್ರಸ್ತಾಪಿಸಿದ ಪ್ರಸ್ತಾಪಿಸಿದ ಬಿ. ಕೆ. ಹರಿಪ್ರಸಾದ್ ಉಪಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೋರಿದರಲ್ಲದೆ, ತಾವು ಕಳ್ಳವೋಟಿನಿಂದ ಗೆದ್ದು ಬಂದಿಲ್ಲ, ಸದಸ್ಯರಿಂದ ಆರಿಸಿ ಬಂದಿದ್ದೇನೆ. ಇದ್ದುದನ್ನು ಇದ್ದ ಹಾಗೆ ಹೇಳಿದ್ದೇನೆ ಎಂದು ಹೇಳಿದರು.
ಮಧ್ಯಾಹ್ನ ನಂತರ ಸಭಾಪತಿ ಅವರು ತಮ್ಮ ತೀರ್ಮಾನ ಪ್ರಕಟಿಸಿ ಹರಿಪ್ರಸಾದ್ ಮನವಿಯನ್ನು ತಿರಸ್ಕರಿಸುವುದಾಗಿ ಹೇಳಿದರು.
ಬಳಿಕ ಬಿಜೆಪಿಯ ಕೇಶವಪ್ರಸಾದ್ ಮತ್ತು ಕೆ. ಎಸ್. ನವೀನ್, ಕಳ್ಳವೋಟು ಪದ ಕಡತದಿಂದ ತೆಗೆಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಭಾಪತಿಗಳು, ಈ ಬಗ್ಗೆ ಕಡತವನ್ನು ಪರಿಶೀಲಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಳಿಕ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಹರಿಪ್ರಸಾದ್ ಅವರು, ಕಳ್ಳೋಟು ಎಂಬ ಪದ ನಾನು ಹೇಳಿದ್ದಲ್ಲ, ಹಿಂದೆ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಹನುಮಂತೇಗೌಡ ಎಂಬುವರು ತಮ್ಮ ಪುಸ್ತಕದಲ್ಲಿ ಬರೆದಿದ್ದನ್ನು ಹೇಳಿದ್ದೇನೆ. ಆ ಕೃತಿ ಇದೀಗ ಸಾರ್ವಜನಿಕವಾಗಿ ಎಲ್ಲೆಡೆ ಲಭ್ಯವಿದೆ. ಅದರಲ್ಲಿ ಆರ್‌ಎಸ್‌ಎಸ್ ನಲ್ಲಿ ಏನೇನು ನಡೀತಿದೆ ಎಂಬುದನ್ನು ವಿವರಿಸಲಾಗಿದೆ. ಬೇಕಿದ್ದರೆ ಎಲ್ಲಾ ಸದಸ್ಯರಿಗೆ ಆ ಪುಸ್ತಕ ಖರೀದಿ ಮಾಡಿ ಕೊಡುತ್ತೇನೆ ಎಂದರು. ಅದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ಎತ್ತಿದರು. ಸಭಾಪತಿ ಆ ಪದದ ಬಗ್ಗೆ ಪರಿಶೀಲಿಸಿ ಆದೇಶ ನೀಡುವುದಾಗಿ ಹೇಳಿದರು.
ಈ ವೇಳೆ ಮಾತನಾಡಿದ ಉಪಸಭಾಪತಿ ಕೆ.ಎಂ.ಪ್ರಾಣೇಶ್, ನಾನು ಸಭಾಪತಿಯ ಪೀಠದಲ್ಲಿ ಕುಳಿತಾಗ ಪಕ್ಷಾತೀತವಾಗಿಯೇ ನಡೆದುಕೊಂಡಿದ್ದೇನೆ. ನಿಯಮಗಳನ್ನು ಓದಿಕೊಂಡಿದ್ದೇನೆ. ಸಭಾಪತಿ ಸಲಹೆ ಪಡೆದುಕೊಂಡೇ ನಿರ್ಧಾರ ತೆಗೆದುಕೊಂಡಿದ್ದೇನೆ. ಆ ಪೀಠದ ಗೌರವಕ್ಕೆ ಚ್ಯುತಿ ಬರುವಂತೆ ಎಂದೂ ನಡೆದುಕೊಂಡಿಲ್ಲ. ‘ಕಳ್ಳವೋಟಿನಿಂದ ಗೆದ್ದು ಬಂದಿಲ್ಲ’ ಎಂಬ ಮಾತು ಸದನದ ಗೌರವಕ್ಕೆ ಧಕ್ಕೆ ತರುವಂತದ್ದು. ಯಾರು ಹೇಗೆ ಗೆದ್ದುಬಂದಿದ್ದಾರೆ ಎಂಬುದನ್ನು ಪರಿಶೀಲಿಸಲು ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್ ಇದೆ. ಅಲ್ಲಿ ಸಾಬೀತಾದರೆ ಮಾತ್ರ ಅಂತಹ ಮಾತು ಸಮಂಜಸ. ಸದಸ್ಯರು ಘನತೆ ಗೌರವದಿಂದ ನಡೆದುಕೊಳ್ಳಬೇಕು. ಆರೋಪಗಳನ್ನು ಮಾಡುವಾಗ ಪದಗಳನ್ನು ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಸದನದ ನಿಯಮಗಳನ್ನು ಅರಿತುಕೊಂಡು ಮಾತನಾಡಬೇಕು ಎಂದು ಹೇಳಿದರು.