ಬಿ.ವೈ.ವಿಜಯೇಂದ್ರ 
ರಾಜಕೀಯ

Bidadi township ಯೋಜನೆ: ಸಮಿತಿ ರಚನೆಯಲ್ಲ, ಯೋಜನೆಯನ್ನೇ ಕೈಬಿಡಿ; ರಾಜ್ಯ ಸರ್ಕಾರ ವಿರುದ್ಧ BJP ಆಗ್ರಹ

ಒಂದು ಕಡೆ ರೈತರ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚಿಸುವುದಾಗಿ ಸರ್ಕಾರ ಘೋಷಿಸುತ್ತಿದೆ. ಮತ್ತೊಂದೆಡೆ, ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದು ರೈತರನ್ನು ವಂಚಿಸುವ ಪ್ರಯತ್ನ.

ಬೆಂಗಳೂರು: ಬಿಡದಿ ಟೌನ್‌ಶಿಪ್ (ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ - GBIT) ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಸಮಿತಿ ರಚಿಸುವ ಬದಲು ಯೋಜನೆಯನ್ನೇ ಸಂಪೂರ್ಣ ಕೈಬಿಡುವಂತೆ ಆಗ್ರಹಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈತರನ್ನು ದಾರಿ ತಪ್ಪಿಸುವ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಒಂದು ಕಡೆ ರೈತರ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚಿಸುವುದಾಗಿ ಸರ್ಕಾರ ಘೋಷಿಸುತ್ತಿದೆ. ಮತ್ತೊಂದೆಡೆ, ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದು ರೈತರನ್ನು ವಂಚಿಸುವ ಪ್ರಯತ್ನ ಎಂದು ಟೀಕಿಸಿದರು.

ಇದೇ ವೇಳೆ ಜುಲೈ 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಘೋಷಿಸಿದರು.

ಅಭಿವೃದ್ಧಿಗೆ ಬಿಜೆಪಿ ವಿರೋಧಿಯಲ್ಲ. ಆದರೆ, ರೈತರು ಜಮೀನು ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ಬಳಿಕವೂ ಸರ್ಕಾರ ಬಲವಂತವಾಗಿ ಭೂಮಿ ಕಸಿದುಕೊಳ್ಳಲು ಮುಂದಾದರೆ ಅದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

ಬಿಡದಿಯ ರೈತರ ಹೊಟ್ಟೆಗೆ ಹೊಡೆದು ಕಾಂಗ್ರೆಸ್ ಹೈಕಮಾಂಡ್‌ನ ಹೊಟ್ಟೆ ತುಂಬಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ರೈತರ ಅಭಿಪ್ರಾಯ ತಿಳಿಯಲು ಸಮಿತಿ ರಚಿಸುವ ಅಗತ್ಯವೇ ಇಲ್ಲ. ರೈತರು ಜಮೀನು ನೀಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಯೋಜನೆಯನ್ನು ಕೈಬಿಡಬೇಕು," ಎಂದು ಆಗ್ರಹಿಸಿದರು.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯೋಜನೆಯನ್ನು ಕೈಬಿಡದೆ ಈಗ ಸಮಿತಿ ರಚಿಸುತ್ತೇವೆ ಎನ್ನುವುದು ಹೊಸ ನಾಟಕ. ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳು ಯಾವತ್ತೂ ಭೂಸ್ವಾಧೀನ ಆದೇಶ ಹೊರಡಿಸಿಲ್ಲ. ಕಾಂಗ್ರೆಸ್ ಕೂಡ ಹಿಂದೆ ಈ ಯೋಜನೆಯನ್ನು ವಿರೋಧಿಸಿತ್ತು," ಎಂದು ಹೇಳಿದರು.

ರೈತರು ತಮ್ಮ ಜಮೀನು ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವಾಗ ಸಮಿತಿಯ ಅಗತ್ಯವೇ ಇಲ್ಲ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಯೋಜನೆಯ ಪ್ರಸ್ತಾವನೆ ಮಾತ್ರ ಮಾಡಿದ್ದರು. ಯಾವುದೇ ಭೂಸ್ವಾಧೀನ ಆದೇಶ ಹೊರಡಿಸಿರಲಿಲ್ಲ. ಇದನ್ನು ಕುಮಾರಸ್ವಾಮಿ ಅವರ ಕನಸಿನ ಯೋಜನೆ ಎಂದು ಹೇಳುವವರು ದಾಖಲೆಗಳನ್ನು ತೋರಿಸಬೇಕು ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗಿತ್ತು. ಆಗ ರೈತರ ಇಚ್ಛೆಗೆ ವಿರುದ್ಧವಾಗಿ ಯೋಜನೆ ಜಾರಿಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ನಂತರ ಬಿ.ಎಸ್. ಯಡಿಯೂರಪ್ಪ, ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಯೋಜನೆ ಜಾರಿಯಾಗಲಿಲ್ಲ.

ಡಿಎಲ್‌ಎಫ್ (DLF) ಕಂಪನಿ ಈ ಯೋಜನೆಯಲ್ಲಿ ಆಸಕ್ತಿ ತೋರಿಸಿ 400 ಕೋಟಿ ರೂ.ಠೇವಣಿ ಇಟ್ಟಿತ್ತು. ಆದರೆ, ಬಿಜೆಪಿ ಸರ್ಕಾರ ಆ ಹಣವನ್ನು ಹಿಂದಿರುಗಿಸಿತ್ತು. "ನಮಗೆ ಆಸಕ್ತಿ ಇದ್ದಿದ್ದರೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ರಿಯಲ್ ಎಸ್ಟೇಟ್ ವ್ಯವಹಾರ ನಡೆಸಬಹುದಿತ್ತು. ಈ ಯೋಜನೆಯಲ್ಲಿ ಬಿಜೆಪಿಗೆ ಯಾವುದೇ ಪಾತ್ರವಿಲ್ಲ," ಎಂದು ಸ್ಪಷ್ಟಪಡಿಸಿದರು.

ಈ ಯೋಜನೆಗೆ ಸಂಬಂಧಿಸಿದ ಬಹುತೇಕ ಆದೇಶಗಳು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೊರಬಿದ್ದಿವೆ. ಆದರೂ ಅದನ್ನು ಕುಮಾರಸ್ವಾಮಿ ಅವರ ಯೋಜನೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಹೇಳಿದರು.

ಇದೇ ವೇಳೆ, ಶಾಶ್ವತ ನಿವಾಸಿ ಪ್ರಮಾಣಪತ್ರ (Permanent Resident Certificate - PRC) ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ ಸಲ್ಲಿಸಿದೆ.

ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಆರ್. ಅಶೋಕ್, ಜಿಲ್ಲಾ ಪಂಚಾಯಿತಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಮತದಾರರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾನೂನುಬಾಹಿರ ಹಾಗೂ ರಾಷ್ಟ್ರವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಕೂಡಲೇ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ಹಿಂಪಡೆದು, ರೈತರ ಆತಂಕ ನಿವಾರಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ತಪ್ಪು ಮಾಡಿದೆವು...': Epstein ಬಿಡುಗಡೆ ಎಡವಟ್ಟು ಒಪ್ಪಿಕೊಂಡ ಅಮೆರಿಕ ಉಪಾಧ್ಯಕ್ಷ JD Vance, Trump ಆಡಳಿತಕ್ಕೆ ತೀವ್ರ ಮುಜುಗರ..!

Bidadi Township: ವಿರೋಧದ ನಡುವೆ ಮತ್ತೆ 4 ಗ್ರಾಮಗಳ 5,000 ಎಕರೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ ಸರ್ಕಾರ!

ನಾನು 5 ಟೌನ್‌ಶಿಪ್‌ ಮಾಡಲು ನಿರ್ಧರಿಸಿದ್ದೆ, ಆದ್ರೆ ನಿಮ್ಮ ರೀತಿ ರೈತರನ್ನು ಒಕ್ಕಲೆಬ್ಬಿಸಲಿಲ್ಲ: ಸಿಎಂ ಡಿಕೆಶಿಗೆ ಎಚ್‌ಡಿಕೆ ತಿರುಗೇಟು

ಕರ್ನಾಟಕ SIR ಅವಧಿ ವಿಸ್ತರಣೆ: BLO ಮನೆಮನೆ ಭೇಟಿಗೆ ಆಗಸ್ಟ್ 8 ಕೊನೆ ದಿನ; 17ರಂದು ಕರಡು ಪಟ್ಟಿ ಪ್ರಕಟಣೆ!

'ಮೊದಲು Sheikh Hasina ವಾಪಸ್ ಬರಲಿ, ಗಲ್ಲು ಶಿಕ್ಷೆ ಬಗ್ಗೆ ಆಮೇಲೆ ನೋಡೋಣ, ಆದ್ರೆ': ಮಾಜಿ ಪ್ರಧಾನಿಗೆ ಸರ್ಕಾರ ಕಠಿಣ ಎಚ್ಚರಿಕೆ