ಬೆಂಗಳೂರು: ಕೋಗಿಲು ನಿರಾಶ್ರಿತರಿಗೆ ಮನೆಗಳನ್ನು ಒದಗಿಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಜನವರಿ 5 ರಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ರಾಜ್ಯ ಘಟಕ ಗುರುವಾರ ಘೋಷಿಸಿದೆ.
ಬಿಜೆಪಿಯ ಸತ್ಯಶೋಧನಾ ಸಮಿತಿ ಸಭೆಯ ನಂತರ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು, ಕೋಗಿಲು ಅಕ್ರಮ ಮನೆ- ಗುಡಿಸಲುಗಳ ತೆರವು ಪ್ರಕರಣದಲ್ಲಿ ವಾಸಸ್ಥಳ ಕಳಕೊಂಡವರಿಗೆ ಮನೆ ನೀಡಲು ಮುಂದಾದ ಕರ್ನಾಟಕ ಸರ್ಕಾರದ ಕ್ರಮದ ವಿರುದ್ಧ ಜನವರಿ 5 ರಂದು ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕಿನಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆಸಲಿದ್ದೇವೆಂದು ಹೇಳಿದರು.
ಕೋಗಿಲುವಿನಲ್ಲಿ ಅಕ್ರಮ ಮನೆಗಳ ತೆರವು ಪ್ರಕರಣದ ಕುರಿತು ಸತ್ಯಾಸತ್ಯತೆ ತಿಳಿಯಲು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು 5 ಜನರ ಸಮಿತಿ ರಚಿಸಿದ್ದಾರೆ. ಅದರ ಮೊದಲ ಸಭೆ ಇಂದು ನಡೆದಿದೆ. ಸ್ಥಳ ಪರಿಶೀಲನೆಯನ್ನೂ ಮಾಡಲಿದ್ದೇವೆ. ಅಲ್ಲಿನ ಸರ್ವೇ ನಂಬರ್, ಯಾವ ರಾಜ್ಯದವರು, ಯಾವ ದೇಶದವರು ಎಂಬಿತ್ಯಾದಿ ಮಾಹಿತಿಯನ್ನು ಸಂಗ್ರಹಿಸಲಿದ್ದೇವೆ. ಒಂದು ವಾರದಲ್ಲಿ ಈ ಸಂಬಂಧ ರಾಜ್ಯಾಧ್ಯಕ್ಷರಿಗೆ ವರದಿ ಕೊಡುತ್ತೇವೆಂದಿು ತಿಳಿಸಿದರು.
ರಾಜ್ಯ ಸರ್ಕಾರ ತರಾತುರಿಯಲ್ಲಿ ನಾಳೆಯೇ ಮನೆ ನೀಡಲು ಸಾಧ್ಯವಿಲ್ಲ. ನನ್ನ ಕ್ಷೇತ್ರದಲ್ಲೂ ಮನೆಗಳು ನಿರ್ಮಾಣ ಹಂತದಲ್ಲಿವೆ. ಆರು ವರ್ಷಗಳ ಹಿಂದೆ 1 ಲಕ್ಷ ಹಣ ಕಟ್ಟಿದವರಿಗೆ ಮನೆ ಕೊಟ್ಟಿಲ್ಲ. 3 ಲಕ್ಷ ಆದಾಯ ಬೇಕು. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ಕೊಡಲು ಬೆಂಗಳೂರು ನಗರದಲ್ಲಿ 5 ವರ್ಷ ವಾಸವಾಗಿರುವ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆಯಿಂದ ಕೊಡಬೇಕಾಗುತ್ತದೆ. ಅಧಿಕಾರಿಗಳು ಅಂತಹ ದೃಢೀಕರಣ ಪತ್ರವನ್ನು ನೀಡಿದರೆ ಅದು ಕಾನೂನಿಗೆ ವಿರುದ್ಧ ಆಗಲಿದೆ ಎಂದರು.
ಬೈಯಪ್ಪನಹಳ್ಳಿಯಲ್ಲಿ 14 ಮಹಡಿ ಇರುವ ಮನೆ ನಿರ್ಮಾಣ ನಡೆದಿದೆ. ಆನ್‍ಲೈನ್‍ನಲ್ಲಿ ಶೇ 50 ಮನೆಗಳ ಮಂಜೂರಾತಿ ನಡೆದಿದೆ. ಶಾಸಕರು ನೀಡುವ ಶೇ 50 ಮನೆಗಳನ್ನು ಇನ್ನೂ ನೀಡಿಲ್ಲ ಎಂದರು. 6 ವರ್ಷದಿಂದ ಕಾಯುವವರಿಗೆ ಮನೆ ಕೊಟ್ಟಿಲ್ಲ. ವಾರದಲ್ಲಿ ಮನೆ ಇಲ್ಲದವರಿಗೆ ಮನೆ ಕೊಡಲು ಹೇಗೆ ಸಾಧ್ಯ? ಇದು ಅಕ್ರಮವಾಗಿ ಮನೆ ಕೊಟ್ಟಂತಾಗುತ್ತದೆ ಎಂದು ಆಕ್ಷೇಪಿಸಿದರು.
ಸರಕಾರಿ ಜಾಗಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದು ಅಕ್ರಮವಲ್ಲವೇ? ಅಲ್ಲಿ ಮನೆ ಕಟ್ಟಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕಿತ್ತು. ವಿದ್ಯುತ್ ಸಂಪರ್ಕ ನೀಡಿದವರ ಮೇಲೂ ಕ್ರಮ ಕೈಗೊಳ್ಳಬೇಕಿತ್ತು. ಸರ್ಕಾರ ತರಾತುರಿಯಲ್ಲಿ ಮನೆ ಕೊಟ್ಟರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ರಾಜ್ಯಪಾಲರಿಗೂ ಮನವಿ ಕೊಡುತ್ತೇವೆಂದು ಹೇಳಿದರು.