ಆರ್. ಅಶೋಕ್ 
ರಾಜಕೀಯ

ಕೆಟ್ಟುಹೋದ ಲಾರಿಯಂತಿರುವ ಸರ್ಕಾರ ನಡೆಸಲು ಆಗದೆ ಸಿದ್ದರಾಮಯ್ಯ ಸೈಲೆಂಟ್ ಆಗಿ ರಾಜೀನಾಮೆ ಕೊಟ್ಟಿದ್ದಾರೆ!

ಇಡೀ ದೇಶದಲ್ಲಿ ನಾನೊಬ್ಬನೇ ಹಿಂದುಳಿದ ಜಾತಿಯ ಮುಖ್ಯಮಂತ್ರಿ, ನಾನೊಬ್ಬನೇ ಅಹಿಂದ ನಾಯಕ, ನನ್ನನ್ನು ಬದಲಾಯಿಸುವುದಿಲ್ಲ ಎಂದುಕೊಂಡಿದ್ದ ಸಿದ್ದರಾಮಯ್ಯ, ರಾಹುಲ್‌ ಗಾಂಧಿಯ ಕಿತಾಪತಿಯಿಂದಾಗಿ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು: ಕೆಟ್ಟುಹೋದ ಲಾರಿಯಂತಿರುವ ಸರ್ಕಾರವನ್ನು ನಡೆಸಲು ಸಾಧ್ಯವಾಗದೇ ಸಿದ್ದರಾಮಯ್ಯ ಅವರು ಮೌನವಾಗಿ ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಇನ್ನು ಮುಂದೆ ಡಿ.ಕೆ.ಶಿವಕುಮಾರ್‌ ಎಲ್ಲ ಬಾಕಿಗಳನ್ನು ತೀರಿಸಬೇಕಿದೆ. ಇದಕ್ಕಾಗಿ ಇನ್ನಷ್ಟು ತೆರಿಗೆಗಳನ್ನು ಅವರು ಜನರ ಮೇಲೆ ಹೇರುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ನಾನೊಬ್ಬನೇ ಹಿಂದುಳಿದ ಜಾತಿಯ ಮುಖ್ಯಮಂತ್ರಿ, ನಾನೊಬ್ಬನೇ ಅಹಿಂದ ನಾಯಕ, ನನ್ನನ್ನು ಬದಲಾಯಿಸುವುದಿಲ್ಲ ಎಂದುಕೊಂಡಿದ್ದ ಸಿದ್ದರಾಮಯ್ಯ, ರಾಹುಲ್‌ ಗಾಂಧಿಯ ಕಿತಾಪತಿಯಿಂದಾಗಿ ರಾಜೀನಾಮೆ ನೀಡಿದ್ದಾರೆ.

ಈ ಹಿಂದೆ ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿಯವರು ವೀರೇಂದ್ರ ಪಾಟೀಲ್‌, ದೇವರಾಜು ಅರಸು, ಬಂಗಾರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕಿತ್ತು ಹಾಕಿದ್ದರು. ಕಾಂಗ್ರೆಸ್‌ ಪಕ್ಷ ಬ್ಯಾಕ್‌ವರ್ಡ್‌ ಸಮುದಾಯಕ್ಕೆ ಗೋ ಬ್ಯಾಕ್‌ ಎನ್ನುತ್ತಿದೆ. ಹಿಂದುಳಿದ ವರ್ಗದ ಪರ ಎಂದು ಹೇಳಿಕೊಳ್ಳುವ ರಾಹುಲ್‌ ಗಾಂಧಿ ಹಿಂದುಳಿದವರ ವಿರೋಧಿಯಾಗಿದ್ದಾರೆ. ನನಗೆ ಮೂರು ತಿಂಗಳ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಭಿಕ್ಷೆ ಬೇಡಿದ್ದು, ಅಷ್ಟು ಸಮಯವೂ ಕೊಡಲ್ಲ ಎಂದು ಹೈಕಮಾಂಡ್‌ ಹೇಳಿತ್ತು. ಇನ್ನು ಮುಂದೆ ಕಾಂಗ್ರೆಸ್‌ ಪಕ್ಷ ಹಿಂದುಳಿದ ವರ್ಗದ ಚಾಂಪಿಯನ್‌ ಎಂದು ಹೇಳಿಕೊಳ್ಳಬಾರದು. ರಾಜ್ಯದಲ್ಲಿ ಈಗಾಗಲೇ ಕುರುಬ ಸಮುದಾಯ ಕಾಂಗ್ರೆಸ್‌ನ ವಿರುದ್ಧ ತಿರುಗಿ ಬಿದ್ದಿದೆ. 2028 ರ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದರು.

ಕಾಂಗ್ರೆಸ್‌ ಸರ್ಕಾರ ಹಳೆ ಲಾರಿ ಇದ್ದಂತೆ. ಈಗ ಲಾರಿಯ ಚಾಲಕ ಬದಲಾಗಿದ್ದಾನೆಯೇ ಹೊರತು ಲಾರಿ ಬದಲಾಗಿಲ್ಲ. ಈ ಕೆಟ್ಟುಹೋದ ಗಾಡಿಯನ್ನು ಬದಲಿಸಲು ಸಾಧ್ಯವಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮೂರು ವರ್ಷ ಸಾಲ ಮಾಡಿ ಆಡಳಿತವನ್ನು ಡಿ.ಕೆ.ಶಿವಕುಮಾರ್‌ಗೆ ನೀಡಿದ್ದಾರೆ. ಮುಖ್ಯಮಂತ್ರಿ ಬದಲಾದರೆ ಆರ್ಥಿಕ ಇಲಾಖೆಯ ಲೆಕ್ಕಪತ್ರ ಬದಲಾಗುವುದಿಲ್ಲ. 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಇದ್ದರೆ, 7.64 ಲಕ್ಷ ಕೋಟಿ ರೂ. ಸಾಲವಿದೆ. ಈ ವರ್ಷ 94,428 ಕೋಟಿ ರೂ. ಕೊರತೆ ಇದೆ. ಅಭಿವೃದ್ಧಿಗೆ ಹಣವೇ ಇಲ್ಲ ಎಂದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿಗಾಗಿ 84,000 ಕೋಟಿ ರೂ. ಖರ್ಚು ಮಾಡಲಾಗುತ್ತಿತ್ತು. ಅವೈಜ್ಞಾನಿಕ ಗ್ಯಾರಂಟಿ ಬಂದ ನಂತರ ಆ ಮೊತ್ತದಲ್ಲಿ ಕಡಿತವಾಗಿದೆ. ಬಿಜೆಪಿ ಇದ್ದಾಗ ಹೆಚ್ಚುವರಿ ಬಜೆಟ್‌ ಮಂಡನೆಯಾಗಿದ್ದರೆ, ಕಾಂಗ್ರೆಸ್‌ ಬಂದ ನಂತರ ಕೊರತೆ ಬಜೆಟ್‌ ಮಂಡಿಸಲಾಯಿತು. ಮೂರು ಬಾರಿ ಸತತವಾಗಿ ಕೊರತೆ ಬಜೆಟ್‌ ಮಂಡಿಸಲಾಗಿದೆ. ಡಿ.ಕೆ.ಶಿವಕುಮಾರ್‌ ಹೋಗಿ ಕಾಲಿಗೆ ಬಿದ್ದರೆ ಸಿದ್ದರಾಮಯ್ಯನವರು ಭಸ್ಮಾಸುರ ಆಶೀರ್ವಾದ ಮಾಡಿದ್ದಾರೆ. ಆರ್ಥಿಕ ಸುಸ್ಥಿರತೆ ಇಲ್ಲದ ಆಡಳಿತವನ್ನು ಅವರು ಬಿಟ್ಟು ಹೋಗಿದ್ದಾರೆ. ಅಭಿವೃದ್ಧಿಯ ಕರ್ನಾಟಕ ಈಗ ಸಾಲದ ಕರ್ನಾಟಕ ಆಗಿದೆ ಎಂದರು.

ಮೋದಿ ಸರ್ಕಾರ ಸಾಲ ಮಾಡಿದ್ದರೂ ಸುಮಾರು 170 ಲಕ್ಷ ಕೋಟಿ ರೂ. ರೈಲ್ವೆ, ಸೇತುವೆ, ಹೆದ್ದಾರಿಗೆ ಖರ್ಚು ಮಾಡಿದೆ. ಆದರೆ ಕಾಂಗ್ರೆಸ್‌ ಪ್ರಗತಿಗೆ ಏನೂ ಖರ್ಚು ಮಾಡಿಲ್ಲ. ಗ್ಯಾರಂಟಿಗಾಗಿ 65,000 ಕೋಟಿ ರೂ. ಖರ್ಚು ಮಾಡುವುದನ್ನೇ ದೊಡ್ಡದಾಗಿ ಹೇಳುತ್ತಾರೆ. ಅದರ ಜೊತೆಗೆ 65,000 ಕೋಟಿ ರೂ. ಹೆಚ್ಚುವರಿ ತೆರಿಗೆ ಹಾಕಿದ್ದಾರೆ. ಮಾಡಿರುವ ಸಾಲಕ್ಕೆ ಪ್ರತಿ ವರ್ಷ 38,000 ಕೋಟಿ ರೂ. ಬಡ್ಡಿ ಕಟ್ಟಲಾಗುತ್ತಿದೆ. ಇದೂ ಸೇರಿದರೆ 1.03 ಲಕ್ಷ ಕೋಟಿ ರೂ. ಸಾಲ ಮತ್ತು ಬಡ್ಡಿಗೆ ಹೋಗುತ್ತದೆ ಎಂದರು.

ಕಳೆದೆರಡು ಬಾರಿ ಬೆಳಗಾವಿಯಲ್ಲಿ ಅಧಿವೇಶನ ಮಾಡಿದರೂ ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ರೆಬೆಲ್‌ ಆಗಿದ್ದ ಸಿದ್ದರಾಮಯ್ಯ ಈಗ ಸುಮ್ಮನೆ ಅಧಿಕಾರ ಹಸ್ತಾಂತರಿಸಿದ್ದಾರೆ. ಏಕೆಂದರೆ ಗುತ್ತಿಗೆದಾರರಿಗೆ 38,000 ಕೋಟಿ ರೂ., ಎಸ್ಕಾಂಗಳಿಗೆ 12,500 ಕೋಟಿ ರೂ., ಗೃಹಲಕ್ಷ್ಮಿಗೆ 5,000 ಕೋಟಿ ರೂ., ಶಕ್ತಿ ಯೋಜನೆ 4500 ಕೋಟಿ ರೂ., ಸಾರಿಗೆ ಸಿಬ್ಬಂದಿಗೆ 2,000 ಕೋಟಿ ರೂ., ಅನ್ನಭಾಗ್ಯದ 600 ಕೋಟಿ ರೂ., ಅನಾಥ ಮಕ್ಕಳಿಗೆ 73 ಕೋಟಿ ರೂ., ಭಿಕ್ಷುಕರ ಕಲ್ಯಾಣಕ್ಕೆ 23 ಕೋಟಿ ರೂ. ಸೇರಿದಂತೆ 75,689 ಕೋಟಿ ರೂ. ಬಾಕಿ ನೀಡಬೇಕಿದೆ. ಇದಕ್ಕಾಗಿಯೇ ಸಿದ್ದರಾಮಯ್ಯ ಅಧಿಕಾರವನ್ನು ಬಿಟ್ಟುಕೊಟ್ಟಿದ್ದಾರೆ. ಇಷ್ಟು ಬಾಕಿಯನ್ನು ತೀರಿಸಲು ಡಿ.ಕೆ.ಶಿವಕುಮಾರ್‌ಗೆ ಆಗುವುದಿಲ್ಲ. ಮೌನವಾಗಿ ಅಧಿಕಾರ ನೀಡಿದ ಸಿದ್ದರಾಮಯ್ಯ ಅವರನ್ನು ಎಲ್ಲರೂ ಹೊಗಳಿದ್ದರು. ಆದರೆ ಅದರ ಹಿಂದೆ ಇದೇ ಗುಟ್ಟು ಇದೆ ಎಂದರು.

ಡಿ.ಕೆ.ಶಿವಕುಮಾರ್‌ಗೆ ತೆರಿಗೆ ಕಡಿಮೆ ಮಾಡಲು ಸಾಧ್ಯವಿಲ್ಲ. ಏಕೆಂದರೆ 19,262 ಕೋಟಿ ರೂ. ಕೊರತೆ ಇದೆ. ಆದರೆ ವಾಸ್ತವದಲ್ಲಿ ಇನ್ನಷ್ಟು ಕೊರತೆ ಇದೆ. ಇ-ಖಾತಾದಿಂದಾಗಿ ಆದಾಯ ಇನ್ನಷ್ಟು ಕಡಿಮೆಯಾಗಿದೆ. ಇದನ್ನು ಉಚಿತ ಎನ್ನುತ್ತಾರಾದರೂ ಸಾವಿರಾರು ರೂಪಾಯಿ ಲಂಚ ಪಡೆಯಲಾಗುತ್ತಿದೆ. ಹೊಸ ಮುಖ್ಯಮಂತ್ರಿಯಿಂದ ಜನರಿಗೆ ಯಾವುದೇ ಲಾಭ ದೊರೆಯುವುದಿಲ್ಲ. ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ಬಾಕಿ ಹಣವನ್ನು ನಾನು ಮರಳಿ ಕೊಡಿಸುವುದು ಖಚಿತ. ಇದಕ್ಕಾಗಿ ನಿರಂತರ ಹೋರಾಟ ಮಾಡುತ್ತೇನೆ. ಇದನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿದೆ ಎಂದರು.

ಕೇಂದ್ರ ಸರ್ಕಾರ ಕರೆದ ಸಭೆಗಳಿಗೆ ಸಿದ್ದರಾಮಯ್ಯ ಹೋಗಿರಲಿಲ್ಲ. ಆದರೆ ಮಗನಿಗೆ ಅಧಿಕಾರ ಬೇಕೆಂದಾಗ ಮಾತ್ರ ಹೈಕಮಾಂಡ್‌ ಬಳಿ ಹೋಗಿದ್ದಾರೆ. ಈ ಮೂರು ವರ್ಷಗಳಲ್ಲಿ ಅವರು ಕೇಂದ್ರದ ಮೇಲೆ ಆರೋಪ ಮಾಡುವುದು ಬಿಟ್ಟು ಬೇರೇನೂ ಮಾಡಿಲ್ಲ. ಸಿದ್ದರಾಮಯ್ಯನವರ ಗ್ಯಾಂಗ್‌ ಅನ್ನು ಹತ್ತಿಕ್ಕಲು ಕಾಂಗ್ರೆಸ್‌ನ ಒಂದು ತಂಡ ಪ್ರಯತ್ನ ಮಾಡುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಹೊರತುಪಡಿಸಿ ಹೊಸ ತಂಡವೂ ಸೃಷ್ಟಿಯಾಗಲಿದೆ. ಪ್ರಮಾಣವಚನ ಸ್ವೀಕಾರ ನಂತರ ಮತ್ತೆ ಗಲಾಟೆ ಶುರುವಾಗಲಿದೆ ಎಂದರು.

ಸಿದ್ದರಾಮಯ್ಯ ಮನೆ ಬಿಡಲ್ಲ, ಡಿ.ಕೆ.ಶಿವಕುಮಾರ್‌ ನನಗೆ ಮನೆ ಕೊಡಲ್ಲ ಎಂಬಂತಾಗಿದೆ. ಇವರಿಬ್ಬರ ನಡುವಿನ ಸಂಘರ್ಷ ಇನ್ನೂ ಇರುತ್ತದೆ. ನಾನೇನೂ ಇದರ ಬಗ್ಗೆ ಅಪೇಕ್ಷೆ ಇಟ್ಟುಕೊಂಡಿಲ್ಲ. ಬಿಜೆಪಿ ಅವಧಿಯಲ್ಲಿ ಪ್ರತಿಪಕ್ಷ ನಾಯಕರಿಗೆ ಮನೆ ಕೊಟ್ಟಿದ್ದೇವೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದೇ ದಾರಿಯನ್ನು ಪಾಲಿಸುತ್ತೇವೆ. ನಾನು ಸರ್ಕಾರದಿಂದ ಮನೆ ಬಾಡಿಗೆ ಪಡೆಯುತ್ತಿಲ್ಲ. ಹಣ ಕೊರತೆ ಇರುವ ಕಡೆ ಆ ಹಣವನ್ನು ಸರ್ಕಾರ ಬಳಸಿಕೊಳ್ಳಲಿ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆ ದಕ್ಷಿಣ ಉಪಚುನಾವಣೆಯ ಆಡಿಯೋ ವೈರಲ್: ಅದು 'ನಕಲಿ' ಎಂದು ಜಾರಿಕೊಂಡ ಜಮೀರ್

ಡಿಕೆಶಿ ಸಿಎಂ: ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಹೇಳಿಕೆ; ಚಲುವರಾಯಸ್ವಾಮಿ ನಾಲಿಗೆ ಕತ್ತರಿಸುತ್ತೇನೆ ಎಂದ ಸುರೇಶ್ ಗೌಡ!

ಸಚಿವ ಸ್ಥಾನ ಸಿಕ್ಕರೆ ಹಿಂದೆ ಸರಿಯಲ್ಲ; ಅಧಿಕಾರವಿದ್ದರೆ ಜನರ ಕೆಲಸಕ್ಕೆ ವೇಗ: ಸಮರ್ಥ್ ಶಾಮನೂರು

ಬಾಲಿವುಡ್ ನಟಿ ತಾಪ್ಸಿ ಪನ್ನು ತನ್ನ ದೇಹಕ್ಕೆ ತಾನೇ ಟಾರ್ಚರ್ ಕೊಟ್ಟಿದ್ದೇಕೆ?

'ಈ ದೇಶದಲ್ಲಿರಲು ನಾಚಿಕೆಯಾಗುತ್ತಿದೆ': ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಗೆ ಕಪಿಲ್ ಸಿಬಲ್ ಆಕ್ರೋಶ

SCROLL FOR NEXT