ತುಮಕೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಆವರಿಸಿದೆ. ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ತಕ್ಷಣ 10,000 ಕೋಟಿ ರೂ. ವಿಶೇಷ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಒತ್ತಾಯಿಸಿದ್ದಾರೆ.
ಬರಗಾಲ ಪೀಡಿತ ಪ್ರದೇಶಗಳಿಗೆ ತಕ್ಷಣ ಪರಿಹಾರ ಘೋಷಣೆ ಮಾಡಬೇಕು, ರೈತರ ಬೆಳೆ ವಿಮಾ ಕಂತುಗಳನ್ನು ಸರ್ಕಾರವೇ ಪಾವತಿಸಬೇಕು ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚುವರಿ ಹಣವನ್ನು ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆಗ್ರಹಿಸಿದ್ದಾರೆ.
ಇಂದು ತುಮಕೂರು ಜಿಲ್ಲೆಯ ಬರಗಾಲ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಕೇಂದ್ರದ ಸಹಾಯಕ್ಕಾಗಿ ಕಾಯದೆ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಒದಗಿಸಲು ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕದಾದ್ಯಂತ ಬರ ಪರಿಸ್ಥಿತಿಯನ್ನು ನಿರ್ಣಯಿಸಲು ಪಕ್ಷದ ಮುಖಂಡರ ನೇತೃತ್ವದಲ್ಲಿ ಏಳು ತಂಡಗಳನ್ನು ಮಾಡಿ ರಾಜ್ಯದ ಬೇರೆ ಜಿಲ್ಲೆಗಳಿಗೆ ಬರ ಅಧ್ಯಯನಕ್ಕೆ ಪ್ರವಾಸ ಕೈಗೊಳ್ಳಲಾಗಿದೆ. ಬರದ ನೈಜ ಸ್ಥಿತಿಯನ್ನು ತಿಳಿದು ರೈತರ ಸಂಕಷ್ಟ ಆಲಿಸುತ್ತಿದ್ದೇವೆ, ರೈತರನ್ನು ಮಾತನಾಡಿಸಿ ವಾಸ್ತವಿಕ ಸತ್ಯ ತಿಳಿಯಲಾಗುತ್ತಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ಎಲ್ಲಾ 10 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಒತ್ತಾಯಿಸಿದ ವಿಜಯೇಂದ್ರ, ಮಳೆ ಕೊರತೆಯಿಂದಾಗಿ ತೆಂಗು, ರಾಗಿ, ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುವ ರೈತರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ ಎಂದರು.
"ಹಲವಾರು ಪ್ರದೇಶಗಳಲ್ಲಿ ಮಳೆ ಕೊರತೆಯಿಂದಾಗಿ ಬಿತ್ತನೆ ಆರಂಭವಾಗಿಲ್ಲ, ಆದರೆ ಇತರ ಸ್ಥಳಗಳಲ್ಲಿ ಬೆಳೆಗಳು ಮೊಳಕೆಯೊಡೆಯಲು ವಿಫಲವಾಗಿವೆ" ಎಂದು ಅವರು ಹೇಳಿದರು.
ರೈತರು ಎಷ್ಟು ಸಂಕಷ್ಟದಲ್ಲಿದ್ದಾರೆ ಎಂದರೆ ಫಸಲ್ ಭೀಮಾ ಯೋಜನೆಗೆ ಹಣ ಕಟ್ಟಲೂ ಅವರಿಂದ ಆಗ್ತ ಇಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವೇ ಅದನ್ನು ಭರಿಸಬೇಕು. ಪ್ರತಿ ತಾಲೂಕಿಗೂ ಕನಿಷ್ಠ ರೂ.50 ಲಕ್ಷ ಬಿಡುಗಡೆ ಮಾಡಿ ರೈತರ ವಿಮಾ ಪ್ರೀಮಿಯಂ ಪಾವತಿಗೆ ಕೈ ಜೋಡಿಸಬೇಕು ಎಂದು ಒತ್ತಾಯಿಸಿದರು.
ಮಳೆ ಕೊರತೆಯಿಂದ ಕುಡಿಯವ ನೀರಿಗೂ ರಾಜ್ಯದ ಹಲವು ಭಾಗದಲ್ಲಿ ಹಾಹಾಕಾರ ಆರಂಭವಾಗಿದೆ. ಮಳೆಗಾಲದಲ್ಲೇ ಇಂತಹ ಸ್ಥಿತಿ ಇದೆ. ಇನ್ನು ಮುಂದಿನ ದಿನಗಳಲ್ಲಿ ಇದು ಇನ್ನೂ ಉಲ್ಬಣವಾಗಬಹುದು. ಕೆರೆ-ಕಟ್ಟೆಗಳು ಬತ್ತುತ್ತಿವೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಪ್ರತಿ ತಾಲೂಕಿಗೆ ಈಗಾಗಲೇ ರೂ.1 ಕೋಟಿ ಅನುದಾನ ಘೋಷಿಸಲಾಗಿದೆ. ಇದು ಸಾಕಾಗುವುದಿಲ್ಲ. ಹೆಚ್ಚುವರಿಯಾಗಿ ರೂ.2 ಕೋಟಿ ಬಿಡುಗಡೆ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕೊಳವೆಬಾವಿಗಳನ್ನು ಅವಲಂಬಿಸಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಬೇಕಾದಷ್ಟು ವಿದ್ಯುತ್ ಪೂರೈಕೆ ಆಗ್ತ ಇಲ್ಲ. ತೆಂಗು, ಅಡಿಕೆ ಹಾಗೂ ಇತರ ಬೆಳೆಗಳನ್ನು ಉಳಿಸಲು ಪ್ರತಿದಿನ ಕನಿಷ್ಠ 7 ಗಂಟೆಗಳ ಕಾಲ ನಿರಂತರ 3-ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.