3 ವರ್ಷವಾದ್ರೂ ವಿಪಕ್ಷ ನಾಯಕನಿಗೆ ಸಿಗದ ಅಧಿಕೃತ ನಿವಾಸ: "ನಮಗೂ ಕಾಲ ಬರುತ್ತೆ, ಹೇಗೆ ಮಂಜೂರು ಮಾಡಬೇಕೋ ಗೊತ್ತಿದೆ": ಸರ್ಕಾರಕ್ಕೆ ಅಶೋಕ್ ಎಚ್ಚರಿಕೆ

ಆದ್ಯತೆಯ ಮೇರೆಗೆ ತಮಗೆ ನಿವಾಸವನ್ನು ಮಂಜೂರು ಮಾಡುವಂತೆ ಕೋರಿ ಈಗಾಗಲೇ ಮುಖ್ಯ ಕಾರ್ಯದರ್ಶಿಯವರಿಗೆ ನಾಲ್ಕು ಬಾರಿ ಪತ್ರಗಳನ್ನು ಬರೆದಿದ್ದೇನೆ. ಹಾಗಿದ್ದರೂ ಸರ್ಕಾರ ಸ್ಪಂದಿಸಿಲ್ಲ.
R Ashok
ಆರ್ ಅಶೋಕ್
Updated on

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ್ದರೂ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರಿಗೆ ಇನ್ನುವರೆಗೂ ಅಧಿಕೃತ ಸರ್ಕಾರಿ ನಿವಾಸವನ್ನು ಮಂಜೂರು ಮಾಡಿಲ್ಲ.

ಹುದ್ದೆ ಅಲಂಕರಿಸಿದಾಗಿನಿಂದ ಈವರೆಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದರೂ, ರಾಜ್ಯ ಸರ್ಕಾರವು ಸ್ಪಂದಿಸಿಲ್ಲ ಎಂದು ಅವರು ಆಡಳಿತ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್‌.ಅಶೋಕ್‌ ಅವರು ಬೆಂಗಳೂರಿನ ರೇಸ್‌‍ ಕೋರ್ಸ್‌ ರಸ್ತೆಯಲ್ಲಿರುವ ರೇಸ್‌‍ ವ್ಯೂ ಕಾಟೇಜ್‌ ಅಥವಾ ಕುಮಾರ ಪಾರ್ಕ್‌ನಲ್ಲಿರುವ ನಿವಾಸಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಇದುವರೆಗೆ 5 ರಿಂದ 6 ಬಾರಿ ಅಧಿಕೃತ ಪತ್ರಗಳನ್ನು ಬರೆದಿದ್ದಾರೆ. ಹಲವು ಬಾರಿ ಪತ್ರ ಬರೆದು ಹಾಗೂ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಧಿಕೃತ ನಿವಾಸ ಇಲ್ಲದಿರುವುದರಿಂದ, ಅವರು ತಮ ಸ್ವಂತ ನಿವಾಸವಾದ ಜಯನಗರದಿಂದಲೇ ಅಧಿಕೃತ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಆರ್‌.ಅಶೋಕ್‌ ಅವರು ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

ಆದ್ಯತೆಯ ಮೇರೆಗೆ ತಮಗೆ ನಿವಾಸವನ್ನು ಮಂಜೂರು ಮಾಡುವಂತೆ ಕೋರಿ ಈಗಾಗಲೇ ಮುಖ್ಯ ಕಾರ್ಯದರ್ಶಿಯವರಿಗೆ ನಾಲ್ಕು ಬಾರಿ ಪತ್ರಗಳನ್ನು ಬರೆದಿದ್ದೇನೆ. ಹಾಗಿದ್ದರೂ ಸರ್ಕಾರ ಸ್ಪಂದನೆ ಮಾಡಿಲ್ಲ ಎಂದಿದ್ದಾರೆ.

ಬಿಜೆಪಿ ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಿದ್ದು ತಡವಾಗಿ. ವಿರೋಧಪಕ್ಷದ ನಾಯಕ ಸ್ಥಾನಕ್ಕೆ ಅಶೋಕ್ ಆಯ್ಕೆ ಆದ ಬಳಿಕ ಸರ್ಕಾರಿ ನಿವಾಸ ಕೋರಿ ನಾಲ್ಕು ಪತ್ರಗಳನ್ನು ಬರೆದರೂ ಸರ್ಕಾರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಅಶೋಕ ಅವರ ವಿಶೇಷ ಅಧಿಕಾರಿ ಈ ಸಂಬಂಧ ಮುಖ್ಯ ಕಾರ್ಯದರ್ಶಿಯವರನ್ನು ಎರಡು- ಮೂರು ಬಾರಿ ಭೇಟಿ ಮಾಡಿದ್ದರು. ಬೇಗನೆ ಕೊಡುತ್ತೇವೆ ಎಂದು ಹೇಳಿದರೂ ಇಲ್ಲಿಯವರಿಗೂ ಕೊಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

ನಂ1, ಕುಮಾರಕೃಪಾ ಪೂರ್ವ, ನಂ 1 ರೇಸ್‌‍ವ್ಯೂ ಕಾಟೇಜ್‌, ರೇಸ್‌‍ಕೋರ್ಸ್‌ ರಸ್ತೆ, ನಂ 2, ರೇಸ್‌‍ ವ್ಯೂ ಕಾಟೇಜ್‌, ರೇಸ್‌‍ ಕೋರ್ಸ್‌ ರಸ್ತೆ ಈ ಮೂರರಲ್ಲಿ ಒಂದನ್ನು ಅಧಿಕೃತ ನಿವಾಸವಾಗಿ ಕೊಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು.

ಈ ಮೂರೂ ನಿವಾಸಗಳು ಖಾಲಿ ಇದ್ದು, ವಿಧಾನಸೌಧಕ್ಕೆ ಹತ್ತಿರದಲ್ಲೇ ಇರುವುದರಿಂದ ಮೂರರಲ್ಲಿ ಒಂದನ್ನು ಕೊಡುವಂತೆ ಅಶೋಕ್ ಕೋರಿದ್ದಾರೆ.

R Ashok
'ವಿರೋಧ ಪಕ್ಷದ ನಾಯಕನಾದ ನನಗೆ 2 ವರ್ಷಗಳಿಂದ ಸರ್ಕಾರ ಅಧಿಕೃತ ನಿವಾಸ ನೀಡಿಲ್ಲ, ನಮಗೆ ಪ್ರೋಟೋಕಾಲ್ ಪಾಠ ಮಾಡುತ್ತಾರೆ': ಆರ್ ಅಶೋಕ್

ಈ ಹಿಂದೆ ತಾವು ಸಚಿವರಾಗಿದ್ದಾಗ ತಮಗೆ ಹಂಚಿಕೆ ಆಗಿದ್ದ ರೇಸ್‌‍ವ್ಯೂ ಕಾಟೇಜ್‌ ನಿವಾಸ ಸಂಖ್ಯೆ-2ನ್ನು ಅಂದಿನ ಸಭಾಧ್ಯಕ್ಷರಿಗೆ ಬಿಟ್ಟುಕೊಟ್ಟಿದ್ದಾಗಿ ಎಂದು ಅವರು ಪತ್ರದಲ್ಲಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.

ಗುರುವಾರ ವಿಧಾನಸೌಧದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಯ್ಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಸಭೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನಸಭೆಯ ಸಭಾಧ್ಯಕ್ಷ ಯು ಟಿ ಖಾದರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್‌.ಕೆ.ಪಾಟೀಲ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಭಾಗವಹಿಸಿದ್ದರು.

ಈ ವೇಳೆ ವಿಚಾರ ಪ್ರಸ್ತಾಪಿಸಿದ ಅಶೋಕ್‌ ಅವರು, ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಳಿಸುತ್ತಿದೆ ಅಧಿಕೃತ ವಿಧಾನ ಸಭೆಯ ವಿರೋಧ ಪಕ್ಷದ ನಾಯಕನಿಗೆ ನಿಮ್ಮ ಸರ್ಕಾರ ಒಂದು ಸರ್ಕಾರಿ ಬಂಗಲೇ ನೀಡದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಈ ರೀತಿ ನಡೆಸಿಕೊಳ್ಳುವುದೇ? ಎಂದು ಖಾರವಾಗಿ ಪ್ರಶ್ನೆ ಮಾಡಿದರು.

ಹಿಂದೆ ನೀವು ವಿರೋಧ ಪಕ್ಷದ ನಾಯಕನಾಗಿದ್ದ ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನಿಮಗೆ ಕೇಳಿದ ಕಡೆ ಸರ್ಕಾರಿ ಬಂಗಲೆಯನ್ನು ಮಂಜೂರು ಮಾಡಿದ್ದೆವುಯ ಮೂರು ವರ್ಷಗಳಲ್ಲಿ ನಾನು ಮುಖ್ಯ ಕಾರ್ಯದರ್ಶಿಯವರಿಗೆ ಆರು ಬಾರಿ ಪತ್ರ ಬರೆದಿದ್ದೇನೆ. ಆದರೂ ಒಂದು ನಿವಾಸ ಮಂಜೂರು ಮಾಡಲು ಸಾಧ್ಯವಾಗಿಲ್ಲ ಎಂದರೆ ಇದನ್ನು ಜವಾಬ್ದಾರಿತ ಸರ್ಕಾರ ಎಂದು ಕರೆಯಬೇಕೇ? ಮುಂದೆ ನಮ್ಮ ಸರ್ಕಾರ ಬಂದರೆ, ನಾನು ಕೂಡಾ ಹೇಗೆ? ಯಾರಿಗೆ? ಯಾವಾಗ? ಮನೆ ಮಂಜೂರು ಮಾಡಬೇಕು ಎಂಬುದು ಗೊತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಇದು ಗಂಭೀರವಾದ ವಿಷಯ ನನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ತಕ್ಷಣವೇ ನಿಮಗೆ ಸರ್ಕಾರಿ ಬಂಗಲೇ ಮಂಜೂರು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನು ಮಂಡಿಸುವುದಾಗಿ ಆಶ್ವಾಸನೆ ನೀಡಿದ ಸಿಎಂ, ಸಭೆಯಲ್ಲಿ ಭಾಗಿಯಾಗಿದ್ದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಕೂಡಲೇ ಅಗತ್ಯವಿರುವ ಕಡೆ ನಿವಾಸ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com