ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ) 
ರಾಜಕೀಯ

ಮೇ 4ರ ಫಲಿತಾಂಶಕ್ಕೂ ಮುನ್ನ ರಾಜ್ಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಆಪ್ತರೊಂದಿಗೆ ಸಿದ್ದರಾಮಯ್ಯ ಗೌಪ್ಯ ಸಭೆ; ಮುಂದಿನ ಕಾರ್ಯತಂತ್ರ ಕುರಿತು ಚರ್ಚೆ..!

ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್, ಎಚ್.ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ದಿನೇಶ್ ಗುಂಡೂರಾವ್, ಬೈರತಿ ಸುರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರು: ಮೇ 4ರಂದು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಬಾಗಲಕೋಟೆ-ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶಗಳು ಹೊರಬೀಳಲಿದ್ದು, ಇದರ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರು ಹಾಗೂ ನಾಯಕರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆಂದು ತಿಳಿದುಬಂದಿದೆ. ಈ ಬೆಳವಣಿಗೆ ಕುತೂಹಲವನ್ನು ಸೃಷ್ಟಿಸಿದೆ.

ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪ್ರಭಾವಿ ಸಚಿವರ ಖಾಸಗಿ ಕಟ್ಟಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್, ಎಚ್.ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ದಿನೇಶ್ ಗುಂಡೂರಾವ್, ಬೈರತಿ ಸುರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಮೂಲಗಳ ಪ್ರಕಾರ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹಕ್ಕು ಮಂಡಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಅದನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಮೇ 21ರಂದು ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಲಿರುವುದರಿಂದ, ಆ ಬಳಿಕ ನಾಯಕತ್ವ ಬದಲಾವಣೆ ಸಾಧ್ಯತೆಗಳ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಸಿದ್ದರಾಮಯ್ಯ ಅವರೇ ಮುಂದುವರಿಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಗತ್ಯವಿದ್ದರೆ ಸಚಿವ ಸಂಪುಟ ಪುನರ್‌ರಚನೆ ಮಾಡುವ ಮೂಲಕ ರಾಜಕೀಯ ಸಮತೋಲನ ಸಾಧಿಸಬೇಕು ಎಂದು ಸಲಹೆ ನೀಡಿದ್ದಾರೆ. ಜೊತೆಗೆ, ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಕೂಡ ಕಾಪಾಡುವಂತೆ ಒತ್ತಾಯಿಸಿದ್ದಾರೆಂದು ತಿಳಿದುಬಂದಿದೆ.

ಇತ್ತೀಚೆಗೆ ಎಂಎಲ್‌ಸಿಗಳಾದ ಕೆ. ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ವಿರುದ್ಧ ಕೈಗೊಂಡ ಶಿಸ್ತಿನ ಕ್ರಮದ ವಿಷಯವೂ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ಇದರಿಂದ ಮುಖ್ಯಮಂತ್ರಿ ಬಣಕ್ಕೆ ಹಿನ್ನಡೆ ಆಗುತ್ತಿರುವಂತೆ ಕಾಣುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಆದರೆ, ಈ ನಿರ್ಧಾರದಲ್ಲಿ ಡಿಕೆ.ಶಿವಕುಮಾರ್ ಅವರ ಪಾತ್ರ ಇಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆಂದು ತಿಳಿದುಬಂದಿದೆ.

ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ಸತೀಶ್ ಜಾರಕಿಹೊಳಿ ಅವರು ಈ ಹುದ್ದೆಗೆ ಪ್ರಮುಖ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ “ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರೆ ಮಾತ್ರ ನಾನು ಸ್ಥಾನ ತ್ಯಜಿಸುತ್ತೇನೆ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಇನ್ನು ದಲಿತ ಕೋಟಾದ ಅಡಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಜಿ.ಪರಮೇಶ್ವರ್ ಅವರ ಹೆಸರನ್ನೂ ಪರಿಗಣಿಸುವ ಸಾಧ್ಯತೆಗಳಿವೆ ಎಂದು ಪಕ್ಷದ ಒಳವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಮೇ 4ರ ಫಲಿತಾಂಶಗಳ ನಂತರ ಕೈಗೊಳ್ಳಬೇಕಾದ ರಾಜಕೀಯ ಕ್ರಮಗಳ ಕುರಿತೂ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ. ಮೇ 5ರಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ದೆಹಲಿಗೆ ಕಳುಹಿಸಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ಮನವಿ ಮಾಡುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.

ಬಳಿಕ ಮೇ 10ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಹಾಗೂ ಜಿ.ಪರಮೇಶ್ವರ್ ಅವರು ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಹೈಕಮಾಂಡ್ ಡಿಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಿದರೆ, ಕನಿಷ್ಠ ಕೊನೆಯ ಒಂದು ವರ್ಷಕ್ಕೆ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಸಿದ್ದರಾಮಯ್ಯ ಬಣ ಒತ್ತಾಯಿಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಏತನ್ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿಯವರು, ಮೇ 4ರ ಫಲಿತಾಂಶಗಳ ಬಳಿಕ ಸಚಿವ ಸಂಪುಟ ಪುನರ್‌ರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಅಲ್ಲದೆ, ಜುಲೈ 24, 2005 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಮೊದಲ ರ್ಯಾಲಿಯಿಂದಲೂ ತಾನು ಅಹಿಂದ ಹೋರಾಟದಲ್ಲಿದ್ದೇನೆಂದು ಹೇಳಿದ್ದು, ಈ ಮೂಲಕ ಸಿದ್ದರಾಮಯ್ಯ ಬಳಿಕ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಕನ್ನಡ ಸಂಕ್ಷಿಪ್ತ ರೂಪ) ನಾಯಕತ್ವ ವಹಿಸಲು ಸಿದ್ಧ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

40 ಕೋಟಿ ಯುವಕರು ದೇಶದ ನಿಜವಾದ ಶಕ್ತಿ, ಆದರೆ ನಿರುದ್ಯೋಗ ತಾಂಡವವಾಡುತ್ತಿದೆ: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ

Toxic Trailer: ನಾನು ಬರೋ ಸಮಯ ಬಂದಿದೆ ಎಂದ ಯಶ್, ನಾವೆಲ್ಲರೂ ಕಾಯುತ್ತಿದ್ದೇವೆ ಎಂದ ಶಿವಣ್ಣ!

UPI ಪಾವತಿಗಳಿಗೆ ಶುಲ್ಕ ವಿಧಿಸಲ್ಲ: ಯಾರಿಗೆ MDR ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!

ಟೆಸ್ಟ್ ಪಂದ್ಯದ ಕೊನೆಯ ಓವರ್​ನಲ್ಲಿ 6, 6, 0, 6, 6 ಸಿಡಿಸಿದ ಗುರ್ನೂರ್ ಬ್ರಾರ್; ಗಂಭೀರ್ ಚಲ್ಲಾಳೆ, Video!

ಅಸಮಾಧಾನಿತ ಕಾಂಗ್ರೆಸ್ ಶಾಸಕರಿಗೆ ಕುಮಾರಸ್ವಾಮಿ ಆಫರ್; ಹೊಸ ದಾಳ ಉರುಳಿಸಿದ 'ದಳಪತಿ'