ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರರಾದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಭಾನುವಾರ ಬೆಂಗಳೂರಿನ ಅವರ ನಿವಾಸದಲ್ಲಿ ಸನ್ಮಾನಿಸಿದರು. 
ರಾಜಕೀಯ

ನಿತಿನ್ ನಬೀನ್ ಭೇಟಿ ಬಳಿಕ BJP ನಾಯಕತ್ವ ಚರ್ಚೆ ಮತ್ತೆ ಮುನ್ನೆಲೆಗೆ: ವಿಜಯೇಂದ್ರ ಭವಿಷ್ಯ ಕುರಿತು ಹೆಚ್ಚಿದ ಕುತೂಹಲ; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ತೀವ್ರ..!

ಬಿಜೆಪಿ ನಿರ್ಮಾಣದಲ್ಲಿ ಯಡಿಯೂರಪ್ಪ ಅವರ ಪಾತ್ರವನ್ನು ಗಮನಿಸಿದರೆ, ಅವರ ಕುಟುಂಬವನ್ನು ಕಡೆಗಣಿಸುವುದು ಸುಲಭವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಬೆಂಗಳೂರು: 2028 ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ವಿಚಾರ ಕುರಿತು ಚರ್ಚೆಗಳು ತೀವ್ರಗೊಂಡಿವೆ. ನಿತಿನ್ ನಬೀನ್ ಅವರು ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷರಾಗ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ.

ಮುಖ್ಯವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೆಸರು ಕೇಳಿಬರುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರರಾಗಿರುವ ವಿಜಯೇಂದ್ರ ಅವರ ಅವಧಿ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದ್ದು, ಅವರ ಮುಂದಿನ ಭವಿಷ್ಯದ ಬಗ್ಗೆ ಪಕ್ಷದೊಳಗೆ ಚರ್ಚೆಗಳು ಗರಿಗೆದರಿವೆ.

ಪಕ್ಷದ ಮೂಲಗಳ ಪ್ರಕಾರ, ಲಿಂಗಾಯತ ಸಮುದಾಯದಲ್ಲಿ ವಿಜಯೇಂದ್ರ ಅವರಿಗೆ ಬಲವಾದ ಬೆಂಬಲವಿದೆ. “ವಿಜಯೇಂದ್ರ ಕೇವಲ ನಾಯಕನಲ್ಲ, ಲಿಂಗಾಯತ ಸಮುದಾಯದ ಆಶಯಗಳ ಪ್ರತೀಕ” ಎಂಬ ಅಭಿಪ್ರಾಯ ಪಕ್ಷದೊಳಗೆ ಕೇಳಿಬರುತ್ತಿದೆ.

ಬಿಜೆಪಿ ನಿರ್ಮಾಣದಲ್ಲಿ ಯಡಿಯೂರಪ್ಪ ಅವರ ಪಾತ್ರವನ್ನು ಗಮನಿಸಿದರೆ, ಅವರ ಕುಟುಂಬವನ್ನು ಕಡೆಗಣಿಸುವುದು ಸುಲಭವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಪಕ್ಷದಲ್ಲಿರುವ ಅಸಂಖ್ಯಾತ ಯಡಿಯೂರಪ್ಪ ನಿಷ್ಠಾವಂತರಿಗೆ, ಅವರ ಮಗನನ್ನು ಇಷ್ಟು ಬೇಗ ನಾಯಕತ್ವದಿಂದ ಕೆಳಗಿಳಿಸುವುದು ಆಳವಾದ ಅಸಮಾಧಾನ ಮತ್ತು ದ್ರೋಹದ ಭಾವನೆಯನ್ನು ಉಂಟುಮಾಡುತ್ತದೆ.

"ಬಿಎಸ್‌ವೈ ತಮ್ಮ ಇಡೀ ಜೀವನವನ್ನು ಈ ಪಕ್ಷಕ್ಕೆ ನೀಡಿದ್ದಾರೆ. ತಮ್ಮ ರಕ್ತ, ಬೆವರು ಮತ್ತು ಕಣ್ಣೀರಿನಿಂದ ಪಕ್ಷವನ್ನು ನಿರ್ಮಿಸಿದ್ದಾರೆ. ಆ ಪರಂಪರೆಯನ್ನು ನಾವು ಹೇಗೆ ಮರೆಯಲು ಸಾಧ್ಯ" ಎಂದು ಪಕ್ಷದ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಯಡಿಯೂರಪ್ಪ ಅಭಿನಂದನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದನ್ನು ಕೂಡ ಮೋದಿ-ಶಾ ನಾಯಕತ್ವವು ಯಡಿಯೂರಪ್ಪ ಕುಟುಂಬದ ಮೇಲೆ ವಿಶ್ವಾಸ ಇಟ್ಟಿದೆ ಎಂಬ ಸಂದೇಶವಾಗಿ ವಿಶ್ಲೇಷಿಸಲಾಗುತ್ತಿದೆ.

ನಿತಿನ್ ನಬೀನ್, ಯಡಿಯೂರಪ್ಪ ಹಾಗೂ ವಿಜಯೇಂದ್ರ ಒಟ್ಟಿಗೆ ಭಾಗವಹಿಸಿದ್ದ ಬಿಜೆಪಿ ಕೋರ್ ಕಮಿಟಿ ಸಭೆಗೂ ವಿಶೇಷ ಮಹತ್ವ ಸಿಕ್ಕಿದೆ.

ಆದರೆ, ಪಕ್ಷದೊಳಗಿನ ಕೆಲ ನಾಯಕರು ವಿಜಯೇಂದ್ರ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಾಯಕರೊಂದಿಗೆ ಸ್ನೇಹಪರ ಸಂಬಂಧ ಇಟ್ಟುಕೊಂಡಿದ್ದಾರೆ, ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಈ ಅಸಮಾಧಾನದ ಧ್ವನಿ ದೆಹಲಿಗೂ ತಲುಪಿದೆ ಎನ್ನಲಾಗುತ್ತಿದೆ.

ವಿಜಯೇಂದ್ರ ಅವರನ್ನು ಬದಲಿಸುವ ವಿಚಾರದಲ್ಲೂ ಹಲವು ಹೆಸರುಗಳು ಚರ್ಚೆಗೆ ಬರುತ್ತಿವೆ. ಪ್ರಹ್ಲಾದ್ ಜೋಶಿ, ಬಿ.ಎಲ್. ಸಂತೋಷ್ ಹೆಸರುಗಳು ಕೇಳಿಬಂದರೂ ಸಮುದಾಯದ ಸಮೀಕರಣದ ಕಾರಣದಿಂದ ಈ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ವಿ. ಸೋಮಣ್ಣ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ಅರವಿಂದ ಬೆಲ್ಲದ್ ಹೆಸರುಗಳೂ ಚರ್ಚೆಯಲ್ಲಿವೆ. ಆದರೆ, ಯಡಿಯೂರಪ್ಪ ಕುಟುಂಬದಷ್ಟು ಭಾವನಾತ್ಮಕ ಹಾಗೂ ಮತದಾರರ ಸಂಪರ್ಕ ಇನ್ನಾರಿಗೂ ಇಲ್ಲ ಎನ್ನುವುದು ಪಕ್ಷದ ಒಂದು ವಲಯದ ಅಭಿಪ್ರಾಯವಾಗಿದೆ.

2028ರ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಯನ್ನೂ ಬಿಜೆಪಿ ನಾಯಕತ್ವ ಗಂಭೀರವಾಗಿ ಪರಿಗಣಿಸುತ್ತಿದೆ.

ಜೆಡಿಎಸ್ ಬಳಿ ಈಗಾಗಲೇ ಹೆಚ್.ಡಿ. ಕುಮಾರಸ್ವಾಮಿ ಎಂಬ ಸಿಎಂ ಮುಖವಿದೆ. ಹೀಗಾಗಿ ಬಿಜೆಪಿ ಕೂಡ ಮುಂದಿನ ಚುನಾವಣೆಗೆ ಸ್ಪಷ್ಟ ನಾಯಕತ್ವ ತಂತ್ರ ರೂಪಿಸಲು ಸಜ್ಜಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಕುರಿತು ಅಂತಿಮ ನಿರ್ಧಾರ ನವೆಂಬರ್ ವೇಳೆಗೆ ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಏರಿದ ಇಂಧನ ದರ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ; 2 ವಾರಗಳಲ್ಲಿ ರೂ. 7.5 ಏರಿಕೆ, ತೈಲ ಕಂಪನಿಗಳಿಂದ ವಾಹನ ಸವಾರರಿಗೆ ಮತ್ತೆ ಶಾಕ್..!

ಕುರ್ಚಿ ಕದನಕ್ಕೆ ಕೊನೆಗೂ climax? ಸಿಎಂ ಡಿಸಿಎಂ ಗೆ ಹೈಕಮಾಂಡ್ ಬುಲಾವ್; ರಾಜ್ಯ ರಾಜಕೀಯದಲ್ಲಿ ಸಂಚಲನ!

I Love India, I Love Modi: ಭಾರತ ನನ್ನನ್ನ 100% ನಂಬಬಹುದು- ಡೊನಾಲ್ಡ್ ಟ್ರಂಪ್

ಕದನ ವಿರಾಮ, ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದಕ್ಕೆ ಇರಾನ್-ಯುಎಸ್ ಹತ್ತಿರ: 'ಆತುರ ಬೇಡ'- ಟ್ರಂಪ್ ಹೊಸ ವರಸೆ!

ಇರಾನ್-ಅಮೆರಿಕಾ ಕದನ ವಿರಾಮ ನಡುವೆ ಯುಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ; ರಾಜಧಾನಿಗೆ ಅಪ್ಪಳಿಸಿದ ಹೊಸ ಹೈಪರ್ಸಾನಿಕ್ ಕ್ಷಿಪಣಿ; Video

SCROLL FOR NEXT