ವೀರಪ್ಪ ಮೊಯ್ಲಿ 
ರಾಜಕೀಯ

'ನರೇಂದ್ರ ಮೋದಿ ಜೈಲಿಗೆ ಹೋಗದಂತೆ ನಮ್ಮ ನಾಯಕರೇ ತಡೆದರು, ಅದರಿಂದಲೇ ಇಂದು ಕಾಂಗ್ರೆಸ್‌ಗೆ ಸಂಕಷ್ಟ': ವೀರಪ್ಪ ಮೊಯ್ಲಿ

ಪಕ್ಷದಲ್ಲಿ 'ಯಥಾಸ್ಥಿತಿ'ಯನ್ನು ಬಯಸಿದ್ದ 'ನಮ್ಮದೇ ಕೆಲವು ನಾಯಕರು' ಇಲ್ಲದಿದ್ದಿದ್ದರೆ, ಮೋದಿ ಅಧಿಕಾರಕ್ಕೆ ಬರುವುದನ್ನು ಕಾಂಗ್ರೆಸ್ ತಡೆಯಬಹುದಿತ್ತು ಎಂದೂ ಹೇಳಿದರು.

ಬೆಂಗಳೂರು: ಯುಪಿಎ (UPA) ಸರ್ಕಾರ ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್ ಪಕ್ಷದ ಕೆಲವೇ ಕೆಲವು ನಾಯಕರು ನರೇಂದ್ರ ಮೋದಿ ಜೈಲಿಗೆ ಹೋಗದಂತೆ ತಡೆದಿದ್ದರು. ಅದರ ಪರಿಣಾಮವಾಗಿಯೇ ನಾವಿಂದು ಕಷ್ಟ ಅನುಭವಿಸುತ್ತಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೊಯ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೊಯ್ಲಿ, ತಾವು ಕೇಂದ್ರ ಕಾನೂನು ಸಚಿವರಾಗಿದ್ದ (2009-11) ಅವಧಿಯನ್ನು ನೆನಪಿಸಿಕೊಂಡರು. ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಗ ಗುಜರಾತ್‌ನ ಗೃಹ ಸಚಿವರಾಗಿದ್ದ ಅಮಿತ್ ಶಾ (ಸದ್ಯ ಕೇಂದ್ರ ಗೃಹ ಸಚಿವ) ವಿರುದ್ಧ ತನಿಖೆ ನಡೆಯುತ್ತಿತ್ತು ಎಂದು ಅವರು ಹೇಳಿದರು.

'ನಾನು ಕಾನೂನು ಸಚಿವನಾಗಿದ್ದೆ. ಅಮಿತ್ ಶಾ ಅವರನ್ನು ಗುಜರಾತ್‌ನಿಂದ ಹೊರಹಾಕಲಾಗಿತ್ತು. ಅವರ ಪ್ರಕರಣವು ಬೇರೆ ರಾಜ್ಯವೊಂದರಲ್ಲಿ ನಡೆಯಬೇಕಿತ್ತು. ಜೈಲಿಗೆ ಹೋದವರಲ್ಲಿ ಅವರೇ ಮೊದಲಿಗರು. ಅವರ ನಂತರ ಮೋದಿ ಅವರ ಸರದಿ ಬರುತ್ತಿತ್ತು ಮತ್ತು ಅವರನ್ನೂ ಸಹ ರಾಜ್ಯದಿಂದ ಹೊರಹಾಕಲಾಗುತ್ತಿತ್ತು' ಎಂದು ಮೊಯ್ಲಿ ಹೇಳಿದರು.

'ಇವು ಪಕ್ಷದೊಳಗಿನ ದುರಂತಗಳಾಗಿದ್ದವು. ಮೋದಿ ವಿರುದ್ಧದ ವಿಚಾರಣೆ ಮತ್ತು ತನಿಖೆಯನ್ನು ನಮ್ಮದೇ ಸರ್ಕಾರ ತಡೆಹಿಡಿದಿತ್ತು. ಇದು (ಅಂದಿನ ಪ್ರಧಾನಿ) ಮನಮೋಹನ್ ಸಿಂಗ್ ಅವರ ಕಾರಣದಿಂದಾಗಿ ಆಗಿದ್ದಲ್ಲ; ಬದಲಾಗಿ, ಬೇರೆ ಕೆಲವು ನಾಯಕರ ಕಾರಣದಿಂದ ಹೀಗಾಯಿತು. ಇಂದು ನಾವು ಅದರಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದೇವೆ' ಎಂದು ಮೊಯ್ಲಿ ತಿಳಿಸಿದರು.

ಪಕ್ಷದಲ್ಲಿ 'ಯಥಾಸ್ಥಿತಿ'ಯನ್ನು ಬಯಸಿದ್ದ 'ನಮ್ಮದೇ ಕೆಲವು ನಾಯಕರು' ಇಲ್ಲದಿದ್ದಿದ್ದರೆ, ಮೋದಿ ಅಧಿಕಾರಕ್ಕೆ ಬರುವುದನ್ನು ಕಾಂಗ್ರೆಸ್ ತಡೆಯಬಹುದಿತ್ತು ಎಂದೂ ಹೇಳಿದರು.

'ಅವರು (ಸೋನಿಯಾ) ಪಕ್ಷದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಬಯಸಿದ್ದರು. ಭವಿಷ್ಯದ ಸವಾಲುಗಳನ್ನು ಪಕ್ಷವು ಹೇಗೆ ಎದುರಿಸಬಹುದು ಎಂಬುದರ ಕುರಿತು ಅವರು ನನ್ನ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದರು' ಎಂದರು.

ಸೋನಿಯಾ ಗಾಂಧಿ ಅವರು ಆ ಸಮಿತಿಯ ವರದಿಯನ್ನು ಜಾರಿಗೆ ತರಲು ಬಯಸಿದ್ದರು. ಆದರೆ, ಕೆಲವು ನಾಯಕರ ಬಗ್ಗೆ ನಿಮಗೆ ಗೊತ್ತೇ ಇದೆಯಲ್ಲ; ಅವರು ಯಥಾಸ್ಥಿತಿಯನ್ನು ಮೀರಿ ಒಂದೇ ಒಂದು ಹೆಜ್ಜೆಯನ್ನೂ ಇಡುವುದಿಲ್ಲ. ಸೂಚಿಸಲಾದ ಬದಲಾವಣೆಗಳನ್ನು ಜಾರಿಗೆ ತರುವುದು ಕಷ್ಟ ಎಂದು ಅವರು ಹೇಳಿದರು' ಎಂದು ತಿಳಿಸಿದರು.

ಆ ಬದಲಾವಣೆಗಳನ್ನು ಮಾಡಿದ್ದಿದ್ದರೆ, ಇಂದು ಮೋದಿ (ಅಧಿಕಾರಕ್ಕೆ) ಬರುತ್ತಿರಲಿಲ್ಲ. ನಿರ್ಧಾರಗಳನ್ನು ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಧೈರ್ಯವನ್ನು ಪ್ರದರ್ಶಿಸಬೇಕು. ನಾವು ಸಂಶಯಗ್ರಸ್ತರಾಗಬಾರದು; ಹಾಗೆ ಮಾಡಿದರೆ ನಮ್ಮ ಶತ್ರುಗಳು ಬಂದು ನಮ್ಮನ್ನು ಮುಗಿಸಿಬಿಡುತ್ತಾರೆ ಎಂದು ಎಚ್ಚರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Wellington Test: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ, ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಕಿವೀಸ್ 99/5

ಖುದ್ದು ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಿದ ಚೀನಾ ಅಧ್ಯಕ್ಷ; ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್!

ಆಸಿಯಾನ್-ಭಾರತ ಶೃಂಗಸಭೆ ಬೆನ್ನಲ್ಲೇ ಸಂಪುಟ ಸಭೆ; ಗದ್ಗದಿತರಾದ ಪ್ರಧಾನಿ ಮೋದಿ, ಸಹೋದ್ಯೋಗಿಗಳೊಂದಿಗೆ ಮಹತ್ವದ ಚರ್ಚೆ!

ಶ್ರೇಯಾಂಕಾ ಪಾಟೀಲ್ ಸ್ಫೋಟಕ ಬ್ಯಾಟಿಂಗ್: 5 ಸಿಕ್ಸರ್, 7 ಬೌಂಡರಿ, 29 ಎಸೆತಗಳಲ್ಲಿ 76 ರನ್; ಆಯ್ಕೆದಾರರಿಗೆ ಕಠಿಣ ಸಂದೇಶ!

ಟೀಂ ಇಂಡಿಯಾ ವಿರುದ್ಧ ICC ಕಠಿಣ ಕ್ರಮ: ಆಟಗಾರರ ಪಂದ್ಯ ಶುಲ್ಕ ಶೇ. 35ರಷ್ಟು ಕಟ್; ಇಲ್ಲಿದೆ ಕಾರಣ...