ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಬಹುತೇಕ ಖಚಿತ ಆಗಿದೆಯೇ? ಈ ಅನುಮಾನ ಇದೀಗ ತೀವ್ರಗೊಂಡಿದೆ.
ಇದಕ್ಕೆ ಪೂರಕ ಎಂಬಂತೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.
ಯತೀಂದ್ರ ಅವರು ಸಚಿವ ಸತೀಶ್ ಜಾರಕಿಹೊಳಿ ಅವರತ್ತ ಬ್ಯಾಟ್ ಬೀಸಿದ್ದು, ಈ ಬೆಳವಣಿಗೆ ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ.
ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಯತೀಂದ್ರ ಅವರು, ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಅಂತಿಮ ಹಂತದಲ್ಲಿದ್ದಾರೆ. ಈ ಹಂತದಲ್ಲಿ ಅವರಿಗೆ ಬಲವಾದ ಸಿದ್ಧಾಂತ ಮತ್ತು ಪ್ರಗತಿಪರ ಮನಸ್ಥಿತಿಯನ್ನು ಹೊಂದಿರುವ ನಾಯಕನ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯ ಕುರಿತು ಸಾಕಷ್ಟು ಕುತೂಹಲಗಳು ಸೃಷ್ಟಿಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟರ್ ಗಳು ಹರಿದಾಡುತ್ತಿವೆ.
ಈತನ್ಮಧ್ಯೆ ರಾಜ್ಯ ಬಿಜೆಪಿ ಪ್ರತಿಕ್ರಿಯೆ ನೀಡಿ, ರಾಜಕೀಯ ಜೀವನದ ಕೊನೆಗಾಲದಲ್ಲೂ ಡಿಕೆಶಿಗೆ ಚೆಕ್‌ಮೇಟ್ ನೀಡಲು ಸಿದ್ದು ಟೀಮ್ ಮುಂದಾಗಿದೆ ಎಂದು ಹೇಳಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಪದತ್ಯಾಗಕ್ಕೆ ದಿನಗಣನೆ ಆರಂಭ. ನಮ್ಮ ಅಪ್ಪ ರಾಜಕೀಯ ಜೀವನದ ಕೊನೆಗಾಲದಲ್ಲಿ ಇದ್ದಾರೆ ಎನ್ನುತ್ತಾ, ಮುಂದಿನ ಉತ್ತರಾಧಿಕಾರಿ ಘೋಷಿಸಿದ ಸಿಎಂ ಸಿದ್ದರಾಮಯ್ಯ ಪುತ್ರ. ರಾಜಕೀಯ ಜೀವನದ ಕೊನೆಗಾಲದಲ್ಲೂ ಡಿಕೆಶಿಗೆ ಚೆಕ್‌ಮೇಟ್ ನೀಡಲು ಮುಂದಾದ ಸಿದ್ದು ಟೀಮ್ ಎಂದು ಹೇಳಿದೆ. ಟ್ವೀಟ್ ನಲ್ಲಿ ಯತೀಂದ್ರ ಅವರು ಹೇಳಿಕೆ ನೀಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದೆ.