ಹೈಕಮಾಂಡ್ ವಿರೋಧದ ನಡುವೆಯೇ ಮೋದಿ ಸರ್ಕಾರದ ಮಸೂದೆಗೆ ಜೈ ಎಂದ ಕೈ ಶಾಸಕ; ಕ್ಷೇತ್ರ ಮರುವಿಂಗಡಣೆ ಮಸೂದೆ ಸ್ವಾಗತಿಸಿದ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್
ಕೇಂದ್ರ ಸರ್ಕಾರ ಮಂಡಿಸಲು ಸಜ್ಜಾಗಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆಯೇ, ಕಾಂಗ್ರೆಸ್ ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರು, ಈ ಮಸೂದೆಯನ್ನು ಬಹಿರಂಗವಾಗಿ ಸ್ವಾಗತಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಕೋಲಾರ: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆಯೇ, ಕರ್ನಾಟಕದ ಕಾಂಗ್ರೆಸ್ ಶಾಸಕರೊಬ್ಬರು ಈ ಮಸೂದೆಯನ್ನು ಬಹಿರಂಗವಾಗಿ ಸ್ವಾಗತಿಸಿ ಅಚ್ಚರಿ ಮೂಡಿಸಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರು ಕೇಂದ್ರದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸಂಪೂರ್ಣ ಬೆಂಬಲ ಘೋಷಿಸಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಉತ್ತಮ ಆಡಳಿತಕ್ಕಾಗಿ ಮರುವಿಂಗಡಣೆ ಅಗತ್ಯ
ಜನಸಂಖ್ಯೆ ಹೆಚ್ಚಾದಂತೆ ಕ್ಷೇತ್ರಗಳ ವ್ಯಾಪ್ತಿಯೂ ದೊಡ್ಡದಾಗಿದ್ದು, ಜನಪ್ರತಿನಿಧಿಗಳಿಗೆ ಜನರ ಕಷ್ಟಸುಖಗಳಿಗೆ ಸ್ಪಂದಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಉತ್ತಮ ಆಡಳಿತಕ್ಕಾಗಿ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಮರುವಿಂಗಡಣೆ ಮಾಡುವುದು ಅಭಿವೃದ್ಧಿಗೆ ಪೂರಕವಾಗಿದೆ ಎಂದು ಪ್ರತಿಪಾದಿಸಿದ ಕೊತ್ತೂರು ಮಂಜುನಾಥ್, ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಒಬ್ಬ ಶಾಸಕನ ಕ್ಷೇತ್ರಕ್ಕೆ 1 ಲಕ್ಷದಿಂದ 1.5 ಲಕ್ಷ ಮತದಾರರು ಹಾಗೂ ಒಬ್ಬ ಸಂಸದನ ಕ್ಷೇತ್ರಕ್ಕೆ 5 ರಿಂದ 8 ಲಕ್ಷ ಮತದಾರರನ್ನು ನಿಗದಿಪಡಿಸಬೇಕು ಎಂದು ಮಂಜುನಾಥ್ ಸಲಹೆ ನೀಡಿದ್ದಾರೆ. ದೇಶದಲ್ಲಿ ಸಂಸದರ ಸಂಖ್ಯೆ 800 ರಿಂದ 900ಕ್ಕೆ ಏರಿಕೆಯಾದರೂ ಅದು ಆಡಳಿತಾತ್ಮಕವಾಗಿ ಒಳ್ಳೆಯ ಬೆಳವಣಿಗೆಯೇ ಆಗಿದೆ ಎಂದಿದ್ದಾರೆ.
ಬಿಜೆಪಿಗೆ ಮಾತ್ರ ಲಾಭ ಎಂಬ ವಾದಕ್ಕೆ ತಿರುಗೇಟು
ಮುಂದುವರೆದು, ಇಂಡೋನೇಷ್ಯಾ, ಕಾಂಬೋಡಿಯಾ, ಮಲೇಷ್ಯಾ ಮತ್ತು ಸಿಂಗಾಪುರದಂತಹ ದೇಶಗಳ ಉದಾಹರಣೆ ನೀಡಿದ ಅವರು, ಅಲ್ಲಿ ಒಬ್ಬ ಸಂಸದನ ವ್ಯಾಪ್ತಿಗೆ ಗರಿಷ್ಠ 60 ಸಾವಿರ ಹಾಗೂ ಶಾಸಕ/ಪುರಸಭೆ ಸದಸ್ಯರ ವ್ಯಾಪ್ತಿಗೆ 7 ರಿಂದ 8 ಸಾವಿರ ಮತದಾರರು ಮಾತ್ರ ಇರುತ್ತಾರೆ. ಕಡಿಮೆ ಮತದಾರರ ವ್ಯಾಪ್ತಿ ಇರುವುದರಿಂದ ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಇದೆ ವೇಳೆ, ಕ್ಷೇತ್ರ ಮರುವಿಂಗಡಣೆಯಿಂದ ಬಿಜೆಪಿಗೆ ಮಾತ್ರ ರಾಜಕೀಯ ಲಾಭವಾಗುತ್ತದೆ ಎಂಬ ವಿಪಕ್ಷಗಳ ಆತಂಕವನ್ನು ತಳ್ಳಿಹಾಕಿರುವ ಮಂಜುನಾಥ್, "ಕ್ಷೇತ್ರ ವಿಂಗಡಣೆಯಿಂದ ತಮಿಳುನಾಡಿನಂತಹ ಹೊರಗಿನ ಪ್ರದೇಶಗಳನ್ನು ಅಥವಾ ಹೊಸ ಮತದಾರರನ್ನು ತಂದು ಸೇರಿಸಲು ಆಗುತ್ತದೆಯೇ? ನಮ್ಮದೇ ರಾಜ್ಯದ ವ್ಯಾಪ್ತಿಯಲ್ಲಿಯೇ ಕ್ಷೇತ್ರಗಳನ್ನು ವಿಂಗಡಿಸಲಾಗುತ್ತದೆ. ಇದರಿಂದ ಯಾವುದೇ ಒಂದು ಪಕ್ಷಕ್ಕೆ ವಿಶೇಷ ಲಾಭವಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಏತನ್ಮಧ್ಯೆ, ಕ್ಷೇತ್ರ ಮರುವಿಂಗಡಣೆಗೆ ಕಾಂಗ್ರೆಸ್ ಪಕ್ಷ ವಿರೋಧವಿದೆ ಎಂದು ಎಲ್ಲಿಯೂ ಹೇಳಿಲ್ಲ ಎಂದಿರುವ ಅವರು, 2028ರ ವಿಧಾನಸಭಾ ಚುನಾವಣೆ ಮುಂದಕ್ಕೆ ಹೋಗಿ 2029ರಲ್ಲಿ ಲೋಕಸಭೆ ಜೊತೆಗೇ ನಡೆಯಬಹುದು ಎಂಬ ರಾಜಕೀಯ ಲೆಕ್ಕಾಚಾರದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.