ಬೆಂಗಳೂರು: ತನಿಖೆ ಎಲ್ಲವನ್ನು ಲೈವ್ ಆಗಿ ಮಾಡ್ತಾರಾ? ತನಿಖೆ ಮಕ್ಕಳ ಆಟವಲ್ಲ, ಅವರಿಂದ ನನಗೆ ಪ್ರಮಾಣಪತ್ರದ ಅಗತ್ಯವಿಲ್ಲ , ಅವರಿಂದ ಕಲಿಯುವುದು ನಮಗೆ ಏನಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ.
ಗೃಹ ಇಲಾಖೆಗೆ ಪ್ರಿಯಾಂಕ್ ಖರ್ಗೆ ಅಸಮರ್ಥ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಹಳ್ಳಿ ಗುಗ್ಗುನಾ, ನಾವೇನು ಬಿಗ್ ಬಾಸ್ ನಡೆಸ್ತಿದ್ದೀವಾ. ತನಿಖೆಯನ್ನು ಲೈವ್ ಸ್ಟ್ರೀಮ್ ಮಾಡೋಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಜನರು ನಿಮಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ, ನಿಮ್ಮ ಪಾಲಿಟಿಕ್ಸ್ ಗೆ ಒಂದು ಬಾರಿಯೂ100 ಸೀಟು ತೆಗೆದುಕೊಂಡಿಲ್ಲ. ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವನಿಗೆ ಸಾಮಾನ್ಯ ಪ್ರಜ್ಞೆ ಇಲ್ಲವಾ..ಇದೇನು ಮಕ್ಕಳ ಆಟನಾ.. ಪ್ರತಿದಿನ ಚಿಕ್ಕಮಕ್ಕಳ ತರ ಆಡ್ತಾನೆ. ಘನತೆ ಕಳೆದುಕೊಂಡು ಹೀಗೆಲ್ಲಾ ಮಾತನಾಡಬಾರದು ಎಂದು ಕಿಡಿಕಾರಿದ್ದಾರೆ.
ವಯಕ್ತಿಕವಾಗಿ ಮಾತನಾಡೋದು ಬಿಟ್ಟು, ತನಿಖೆ ಬಗ್ಗೆ ಮಾತನಾಡಿ, ದಾಖಲೆ ಇದ್ದರೆ ಕೊಡಿ, 2015 ರಲ್ಲಿ ಆಗಿರೋದು ಗೃಹ ಇಲಾಖೆಗೆ ಹೇಗೆ ಸಂಬಂಧ ಪಡುತ್ತೆ.. ಇವರೇ ಮುಖ್ಯಮಂತ್ರಿಯಾಗಿದ್ದರಲ್ಲಾ? ಆವಾಗ ಕತ್ತೆಕಾಯ್ತಿದ್ದರಾ? ಅವರಿಗೆ ಆವಾಗ ಗೊತ್ತಿರಲಿಲ್ಲ. ವಿಲೇಜ್ ಈಡಿಯಟ್ ತರ ಆಡೋದನ್ನ ನಿಲ್ಲಿಸಬೇಕು ಎಂದು ಹರಿಹಾಯ್ದಿದ್ದಾರೆ.