ರಾಜ್ಯದಲ್ಲಿ ಯಾರ ಸರ್ಕಾರ ಬರಬೇಕೆಂದು ಜನ ತೀರ್ಮಾನಿಸುತ್ತಾರೆ; ದೇವೇಗೌಡರು ಅಥವಾ ರೇವಣ್ಣ ಅಲ್ಲ: HC ಬಾಲಕೃಷ್ಣ
2028ಕ್ಕೆ ಎನ್‌ಡಿಎ, ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ರೇವಣ್ಣ ಹೇಳಲಿ ಬಿಡಿ, ನಾವೇನು ಬೇಡ ಅಂತ ಹೇಳಿದ್ದೀವಾ? ಜನರ ತೀರ್ಮಾನವೇ ಅಂತಿಮ ಎಂದು ತಿರುಗೇಟು ನೀಡಿದರು.
ರಾಮನಗರ: ರಾಜ್ಯದಲ್ಲಿ ಮುಂದಿನ ಬಾರಿಗೆ ಯಾರು ಸರ್ಕಾರ ರಚಿಸಬೇಕು ಎಂಬುವುದನ್ನು ಜನರು ತೀರ್ಮಾನ ಮಾಡುತ್ತಾರೆ. ದೇವೇಗೌಡರು, ಎಚ್‌ಡಿ ರೇವಣ್ಣ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಎಚ್‌ಸಿ ಬಾಲಕೃಷ್ಣ ತಿರುಗೇಟು ನಿಡಿದ್ದಾರೆ.
2028ಕ್ಕೆ ರಾಜ್ಯದಲ್ಲಿ ಮೋದಿ, ದೇವೇಗೌಡರು ಹಾಗೂ ಕುಮಾರಣ್ಣ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಮಾಜಿ ಸಚಿವ ಹಾಗೂ ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಸೋಮವಾರ ಹೇಳಿದ್ದರು.
ಮಂಡ್ಯ ಜಿಲ್ಲೆಯ ಜನರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜಕೀಯ ಶಕ್ತಿ ತುಂಬಿದ್ದಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು 3.5 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿದ್ದಾರೆ. ಮಂಡ್ಯ ಜಿಲ್ಲೆಯ ಋಣವನ್ನು ನಮ್ಮ ಕುಟುಂಬ ಎಂದಿಗೂ ಮರೆಯುವುದಿಲ್ಲ ಎಂದು ರೇವಣ್ಣ ತಿಳಿಸಿದ್ದರು.
ಡಿಕೆ ಶಿವಕುಮಾರ್ ಅವರಿಗೆ ಕೆಲವರು ಕಿರುಕುಳ ಕೊಡುತ್ತಿದ್ದಾರೆ ಎಂಬ ನಿಶ್ಚಲಾನಂದ ಸ್ವಾಮೀಜಿ ಹೇಳಿಕೆ ಹಿನ್ನೆಲೆ ಸ್ವಾಮೀಜಿಗಳು ಸ್ವಾಮಿ ಕೆಲಸ ಮಾಡಿಕೊಂಡಿರಬೇಕು ಎಂಬ ರೇವಣ್ಣ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕೃಷ್ಣ, ರೇವಣ್ಣ ಕುಟುಂಬದ ಪರವಾಗಿ ಸ್ವಾಮೀಜಿಗಳು ಮಾತನಾಡಿದ್ರೆ ಅವರಿಗೆ ರುಚಿಕರವಾಗಿರುತ್ತದೆ. ಬುದ್ಧಿ ಹೇಳಿದಾಗ ಸ್ವಾಮಿಗಳು ಹಾಗೆ ಹೇಳಬಾರದು ಅಂತಾರೆ. ಏನು ಮಾಡಲು ಆಗಲ್ಲ ಎಂದರು.
2028ಕ್ಕೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ರೇವಣ್ಣ ಹೇಳಲಿ ಬಿಡಿ, ನಾವೇನು ಬೇಡ ಅಂತ ಹೇಳಿದ್ದೀವಾ? ಜನರ ತೀರ್ಮಾನವೇ ಅಂತಿಮ ಎಂದು ತಿರುಗೇಟು ನೀಡಿದರು.
ಇನ್ನೂ ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರ ಸಹಕಾರ ಕೊಡುತ್ತಿಲ್ಲ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆಯೂ ಮಾತನಾಡಿದ ಅವರು, ಕುಮಾರಸ್ವಾಮಿ ಕೇಂದ್ರದ ಸಚಿವರಾಗಿದ್ದಾರೆ. ಕೈಗಾರಿಕೆಗೆ ಜಾಗ ಕೊಡಲ್ಲ ಅಂತಿದ್ದಾರೆ. ಅವರಿಗೆ ಎಲ್ಲಿ ಜಾಗ ಬೇಕು ಕೇಳಲಿ ಕೊಡುತ್ತೇವೆ. ಯುವಕರು ಹೆಚ್ಚು ವೋಟ್ ಮಾಡಿದ್ದಾರೆ. ಯುವಕರು ಕುಮಾರಣ್ಣ ಅಂತ ಜಾಸ್ತಿ ಇಷ್ಟ ಪಡುತ್ತಾರೆ. ಆ ಯುವಕರಿಗೆ ಉದ್ಯೋಗ ಕೊಡುವುದು ಕುಮಾರಣ್ಣನ ಜವಾಬ್ದಾರಿ. ಅದಕ್ಕೆ ಜಾಗ ಕೊಡಲು ನಾವು ರೆಡಿ ಇದ್ದೇವೆ, ಅವರು ಕೈಗಾರಿಕೆ ಮಾಡಲಿ. ಎಲ್ಲಿ ಜಾಗ ಬೇಕು ಅಂತ ನಾಳೆಯೇ ಪತ್ರ ಕೊಡಲಿ. ಯಾವ ಜಿಲ್ಲೆಯಲ್ಲಿ ಬೇಕಾದರೂ ಜಾಗ ಕೊಡಿಸುತ್ತೇವೆ ಎಂದು ತಿಳಿಸಿದರು.