ಬೆಂಗಳೂರು: ಬಿಡದಿ ಪ್ರದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆ ವಿರುದ್ಧ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರೈತರ ಭೂಮಿಯನ್ನು ಕಸಿದುಕೊಳ್ಳುವ ಸರ್ಕಾರ ಪ್ರಾಯೋಜಿತ ಹಗರಣ ಇದಾಗಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಂದಿನಿಂದ ನನ್ನ ಹೋರಾಟ ಆರಂಭವಾಗುತ್ತದೆ” ಎಂದು ಘೋಷಿಸಿದರು.
ರೈತರ ತೀವ್ರ ವಿರೋಧದ ನಡುವೆಯೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯೋಜನೆ ಜಾರಿಗೊಳಿಸಲು ಯಾಕೆ ಹಠ ಹಿಡಿದಿದ್ದಾರೆ ಎಂದು ಪ್ರಶ್ನಿಸಿದರು.
ಈ ಯೋಜನೆಯನ್ನು ಎಚ್.ಡಿ. ಕುಮಾರಸ್ವಾಮಿ ಆರಂಭಿಸಿದ್ದರು ಎಂದು ಡಿಕೆಶಿ ಹೇಳುತ್ತಾರೆ. ಆದರೆ, ಜನರ ವಿರೋಧದಿಂದಲೇ ಕುಮಾರಸ್ವಾಮಿ ಅದನ್ನು ಕೈಬಿಟ್ಟಿದ್ದರು. ಹಾಗಿದ್ದರೆ ಈಗ ಶಿವಕುಮಾರ್ ಕೂಡ ಅದೇ ಮಾಡಬಾರದೇ?” ಎಂದು ಪ್ರಶ್ನಿಸಿದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, “ಬೆಂಗಳೂರು ಸುತ್ತಮುತ್ತ ಬಡವರ ಜಮೀನು ಕಬಳಿಸುವ ಶಕ್ತಿಗಳನ್ನು ನಿಯಂತ್ರಿಸಬೇಕು” ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಬಿಡದಿಗೆ ಬಂದು ರೈತರ ಪರಿಸ್ಥಿತಿ ನೋಡಬೇಕು. “ಇಲ್ಲಿಯವರೆಗೆ ಸ್ಥಳೀಯ ಶಾಸಕರು, ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಜನರ ಸಮಸ್ಯೆ ಕೇಳಿಲ್ಲ. ಇಲ್ಲಿ ದೊಡ್ಡ ದಂಧೆ ನಡೆಯುತ್ತಿದೆ. ರೈತರ ಭೂಮಿಯನ್ನು ಕಬಳಿಸಿ ಹಗರಣ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡ, “ಮೊದಲು ಅವರು ರೈತರ ಬಳಿ ಹೋಗಿ ಅವರನ್ನು ಎದುರಿಸಲಿ. ನಂತರ ನಾನು ಮಾತನಾಡುತ್ತೇನೆ” ಎಂದು ಟೀಕಿಸಿದರು.
ಸಿದ್ದರಾಮಯ್ಯ ನನ್ನ ಹಳೆಯ ಸ್ನೇಹಿತ ಮತ್ತು ಸಹೋದ್ಯೋಗಿ. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಆದರೆ, ಇಲ್ಲಿ ಏನಾಗುತ್ತಿದೆ ಎಂಬುದನ್ನು ಯಾರೂ ಗಮನಿಸುತ್ತಿಲ್ಲ ಎಂಬುದು ನೋವುಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಲು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಐದು ಟೌನ್‌ಶಿಪ್ ಯೋಜನೆಗಳನ್ನು ಆರಂಭಿಸಿದ್ದರು. ಆಗ ಕಾಂಗ್ರೆಸ್ ನಾಯಕರೇ ತನಿಖಾ ಸಮಿತಿ ರಚಿಸಿ ಭೂ ಕಬಳಿಕೆ ಆರೋಪ ಮಾಡಿದ್ದರು.
ಈಗಲೂ ಬಿಡದಿ ಟೌನ್‌ಶಿಪ್ ಯೋಜನೆಗೆ ಜನರ ವಿರೋಧ ಮತ್ತು ಆಕ್ರೋಶ ಇದೆ. ಸರ್ಕಾರ ಕೂಡಲೇ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಬಿಡದಿಯ ರೈತರು ಕಣ್ಣೀರು ಹಾಕುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ 20 ಸಾವಿರ ಏಕರೆ ಜಮೀನು ಯಾರ ಹೆಸರಲ್ಲಿ ಇದೆ? ಸಿದ್ದರಾಮಯ್ಯ ಅವರೇ, ನೀವು ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಮತ್ತು ಬೆಂಗಳೂರು ನಗರ ಸಚಿವ ಸ್ಥಾನ ಹೊಂದಿರುವ (ಶಿವಕುಮಾರ್) ಅವರ ಒತ್ತಡಕ್ಕೆ ಮಣಿಯುತ್ತಿದ್ದೀರಿ. ಅವರು ಪಟ್ಟಣ ನಿರ್ಮಾಣದ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ನಿರ್ಮಿಸಿದ್ದ ರೂ.250 ಕೋಟಿ ನೀರಾವರಿ ಯೋಜನೆ ಇರುವ ಫಲವತ್ತಾದ ಭೂಮಿಯನ್ನು ಟೌನ್‌ಶಿಪ್ ಹೆಸರಿನಲ್ಲಿ ಕಬಳಿಸಲು ಯತ್ನಿಸಲಾಗುತ್ತಿದೆ. ಭೂಮಿ ಸ್ವಾಧೀನ ಮಾಡಿದ ಬಳಿಕ ಅದನ್ನು ಯಾರಿಗೆ ನೀಡಲಾಗುತ್ತದೆ? ಈಗ ನಿರ್ಧಾರ ಕೈಗೊಳ್ಳಬೇಕಾದ ಸಮಯ ಸಿದ್ದರಾಮಯ್ಯ ಅವರದ್ದು ಎಂದು ಹೇಳಿದರು.