ಕರ್ನಾಟಕ ಕಾಂಗ್ರೆಸ್  
ರಾಜಕೀಯ

ಒಳಗೆ ಭಗಭಗ, ಹೊರಗೆ ಝಗಝಗ: ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಕಾಂಗ್ರೆಸ್ ನಾಯಕರು...

ಎಕ್ಸ್ (X) ನಲ್ಲಿ ಪ್ರಕಟಿಸಿದ ದೀರ್ಘ ಸಂದೇಶದಲ್ಲಿ ಡಿ ಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ “ಬಲದ ಸ್ತಂಭ” ಎಂದು ಕೊಂಡಾಡಿ, ಸಾಮೂಹಿಕ ನಾಯಕತ್ವದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷವು ನಿರಂತರ ಗುಂಪುಗಾರಿಕೆ ಮತ್ತು ಆಂತರಿಕ ಪೈಪೋಟಿಗಳನ್ನು ಎದುರಿಸುತ್ತಿದ್ದರೂ, ನಿನ್ನೆ ಶುಕ್ರವಾರ ಪಕ್ಷವು ಹೊಸ ರೀತಿಯ ಏಕತೆಯ ಪ್ರದರ್ಶನವನ್ನು ರಾಜ್ಯದ ಜನತೆ ಮುಂದೆ ತೋರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸಿದ ಬಳಿಕ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ.

ಎಕ್ಸ್ (X) ನಲ್ಲಿ ಪ್ರಕಟಿಸಿದ ದೀರ್ಘ ಸಂದೇಶದಲ್ಲಿ ಡಿ ಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ “ಬಲದ ಸ್ತಂಭ” ಎಂದು ಕೊಂಡಾಡಿ, ಸಾಮೂಹಿಕ ನಾಯಕತ್ವದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

2020ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಜವಾಬ್ದಾರಿ ನನಗೆ ವಹಿಸಲ್ಪಟ್ಟ ದಿನದಿಂದಲೇ ಸಿದ್ದರಾಮಯ್ಯ ಅವರು ಬಲದ ಸ್ತಂಭದಂತೆ ನನ್ನ ಜೊತೆ ನಿಂತಿದ್ದಾರೆ. ಪಕ್ಷವನ್ನು ಬಲಪಡಿಸುವುದಕ್ಕೂ ಹಾಗೂ ಅದರ ಆಶಯಗಳನ್ನು ಜನರಿಗೆ ತಲುಪಿಸುವುದಕ್ಕೂ ನಾವು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದೇವೆ ಎಂದು ಡಿ ಕೆ ಶಿವಕುಮಾರ್ ಬರೆದಿದ್ದಾರೆ.

ಉಪ ಮುಖ್ಯಮಂತ್ರಿಯಾಗಿ ಅವರೊಂದಿಗೆ ಕಾರ್ಯನಿರ್ವಹಿಸಿದ್ದು ನನಗೆ ಒಂದು ಗೌರವದ ವಿಷಯವಾಗಿದೆ. ಅವರ ಅನುಭವ, ಜ್ಞಾನ ಮತ್ತು ರಾಜಕೀಯ ದೂರದೃಷ್ಟಿಯಿಂದ ನಿರಂತರವಾಗಿ ಕಲಿಯುವ ಅವಕಾಶ ನನಗೆ ಸಿಕ್ಕಿದೆ. ಮುಂದಿನ ವರ್ಷಗಳಲ್ಲಿಯೂ ಕರ್ನಾಟಕದ ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕಾಗಿ ನಾವು ಕಾರ್ಯನಿರ್ವಹಿಸುವಾಗ ಅವರ ಮಾರ್ಗದರ್ಶನ ನಮ್ಮೆಲ್ಲರಿಗೂ ಪ್ರೇರಣೆ ಮತ್ತು ಶಕ್ತಿಯನ್ನು ನೀಡಲಿ ಎಂದು ನಾನು ಹೃತ್ಪೂರ್ವಕವಾಗಿ ಆಶಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ವೇಗವಾಗಿ ನಡೆಯಬೇಕೆಂದರೆ ಒಬ್ಬರೇ ನಡೆಯಿರಿ; ದೂರ ಸಾಗಬೇಕೆಂದರೆ ಜೊತೆಯಾಗಿ ನಡೆಯಿರಿ ಎಂಬ ಗಾದೆಯನ್ನು ಉಲ್ಲೇಖಿಸಿದ ಡಿ ಕೆ ಶಿವಕುಮಾರ್, ಕರ್ನಾಟಕದ ಜನರಿಗಾಗಿ ಈ ಪಯಣವನ್ನು ಒಟ್ಟಾಗಿ ಮುಂದುವರಿಸಲು ತಾವು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಈ ಪ್ರಶಂಸಾತ್ಮಕ ಸಂದೇಶವು ಕಳೆದ ಮೂರು ವರ್ಷಗಳಿಂದ ನಡೆದ ಅನೇಕ “ಏಕತೆ” ಸಭೆಗಳು, ಛಾಯಾಚಿತ್ರ ಪ್ರದರ್ಶನಗಳು, ಜಂಟಿ ಸಾರ್ವಜನಿಕ ಕಾರ್ಯಕ್ರಮಗಳು, ಉಪಹಾರ ಕೂಟಗಳು ಹಾಗೂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಬಣಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಿ ತೋರಿಸಲು ನೀಡಲಾಗಿದ್ದ ಹೇಳಿಕೆಗಳ ಹಿನ್ನೆಲೆಯಲ್ಲಿಯೇ ಬಂದಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪಕ್ಷದೊಳಗಿನ ಗುಂಪುಗಾರಿಕೆ, ಜಾತಿ ಸಮೀಕರಣಗಳು ಹಾಗೂ ನಾಯಕತ್ವದ ಮಹತ್ವಾಕಾಂಕ್ಷೆಗಳನ್ನು ಸಮತೋಲನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಮಧ್ಯಪ್ರವೇಶಿಸಬೇಕಾಯಿತು.

ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ತಮ್ಮ ಅವಧಿಯ ಪ್ರಮುಖ ಭಾಗವನ್ನು ಪೂರ್ಣಗೊಳಿಸಿದ ಬಳಿಕ ಸಿದ್ದರಾಮಯ್ಯ ಅವರು ಗುರುವಾರ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದು, ಇಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ ಕೆ ಶಿವಕುಮಾರ್ ಅವರನ್ನು ಹೊಸ ನಾಯಕರಾಗಿ ಅಧಿಕೃತವಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ. ಇದರಿಂದ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ದಾರಿ ಸುಗಮವಾಗಲಿದೆ.

ನಾಯಕತ್ವ ಬದಲಾವಣೆ ಮೇಲ್ನೋಟಕ್ಕೆ ಸುಗಮವಾಗಿ ನಡೆಯುತ್ತಿರುವಂತೆ ಕಂಡರೂ, ಪಕ್ಷವು ಮತ್ತೆ ಮತ್ತೆ ಏಕತೆಯ ಬಗ್ಗೆ ಒತ್ತಿ ಹೇಳುತ್ತಿರುವುದು ಆಂತರಿಕ ಒತ್ತಡಗಳು ಇನ್ನೂ ಇವೆ ಎಂಬುದನ್ನು ಸೂಚಿಸುತ್ತದೆ.

ಇನ್ನೆರಡು ವರ್ಷಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ರಾಜಕೀಯ ಹಿನ್ನಡೆಯಾಗಿ ಪರಿಣಮಿಸದಂತೆ ಕಾಂಗ್ರೆಸ್ ಸ್ಥಿರತೆ ಮತ್ತು ಒಗ್ಗಟ್ಟಿನ ಚಿತ್ರಣವನ್ನು ಜನರ ಮುಂದೆ ಪ್ರದರ್ಶಿಸಲು ಪ್ರಯತ್ನಿಸುತ್ತಿದೆ.

ರಾಜಕೀಯ ವಿಶ್ಲೇಷಕ ಪ್ರೊ. ಜಯರಾಮು, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಏಕತೆ ಹಾಗೂ ಸುಗಮ ಅಧಿಕಾರ ಹಸ್ತಾಂತರದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಇದು ಬಹುತೇಕ ಯೋಜಿತ ಪ್ರದರ್ಶನ. ಇಬ್ಬರ ರಾಜಕೀಯ ದೃಷ್ಟಿಕೋನ, ಗುರಿಗಳು, ಅವುಗಳನ್ನು ಸಾಧಿಸುವ ತಂತ್ರಗಳು ಹಾಗೂ ರಾಜಕೀಯ ವ್ಯಕ್ತಿತ್ವಗಳು ಭಿನ್ನವಾಗಿವೆ. ಆಡಳಿತ ಸುಗಮವಾಗಿ ಸಾಗಲು ಮತ್ತು 2028ರ ಚುನಾವಣಾ ಸಮರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯನ್ನು ಒಗ್ಗಟ್ಟಿನಿಂದ ಎದುರಿಸಲು ಏಕತೆಯ ಚಿತ್ರಣವನ್ನು ನಿರ್ಮಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಇಂದು ಕರ್ನಾಟಕದ ನೂತನ ಸಿಎಂ ಆಯ್ಕೆ: ಸಂಜೆ 4ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಹಾಸನದ ಏಕೈಕ ಶಾಸಕ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಿ: ರಾಹುಲ್ ಗಾಂಧಿಗೆ ಶ್ರೇಯಸ್ ಪಟೇಲ್ ಪತ್ರ

ಸಿದ್ದರಾಮಯ್ಯ ರಾಜಮನೆತನಕ್ಕೆ ಹತ್ತಿರವೂ ಇಲ್ಲ, ದೂರವೂ ಇಲ್ಲ: ಪ್ರಮೋದಾದೇವಿ ಒಡೆಯರ್

ಅಭಿಷೇಕ್ ರಾಜಕೀಯ ಪ್ರವೇಶ: ಸಿದ್ದರಾಮಯ್ಯ ರಾಜಿನಾಮೆ ಬಗ್ಗೆ ಸುಮಲತಾ ಅಂಬರೀಷ್ ಪ್ರತಿಕ್ರಿಯೆ

ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ತೀವ್ರ ಲಾಬಿ: ಕಾಂಗ್ರೆಸ್ ವರಿಷ್ಠರ ಭೇಟಿಗಾಗಿ ದೆಹಲಿಯಲ್ಲಿ ಬೀಡುಬಿಟ್ಟ ಹಲವು ಶಾಸಕರು!

SCROLL FOR NEXT