ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 20 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಸಜ್ಜಾಗಿರುವ ಸಂದರ್ಭದಲ್ಲಿ, ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಅಚ್ಚರಿಯ ರೀತಿಯಲ್ಲಿ ಮುನ್ನೆಲೆಗೆ ಬಂದಿದೆ.
ಮೂಲಗಳ ಪ್ರಕಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹರಿಪ್ರಸಾದ್ ಅವರನ್ನು ಸಚಿವರನ್ನಾಗಿಸುವ ಜೊತೆಗೆ ವಿಧಾನ ಪರಿಷತ್‌ನಲ್ಲಿ ಸಭಾನಾಯಕರನ್ನಾಗಿ ನೇಮಿಸಲು ಬೆಂಬಲ ನೀಡುತ್ತಿದ್ದಾರೆ ಎನ್ನಲಾಗಿದೆ.
ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಿದರೆ, ಅದು ಅಧಿಕಾರದ ಜೊತೆಗೆ ಪಕ್ಷ ಸಂಘಟನೆಗೂ ಬಲ ಸಿಗಲಿದೆ ಎಂಬುದು ಇದರ ಹಿಂದಿನ ವಾದವಾಗಿದೆ.
ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆಗಳನ್ನು ಏಕಕಾಲದಲ್ಲಿ ನಿರ್ವಹಿಸಿದ್ದನ್ನು ಉದಾಹರಣೆಯಾಗಿ ಉಲ್ಲೇಖಿಸಲಾಗುತ್ತಿದೆ. ಹಾಗೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಿಂದ ಭಾನುವಾರ ಮರಳಿದ ಬಳಿಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಹರಿಪ್ರಸಾದ್ ಅವರು ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯಿದ್ದು, ಈ ಭೇಟಿಯ ಬಳಿಕ ಸಿದ್ದರಾಮಯ್ಯ ಅವರ ಯೋಜನೆ ಫಲ ನೀಡುತ್ತದೆಯೇ ಎಂಬುದು ಸ್ಪಷ್ಟವಾಗಲಿದೆ.
ಒಂದು ವೇಳೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಸಿಗದಿದ್ದರೆ, ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ವಿಧಾನ ಪರಿಷತ್ ಸಭಾನಾಯಕರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಯತೀಂದ್ರ ಅವರ ರಾಜಕೀಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹರಿಪ್ರಸಾದ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವಿದು ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ.
ಇನ್ನೊಂದೆಡೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನ ಉಳಿಸಿಕೊಂಡೇ ಕೆಪಿಸಿಸಿ ಅಧ್ಯಕ್ಷರಾಗಲು ಆಸಕ್ತಿ ತೋರಿದ್ದರು. ಆದರೆ, ಪಕ್ಷದ ಹೈಕಮಾಂಡ್ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಪರವಾಗಿ ಬಲವಾಗಿ ನಿಲ್ಲಲಿಲ್ಲ ಎಂಬ ಭಾವನೆಯೂ ಅವರಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಕೆಲ ತಿಂಗಳ ಮುಂಚೆಯೇ ಸತೀಶ್ ಜಾರಕಿಹೊಳಿ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಜಾರಕಿಹೊಳಿ ಅವರು ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ, ಮಾಜಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ನಡೆಸಿದ ಮಾತುಕತೆಗಳು, ನಾಯಕತ್ವ ಬದಲಾವಣೆಯ ಬಗ್ಗೆ ಅವರು ಮುಕ್ತ ಮನಸ್ಸು ಹೊಂದಿದ್ದರು ಎಂಬ ಸಂದೇಶ ರವಾನಿಸಿದ್ದವು ಎಂದು ಮೂಲಗಳು ತಿಳಿಸಿವೆ.
ಆಯ್ದ ಕಾಂಗ್ರೆಸ್ ಶಾಸಕರಿಗೆ ಡಿ.ಕೆ. ಸುರೇಶ್ ಔತಣಕೂಟ
ಈ ನಡುವೆ, ಬಾಮುಲ್ ಅಧ್ಯಕ್ಷರಾಗಿರುವ ಡಿ.ಕೆ. ಸುರೇಶ್ ಅವರು ಬುಧವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯ್ದ ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು.
ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರ ಹಕ್ಕನ್ನು ಬಹಿರಂಗವಾಗಿ ಬೆಂಬಲಿಸಿದ್ದ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ, ಮದ್ದೂರು ಶಾಸಕ ಕದಲೂರು ಉದಯ್, ಶಿರಾ ಶಾಸಕ ಟಿ.ಬಿ. ಜಯಚಂದ್ರ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ನೂತನ ವಿಧಾನ ಪರಿಷತ್ ಸದಸ್ಯ ವಿನಯ್ ಕಾರ್ತಿಕ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಡಿ.ಕೆ. ಸುರೇಶ್ ಪರವಾಗಿ ಎಚ್.ಸಿ. ಬಾಲಕೃಷ್ಣ ಅವರು ಈ ಔತಣಕೂಟ ಆಯೋಜಿಸಿದ್ದು, ಕಾಂಗ್ರೆಸ್ ಶಾಸಕರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವ ಉದ್ದೇಶ ಇದಾಗಿತ್ತು ಎಂದು ಹೇಳಲಾಗುತ್ತಿದೆ.