ರಾಜ್ಯಸಭೆ ಚುನಾವಣೆ BJP ಅಭ್ಯರ್ಥಿ ಪ್ರೊ. ಎಂ. ನಾಗರಾಜ್ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದರು 
ರಾಜಕೀಯ

ರಾಜ್ಯಸಭೆಗೆ ಸಾಮಾನ್ಯ ಕಾರ್ಯಕರ್ತನನ್ನು BJP ಅಭ್ಯರ್ಥಿ ಮಾಡಿದೆ, ದೇವೇಗೌಡರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ: BY Vijayendra

ಇತ್ತೀಚೆಗಷ್ಟೇ 94ನೇ ವಯಸ್ಸಿಗೆ ಕಾಲಿಟ್ಟಿರುವ ದೇವೇಗೌಡರಿಗೆ ಬಿಜೆಪಿ ಮರುನಾಮನಿರ್ದೇಶನ ನೀಡದಿರುವುದನ್ನು ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ಹಲವು ವಲಯಗಳು ಟೀಕಿಸಿದ ಬೆನ್ನಲ್ಲೇ ವಿಜಯೇಂದ್ರ ಈ ಸ್ಪಷ್ಟನೆ ನೀಡಿದರು.

ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸೋಮವಾರ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಸಾಮಾನ್ಯ ಕಾರ್ಯಕರ್ತನನ್ನು ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ನೀಡುವ ಕುರಿತು ರಾಜ್ಯ ಘಟಕ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ಇತ್ತೀಚೆಗಷ್ಟೇ 94ನೇ ವಯಸ್ಸಿಗೆ ಕಾಲಿಟ್ಟಿರುವ ದೇವೇಗೌಡರಿಗೆ ಬಿಜೆಪಿ ಮರುನಾಮನಿರ್ದೇಶನ ನೀಡದಿರುವುದನ್ನು ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ಹಲವು ವಲಯಗಳು ಟೀಕಿಸಿದ ಬೆನ್ನಲ್ಲೇ ವಿಜಯೇಂದ್ರ ಈ ಸ್ಪಷ್ಟನೆ ನೀಡಿದರು.

ಭಾನುವಾರ ತಡರಾತ್ರಿ ಬಿಜೆಪಿ ಕರ್ನಾಟಕದಿಂದ ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಪ್ರೊ. ಎಂ. ನಾಗರಾಜ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು. ವಿಧಾನಸಭೆಯಲ್ಲಿ ಇರುವ ತನ್ನ ಪ್ರಸ್ತುತ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ. ಈ ಚುನಾವಣೆಯು ಜೂನ್ 18ರಂದು ನಡೆಯಲಿದೆ.

ದೇವೇಗೌಡರು ಸೇರಿದಂತೆ ನಾಲ್ವರು ರಾಜ್ಯಸಭಾ ಸದಸ್ಯರ ಅವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದೆ. ಬಿಜೆಪಿಯ ಮಿತ್ರಪಕ್ಷವಾದ ಜೆಡಿಎಸ್, ತನ್ನ ವರಿಷ್ಠರಾದ ದೇವೇಗೌಡರನ್ನು ಬಿಜೆಪಿ ಮರುನಾಮನಿರ್ದೇಶನ ಮಾಡಲಿದೆ ಎಂಬ ನಿರೀಕ್ಷೆಯಲ್ಲಿತ್ತು.

ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, "ದೇವೇಗೌಡರು ಎನ್‌ಡಿಎ ಬಲವರ್ಧನೆಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಲು ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಹಿರಿಯ ನಾಯಕರು. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ದೇವೇಗೌಡರ ರಾಜ್ಯಸಭಾ ನಾಮನಿರ್ದೇಶನ ಕುರಿತು ರಾಜ್ಯ ಘಟಕ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ," ಎಂದರು. ಅಂತೆಯೇ ರಾಷ್ಟ್ರೀಯ ಮಟ್ಟದ ಬೆಳವಣಿಗೆಗಳ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ಮಾಜಿ ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್ ಅವರ ಹೆಸರೂ ಚರ್ಚೆಯಲ್ಲಿತ್ತು. ಆದರೆ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸಿದ ನಂತರ ಪಕ್ಷದ ನಾಯಕತ್ವವು ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ನಿರ್ಧರಿಸಿದೆ ಎಂದು ಅವರು ಹೇಳಿದರು.

ಸಾಮಾನ್ಯ ಕಾರ್ಯಕರ್ತನನ್ನು BJP ಅಭ್ಯರ್ಥಿ ಮಾಡಿದೆ

"ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಸಾಮಾನ್ಯ ಕಾರ್ಯಕರ್ತನಿಗೆ ನಾವು ಅವಕಾಶ ನೀಡಿದ್ದೇವೆ. ಸುಮಲತಾ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಬಿಜೆಪಿ ಬೆಂಬಲ ನೀಡಿತ್ತು. ನಮ್ಮ ಬೆಂಬಲದಿಂದ ಅವರು ಭಾರೀ ಅಂತರದಿಂದ ಗೆದ್ದಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅವಕಾಶ ಕಲ್ಪಿಸಲು ಅವರು ತಮ್ಮ ಸ್ಥಾನವನ್ನು ತ್ಯಜಿಸಿದರು. ಇದನ್ನು ಯಾರೂ ನಿರಾಕರಿಸಲಾಗುವುದಿಲ್ಲ, ಅಂತೆಯೇ ಇಲ್ಲಿಗೆ ಎಲ್ಲವೂ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕತ್ವವು ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಖಂಡಿತವಾಗಿಯೂ ಪರಿಗಣಿಸಲಿದೆ" ಎಂದು ವಿಜಯೇಂದ್ರ ಹೇಳಿದರು.

ರಾಜ್ಯಸಭೆಗೆ ಪ್ರೊ. ನಾಗರಾಜ ಅವರನ್ನು ಅಭ್ಯರ್ಥಿಯಾಗಿ ಘೋಷಿಸುವ ಜೊತೆಗೆ, ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಲಿಂಗರಾಜ ಪಾಟೀಲ್ ಹಾಗೂ ರಘು ಕೌಟಿಲ್ಯ ಅವರನ್ನು ಬಿಜೆಪಿ ಅಭ್ಯರ್ಥಿಗಳಾಗಿ ಭಾನುವಾರ ರಾತ್ರಿ ಘೋಷಿಸಿತು. ಅಭ್ಯರ್ಥಿಗಳ ಬಗ್ಗೆ ಮಾತನಾಡಿದ ವಿಜಯೇಂದ್ರ, ಪ್ರೊ. ನಾಗರಾಜ ಅವರು ಹಿಂದುಳಿದ ವರ್ಗದ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಆರ್‌ಎಸ್‌ಎಸ್‌ನಲ್ಲಿ ಬೆಳೆದು, ಎಬಿವಿಪಿ ಹಾಗೂ ಬಿಜೆಪಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾಗರಾಜ ಅವರು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಲಿಂಗರಾಜ ಪಾಟೀಲ್ ಅವರು ಎಬಿವಿಪಿ ದಿನಗಳಿಂದಲೇ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.

ರಘು ಕೌಟಿಲ್ಯ ಅವರು ಮಡಿವಾಳ ಸಮುದಾಯಕ್ಕೆ ಸೇರಿದವರಾಗಿದ್ದು, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿಯೂ ಸೇರಿದಂತೆ ಹಲವು ಸಂಘಟನಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದಲ್ಲದೆ, ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು ಅವರು ಎರಡು ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ, ಅಲ್ಪ ಅಂತರದಲ್ಲಿ ಸೋಲು ಅನುಭವಿಸಿದ್ದರು.

ಕಾಂಗ್ರೆಸ್‌ನ ಗೋವಿಂದರಾಜು, ನಸೀರ್ ಅಹಮದ್, ತಿಪ್ಪಣ್ಣಪ್ಪ ಮತ್ತು ಬಿ.ಕೆ. ಹರಿಪ್ರಸಾದ್ ಹಾಗೂ ಬಿಜೆಪಿಯ ಎನ್. ನಾಗರಾಜು (ಎಂಟಿಬಿ), ಪ್ರತಾಪ್ ಸಿಂಹ ನಾಯಕ್ ಕೆ. ಮತ್ತು ಸುನೀಲ್ ವಲ್ಯಾಪುರ್ ಅವರ ಅವಧಿ ಜೂನ್ 30ರಂದು ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ.

ವಿಧಾನಸಭೆಯಲ್ಲಿರುವ ಪ್ರಸ್ತುತ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಹೊಂದಿದ್ದು, ಉಳಿದ ಐದು ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 224 ಸದಸ್ಯರ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 135 ಶಾಸಕರಿದ್ದು, ಬಿಜೆಪಿಗೆ 62 ಹಾಗೂ ಜೆಡಿಎಸ್‌ಗೆ 18 ಶಾಸಕರಿದ್ದಾರೆ. ಉಳಿದವರು ಸಣ್ಣ ಪಕ್ಷಗಳು, ಪಕ್ಷೇತರರು ಮತ್ತು ಬಿಜೆಪಿಯಿಂದ ಉಚ್ಚಾಟನೆಯಾದ ಶಾಸಕರಾಗಿದ್ದಾರೆ. ಕರ್ನಾಟಕ ವಿಧಾನಸಭೆಯ ಸದಸ್ಯರು ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಎರಡೂ ಚುನಾವಣೆಗಳಲ್ಲಿ ಮತ ಚಲಾಯಿಸಲಿದ್ದಾರೆ.

ಸಮತೋಲನಗೊಳಿಸುವುದರಲ್ಲೇ ಸಮಯ ಹರಣ

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಅಭಿವೃದ್ಧಿಯ ಕೊರತೆ ಮತ್ತು ಆಂತರಿಕ ಕಲಹಗಳ ವಿಚಾರವಾಗಿ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. "ಹೊಸ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮುಂದಿನ ಎರಡು ವರ್ಷಗಳು ವಿವಿಧ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವುದರಲ್ಲೇ ಕಳೆಯಲಿವೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 48 ಗಂಟೆಗಳಲ್ಲೇ ಸರ್ಕಾರದೊಳಗಿನ ಸಮಸ್ಯೆಗಳು ಗೋಚರಿಸುತ್ತಿವೆ," ಎಂದು ಅವರು ಹೇಳಿದರು.

"ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಭ್ರಷ್ಟಾಚಾರ ಹೊರತುಪಡಿಸಿ ಅವರು ಸಾಧಿಸಿರುವುದೇನೂ ಇಲ್ಲ. ಉಳಿದ ಎರಡು ವರ್ಷಗಳಲ್ಲಿ ಆದರೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಾರೆ ಎಂಬ ಭರವಸೆ ಇತ್ತು. ಆದರೆ ಆಂತರಿಕ ಭಿನ್ನಾಭಿಪ್ರಾಯಗಳಿಂದ ಆ ನಿರೀಕ್ಷೆಯೂ ಮಸುಕಾಗುತ್ತಿದೆ," ಎಂದು ಅವರು ಆರೋಪಿಸಿದರು.

"ಮುಖ್ಯಮಂತ್ರಿ ಬದಲಾದರೂ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಖಾತೆಗಳಿಗಾಗಿ ಈಗಾಗಲೇ ಪೈಪೋಟಿ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಸಚಿವ ಸಂಪುಟ ವಿಸ್ತರಣೆಯೂ ಇನ್ನೂ ಆಗಿಲ್ಲ. ಇನ್ನೂ 20 ಸಚಿವ ಸ್ಥಾನಗಳು ಖಾಲಿ ಇರುವ ಪರಿಸ್ಥಿತಿಯಲ್ಲಿ ವಿಸ್ತರಣೆ ಯಾವಾಗ ನಡೆಯುತ್ತದೆ ಎಂಬುದೇ ಗೊತ್ತಿಲ್ಲ," ಎಂದು ವಿಜಯೇಂದ್ರ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಸರ್ಕಾರದ ವಿರುದ್ಧ ಮಹಾಸಮರಕ್ಕೆ INDIA ಮೈತ್ರಿಕೂಟ ಸಜ್ಜು: ಭಿನ್ನಾಭಿಪ್ರಾಯಗಳ ನಡುವೆಯೂ ಬಲ ತುಂಬುವ ಯತ್ನ, ‘ಒಗ್ಗಟ್ಟೇ ನಮ್ಮ ಶಕ್ತಿ’ ಎಂದ ಮಲ್ಲಿಕಾರ್ಜುನ ಖರ್ಗೆ..!

ಪರಮೇಶ್ವರಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತಾ?: 3 ಬಾರಿ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಕಣ್ಣೀರಿಟ್ಟ DCM!

ಆರ್. ಮಾಧವನ್‌ ಹಿರಿಮೆಗೆ ಮತ್ತೊಂದು ಗರಿ: ಬಹುಮುಖ ಪ್ರತಿಭೆ ನಟ, ಚಿತ್ರಕಥೆಗಾರ, ನಿರ್ದೇಶಕನಿಗೆ Padma Shri ಪ್ರಶಸ್ತಿ

India vs Afghanistan: 2 ಎಸೆತದಲ್ಲಿ 3 ವಿಕೆಟ್, 36 ಓವರ್ ನಲ್ಲೇ ಆಪ್ಘನ್ ಹೆಡೆಮುರಿ ಕಟ್ಟಿದ ಭಾರತ, Gill ಪಡೆಗೆ ಇನ್ನಿಂಗ್ಸ್ ಜಯ

ಚದುರಂಗದ ಆಟದಲ್ಲಿ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರೂ ಹೇಳುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

SCROLL FOR NEXT