ಹೊಸಪೇಟೆ: ಸರ್ಕಾರ ರಚನೆಯ ಸಮಯದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ) ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತ್ತು. ಆ ಹುದ್ದೆಗೆ ಯಾವುದೇ ಕಾಲಮಿತಿಯ ಷರತ್ತನ್ನು ವಿಧಿಸಲಾಗಿರಲಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯ ಸಮಯದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ) ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತ್ತು. ಯಾವುದೇ ಷರತ್ತನ್ನೂ ವಿಧಿಸಲಾಗಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಸಿಎಲ್‌ಪಿ ಸಭೆಯಲ್ಲಿ, ನಾವೆಲ್ಲರೂ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದೇವೆಂದು ಹೇಳಿದರು.
ಅಧಿಕಾರ ಒಪ್ಪಂದ ಕುರಿತ ಊಹಾಪೋಹಗಳಿಗೆ ಉತ್ತರಿಸಿರುವ ಅವರು, ಸಿಎಲ್‌ಪಿ ಸಭೆಯ ಹೊರಗೆ ಚರ್ಚಿಸಲಾದ ಅಂತಹ ಯಾವುದೇ ಒಪ್ಪಂದಗಳ ಬಗ್ಗೆ ನನಗೆ ತಿಳಿದಿಲ್ಲ. ಹಿರಿಯ ನಾಯಕರು ಇದರ ಬಗ್ಗೆ ಮಾತನಾಡಿದ್ದರೆ, ಅವರು ಸ್ಪಷ್ಟಪಡಿಸುತ್ತಾರೆ. ನಮಗೆ ತಿಳಿದಂತೆ ಸಿಎಂ ಮತ್ತು ಉಪ ಮುಖ್ಯಮಂತ್ರಿ ಇಬ್ಬರಲ್ಲೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಮಾತನ್ನು ಅವರೂ ಹೇಳಿದ್ದಾರೆಂದು ಹೇಳಿದರು.
ಇದೇ ವೇಳೆ ಬಿಜೆಪಿಯ ಆರೋಪಗಳು ಆಧಾರರಹಿತವೆಂದು ಕರೆದ ಅವರು, ನಮ್ಮಲ್ಲಿ ಯಾವುದೇ ಕಾಂಗ್ರೆಸ್ ಶಾಸಕರು ಮಾರಾಟಕ್ಕಿಲ್ಲ. ಬಿಜೆಪಿಯ ಏಕೈಕ ಕೆಲಸ ವದಂತಿಗಳನ್ನು ಹರಡುವುದು ಮತ್ತು ತೊಂದರೆ ಉಂಟುಮಾಡುವುದು ಎಂದು ಟೀಕಿಸಿದರು.
ಸೋನಿಯಾ ಗಾಂಧಿ ಅವರು ಪಕ್ಷದ ಚುಕ್ಕಾಣಿ ಹಿಡಿಯದೆ ಇದ್ದಿದ್ದರೆ ಬಿಜೆಪಿಯವರು ಹೇಳುತ್ತಿರುವಂತೆ ದೇಶ ಎಂದೋ ಕಾಂಗ್ರೆಸ್ ಮುಕ್ತ ಆಗಿಬಿಟ್ಟಿರುತ್ತಿತ್ತು ಎಂದು ಕೆ.ಜೆ.ಜಾರ್ಜ್ ಅವರು ಇದಕ್ಕೂ ಮೊದಲು ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.