ಬೆಂಗಳೂರು/ಬೆಳಗಾವಿ: ರಾಜ್ಯ ಸರ್ಕಾರ ಈಗ ಕುಂಭಕರ್ಣ ನಿದ್ರೆಯಲ್ಲಿದೆ. ಇದಕ್ಕೆ ಮಳೆ ಬರುವುದು ಗೊತ್ತಾಗುವುದಿಲ್ಲ. ಬರ ಪರಿಸ್ಥಿತಿ ಅರಿವು ಇಲ್ಲ. ಜನರ ಕಷ್ಟ ಅರಿಯದ ದುಷ್ಟ ಸರ್ಕಾರ ಇದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನೆರೆ ಮತ್ತು ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರು ದಸರಾ ಆಚರಿಸಲಾಗದೆ ಬೀದಿಗೆ ಬಂದಿದ್ದಾರೆ. ಆದರೆ, ಸರ್ಕಾರಕ್ಕೆ ಸಂತ್ರಸ್ತರ ಸಂಕಷ್ಟಕ್ಕಿಂತ, ಜಾತಿ ಒಂದೇ ಬೇಕಾಗಿದೆ' ಎಂದು ದೂರಿದರು. ರಾಜ್ಯ ಸರ್ಕಾರ ಈಗ ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಈಗ ಬೆಂಕಿ ಸಿದ್ದರಾಮಯ್ಯ ಆಗಿದ್ದಾರೆ' ಎಂದು ಆರೋಪಿಸಿದರು.
ಮಲೆನಾಡು ಭಾಗದಲ್ಲಿ ಕಳೆದೊಂದು ತಿಂಗಳಿನಿಂದ ಗುಡ್ಡ ಕುಸಿತವಾಗಿದೆ. ರಸ್ತೆಗಳೆಲ್ಲ ಹಾಳಾಗಿವೆ. ನೆರೆ ಹಾನಿ ಪರಿಶೀಲನೆಗೆ ಬಿಜೆಪಿಯವರು ಪ್ರವಾಸ ಘೋಷಿಸಿದ ನಂತರ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ. ಕೇಂದ್ರ ಸರ್ಕಾರ ನೆರವಿಗೆ ಬರಬೇಕು ಎಂಬ ಮಾಮೂಲಿ ಡೈಲಾಗ್ ಹೊಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನೂ ಬೆಳಗಾವಿ ಮಳೆಹಾನಿ ಪ್ರದೇಶಯಲ್ಲಿ ಮಾತನಾಡಿದ ಆರ್. ಅಶೋಕ, ಸಿದ್ದರಾಮಯ್ಯ ಈಗ ಔಟ್ ಗೋಯಿಂಗ್ ಸಿ.ಎಂ ಆಗಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಕ್ರಾಂತಿಯಾಗುವುದು ನಿಶ್ಚಿತ' ಎಂದು ಹೇಳಿದರು. 'ರಾಜ್ಯದಲ್ಲಿ ನವೆಂಬರ್ ನಲ್ಲಿ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದ ಸಚಿವರಾಗಿದ್ದ ರಾಜಣ್ಣ ಈಗ ಮನೆಗೆ ಹೋಗಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲೂ ಒಪ್ಪಂದ ಆಗಿರುವುದು ನಿಜ. ಅಧಿಕಾರಕ್ಕಾಗಿ ಈಗ ಜಗಳವೂ ಆರಂಭವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಡುವ ಜಾಯಮಾನದವರಲ್ಲ.
ಇನ್ನೂ ಡಿ.ಕೆ.ಶಿವಕುಮಾರ್ ಹಠ ಬಿಡುವುದಿಲ್ಲ' ಎಂದರು. ನಾವಂತೂ ಮೈತ್ರಿ ಸರ್ಕಾರ ರಚಿಸುವುದಿಲ್ಲ. ಆಪರೇಷನ್ ಕಮಲ ಮಾಡುವ ವಿಚಾರದಲ್ಲೂ ಇಲ್ಲ. ಆದರೆ, ಚುನಾವಾಣೆಗೆ ಹೋಗಲು ಸಿದ್ಧರಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು