ಬೆಂಗಳೂರು: ರಸ್ತೆಗುಂಡಿಗಳನ್ನು ಮುಚ್ಚಲು ಗಡುವು ನೀಡಲಾಗಿದೆ. ಮಳೆ ಬಂದಾಗ ರಸ್ತೆಗುಂಡಿ ಬೀಳುವುದು ಸಹಜ. ನಾವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಿಲ್ಲ. ಶಾಸಕರಿಗೆ ನೀಡಿರುವ ಅನುದಾನ ರಸ್ತೆ ರಿಪೇರಿಗಾಗಿ ಬಳಸುವಂತೆ ತಿಳಿಸಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಸ್ತೆ ಗುಂಡಿ ಮುಚ್ಚಲು ಗಡುವು ನೀಡಿದ್ದೇನೆ. ಹೊಣೆಗಾರಿಕೆ ನೀಡಿದ್ದೇನೆ. ನಿನ್ನೆ ರಾತ್ರಿ ಸುರಿದ ಮಳೆಗೆ ವಿಧಾನಸೌಧ ಸುತ್ತಮುತ್ತ ಹತ್ತಾರು ಗುಂಡಿ ಬಿದ್ದಿವೆ. ಇದು ಪ್ರಕೃತಿ. ಅದಕ್ಕೆ ತಕ್ಕಂತೆ ನಾವು ಕೆಲಸ ಮಾಡುತ್ತೇವೆ. ಯಾರೋ ನಾಲ್ಕು ಜನ ಟ್ವೀಟ್ ಮಾಡುತ್ತಾರೆ, ಮತ್ಯಾರೋ ರಾಜಕೀಯವಾಗಿ ಹೆಸರು ಬರುತ್ತದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಮಹಾರಾಷ್ಟ್ರ, ದೆಹಲಿಯಲ್ಲಿರುವ ರಸ್ತೆ ಗುಂಡಿ ನಾನು ತೋರಿಸುತ್ತೇನೆ ಬನ್ನಿ. ಬೇರೆ ಕಡೆ ರಸ್ತೆ ಗುಂಡಿ ಚರ್ಚೆಯಾಗದೆ ಬೆಂಗಳೂರು ವಿಚಾರದಲ್ಲಿ ಮಾತ್ರ ಯಾಕೆ ಚರ್ಚೆಯಾಗುತ್ತಿದೆ?" ಎಂದು ತಿಳಿಸಿದರು.
ರಾಜ್ಯದಲ್ಲಿ ಐಟಿ ಹಾಗೂ ಸ್ಟಾರ್ಟ್ ಅಪ್ ಕಂಪನಿಗಳನ್ನು ರಸ್ತೆ ಗುಂಡಿಗಳಿಂದ ಓಡಿಸುವ ಕೆಲಸವನ್ನು ಉಪಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, "ಸಂಸದರಾಗಿ, ಕೇಂದ್ರ ಸಚಿವರಾಗಿ ಬೆಂಗಳೂರು ನಗರಕ್ಕೆ ನಿಮ್ಮ ಕೊಡುಗೆ ಏನು? ಎಂದು ತಿಳಿಸಿ. ಯುಪಿಎ ಸರ್ಕಾರದಲ್ಲಿ ನೆಹರೂ ಅವರ ಹೆಸರಿನಲ್ಲಿ ಜೆಎನ್ ನರ್ಮ್ ಯೋಜನೆ ಮೂಲಕ ಅನೇಕ ಅನುದಾನ ನೀಡಲಾಗಿತ್ತು. ಅದೇ ರೀತಿ ನೀವು ಪ್ರಧಾನಮಂತ್ರಿಗಳಿಗೆ ಬಲಗೈ ಆಗಿರುವ ನೀವು ಬೆಂಗಳೂರಿಗೆ, ಇಲ್ಲಿನ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡಿಸಿ.
ಬೆಂಗಳೂರಿನ ರಸ್ತೆ ಬಗ್ಗೆ ಅವರಿಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ರೂ. ಅನುದಾನ ಕೊಡಿಸಲಿ. ಏಕೆ ಕೊಡಿಸುತ್ತಿಲ್ಲ? ಮೇಕೆದಾಟು ಯೋಜನೆಗೆ ಐದೇ ನಿಮಿಷದಲ್ಲಿ ಅನುಮತಿ ಕೊಡಿಸುತ್ತೇನೆ ಎಂದು ಹೇಳಿ ಇದುವರೆಗೂ ಏಕೆ ಕೊಡಿಸಿಲ್ಲ? ಮಹದಾಯಿ ಯೋಜನೆಗೆ ಅನುಮತಿ ಏಕೆ ಕೊಡಿಸಿಲ್ಲ? ರೈತರ ಮಕ್ಕಳು ಎಂದು ಹೇಳಿಕೊಳ್ಳುವ ನೀವು ಯುಕೆಪಿ ಯೋಜನೆ ವಿರುದ್ಧ ಮಹಾರಾಷ್ಟ್ರ ಸಿಎಂ ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ ಎಂದು ಹೇಳಿರುವಾಗ ಅದರ ವಿರುದ್ಧ ಏಕೆ ಧ್ವನಿ ಎತ್ತುತ್ತಿಲ್ಲ? ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ, ಟ್ವೀಟ್ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ" ಎಂದು ತಿಳಿಸಿದರು.
ಈ ವಿಚಾರದಲ್ಲಿ ಷಡ್ಯಂತ್ರ ಮಾಡುತ್ತಿದ್ದಾರಾ ಎಂದು ಕೇಳಿದಾಗ, "ಶಿಕ್ಷಣ ಸಂಸ್ಥೆಗಳು ಮಕ್ಕಳ ಕೈಯಲ್ಲಿ ಪ್ರಧಾನಿಗೆ ಪತ್ರ ಬರೆಸುತ್ತಾರೆ. ಅವರು ರಾಜಕಾರಣವನ್ನೇ ಮಾಡುವುದಾದರೆ ಮಾಡಲಿ. ಚುನಾವಣೆಯಲ್ಲಿ ಸ್ಪರ್ಧಿಸಲಿ" ಎಂದರು.
ಉದ್ಯಮಿಗಳಿಗೆ ನಾ.ರಾ. ಲೋಕೇಶ್ ಪತ್ರ ಬರೆದು ಆಂಧ್ರ ಪ್ರದೇಶಕ್ಕೆ ಆಹ್ವಾನ ನೀಡುತ್ತಿರುವ ಬಗ್ಗೆ ಕೇಳಿದಾಗ, "ಅವರಿಗೆ ಅಲ್ಲಿ ಜನ ಇಲ್ಲ. ಹೀಗಾಗಿ ಕರೆಯುತ್ತಾರೆ. ಪ್ರಧಾನಮಂತ್ರಿಗಳು ಬೆಂಗಳೂರನ್ನು ಜಾಗತಿಕ ನಗರ ಎಂದು ಏಕೆ ಕರೆದರು? ಅವರು ಯಾರಿಗಾದರೂ ಆಹ್ವಾನ ನೀಡಲಿ. ಯಾರಿಗೆ ಬೆಂಗಳೂರಿನಲ್ಲಿ ವ್ಯಾಪಾರ ಮಾಡುವುದರಿಂದ ಲಾಭವಾಗುತ್ತದೆಯೋ ಅವರು ಇಲ್ಲೇ ಉಳಿಯುತ್ತಾರೆ.
ವಿಶ್ವದ ಪ್ರತಿಷ್ಟಿತ ಕಂಪನಿಗಳು ಬೆಂಗಳೂರಿನಲ್ಲೇ ಏಕಿವೆ? 25 ಲಕ್ಷ ಇಂಜಿನಿಯರ್ ಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್ ಗಳನ್ನು ಸಂಖ್ಯೆ ಕೇವಲ 13 ಲಕ್ಷ. 2 ಲಕ್ಷಕ್ಕೂ ಹೆಚ್ಚು ವಿದೇಶಿ ಪಾಸ್ ಪೋರ್ಟ್ ದಾರರು ಇಲ್ಲಿ ಕೆಲಸ ಮಾಡುತ್ತಿರುವುದು ಏಕೆ? ಇಲ್ಲಿನ ವ್ಯವಸ್ಥೆ ಚೆನ್ನಾಗಿದೆ, ಉತ್ತಮ ಪ್ರತಿಭೆಗಳಿದ್ದಾರೆ" ಎಂದರು.
"ನಾನು ಈಗಾಗಲೇ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಮುಖ್ಯಮಂತ್ರಿಗಳು ಶನಿವಾರ ಸಂಜೆ ಸಭೆ ಮಾಡಲಿದ್ದಾರೆ. ಈಗಾಗಲೇ ಶಾಸಕರಿಗೆ ನೀಡಿರುವ ಅನುದಾನವನ್ನು ರಸ್ತೆ ರಿಪೇರಿಗೆ ಬಳಸಲು ಸೂಚಿಸಿದ್ದೇವೆ" ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಬೆಂಗಳೂರನ್ನು ನಿರ್ಲಕ್ಷ ಮಾಡುತ್ತಿದೆಯೇ ಎಂದು ಕೇಳಿದಾಗ, "ಖಂಡಿತಾ, ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ನೀಡಿಲ್ಲ" ಎಂದು ತಿಳಿಸಿದರು.
ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೃಪ್ತಿ ಇದೆಯೇ ಎಂದು ಕೇಳಿದಾಗ, "ನಾವು ಐದು ಪಾಲಿಕೆ ಮಾಡಿ ಹೆಚ್ಚಿನ ಹುದ್ದೆ ಸೃಷ್ಟಿಸುತ್ತಿರುವುದೇ ಈ ಕಾರಣಕ್ಕೆ. ಗುಂಡಿ ಮುಚ್ಚುವುದಷ್ಟೇ ಅಲ್ಲ, ಹೊಸ ರಸ್ತೆ ಮಾಡಬೇಕು.ಇದಕ್ಕೆ ನಾವು ಕಾರ್ಯಯೋಜನೆ ಸಿದ್ಧ ಮಾಡಿಕೊಂಡಿದ್ದೇವೆ" ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಇತರೆ ಇಲಾಖೆಗಳ ಅನುದಾನಕ್ಕೆ ಕತ್ತರಿ ಹಾಕಲಾಗುವುದು ಎಂಬ ವರದಿ ಬಗ್ಗೆ ಕೇಳಿದಾಗ, "ಇದೆಲ್ಲವೂ ಸಂಪೂರ್ಣ ಸುಳ್ಳು. ಆ ರೀತಿಯ ಯಾವುದೇ ಪ್ರಸ್ತಾವವಿಲ್ಲ. ನಾವು ಈ ಯೋಜನೆ ಪೂರ್ಣಗೊಳಿಸಲು ಬದ್ಧವಿದ್ದೇವೆ. ಇದಕ್ಕಾಗಿ 1.33 ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು.
ನ್ಯಾಯಾಲಯದಲ್ಲಿ ಅನೇಕ ಪ್ರಕಾರಣಗಳಿದ್ದು, ಹೀಗಾಗಿ ಕಾನೂನು ಪ್ರಕಾರ ಪ್ರಾಧಿಕಾರ ರಚಿಸುತ್ತಿದ್ದೇವೆ. ನಮ್ಮ ರಾಜ್ಯಕ್ಕೆ ನಮ್ಮ ಪಾಲಿನ ನೀರು ಹಂಚಿಕೆಯಾಗಿದೆ ಅದನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಈ ವಿಚಾರದಲ್ಲಿ ಕೇಂದ್ರ ಯಾವುದೇ ರಾಜ್ಯದ ಒತ್ತಡಕ್ಕೆ ಮಣಿಯಬಾರದು" ಎಂದು ತಿಳಿಸಿದರು