ಬೆಂಗಳೂರು: ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ನಾಲ್ಕೂ ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ, ಮತದಾರರ ತೀರ್ಪನ್ನು ಕಾಂಗ್ರೆಸ್ ಪಕ್ಷ ಗೌರವಪೂರ್ವಕವಾಗಿ ಸ್ವೀಕರಿಸುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಚುನಾವಣಾ ಫಲಿತಾಂಶಗಳ ಕುರಿತು ಸಮಗ್ರ ಪರಾಮರ್ಶೆ ನಡೆಸಿ, ಪಕ್ಷದ ಸೋಲಿಗೆ ಕಾರಣವಾದ ಅಂಶಗಳನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಅಥವಾ ಎರಡು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಹೊಂದಿತ್ತು. ಆದರೆ ಅಂತಿಮ ಫಲಿತಾಂಶ ಪಕ್ಷದ ನಿರೀಕ್ಷೆಗೆ ತಕ್ಕಂತೆ ಬಂದಿಲ್ಲ ಎಂದು ಒಪ್ಪಿಕೊಂಡರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪನ್ನು ನಾವು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ. ಈ ಹಿಂದೆ ನಮ್ಮ ಬಳಿ ಒಂದು ಸ್ಥಾನವಿತ್ತು. ಈ ಬಾರಿ ಒಂದು ಅಥವಾ ಎರಡು ಸ್ಥಾನಗಳನ್ನಾದರೂ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಜನರು ನಮಗೆ ಸಂದೇಶವೊಂದನ್ನು ನೀಡಿದ್ದಾರೆ. ಆ ಸಂದೇಶವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಲಂಕಷವಾಗಿ ಪರಿಶೀಲಿಸುತ್ತೇವೆ. ಎಲ್ಲಿ ತಪ್ಪಾಗಿದೆ ಎಂಬುದನ್ನು ತಿಳಿದುಕೊಂಡು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಒಟ್ಟು 19 ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವ ಪದವೀಧರರ ಎರಡು ಹಾಗೂ ಶಿಕ್ಷಕರ ಎರಡು ಕ್ಷೇತ್ರಗಳು ಸೇರಿದಂತೆ ನಾಲ್ಕೂ ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶವು ಪ್ರಾದೇಶಿಕ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.
ಪರಿಷತ್ ಚುನಾವಣೆಯ ಫಲಿತಾಂಶವನ್ನು ಗೌರವದಿಂದ ಸ್ವೀಕಾರ ಮಾಡುತ್ತೇವೆ, ಸೋಲಿನ ಪರಾಮರ್ಶೆ ಮಾಡುತ್ತೇವೆ. ಸರಿಪಡಿಸಿಕೊಳ್ಳುವ ಕೆಲಸ ಮಾಡ್ತೇವೆ. ಬಿಜೆಪಿ-ಜೆಡಿಎಸ್ ಇದನ್ನು ಮುಂದಿನ ಚುನಾವಣೆ ದಿಕ್ಸೂಚಿ ಅಂತಾರೆ. ಚನ್ನಪಟ್ಟಣ ಹಾಗೂ ಶಿಗ್ಗಾಂವ್ ಫಲಿತಾಂಶ ಏನು ಹಾಗಾದ್ರೆ? ನಮಗೆ ಬ್ಯಾಲೇಟ್ ಪೇಪರ್ ಬೇಕು. ಸಾಕಷ್ಟು ಸಮಸ್ಯೆಗಳಿವೆ . ಹೊಸ ಯೋಜನೆಗಳೊಂದಿಗೆ ನಮ್ಮ ಪಕ್ಷ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಯ ಮುನ್ಸೂಚನೆಯಾಗಿದೆ ಎಂಬ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಹೇಳಿಕೆಗಳಿಗೆ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಚನ್ನಪಟ್ಟಣ ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಗಳ ಫಲಿತಾಂಶವನ್ನು ಉಲ್ಲೇಖಿಸಿದ ಅವರು, ಚುನಾವಣಾ ಫಲಿತಾಂಶಗಳನ್ನು ಪ್ರತಿಪಕ್ಷಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ವ್ಯಾಖ್ಯಾನಿಸುತ್ತಿವೆ ಎಂದರು.
ಈ ಫಲಿತಾಂಶ ಮುಂದಿನ ಚುನಾವಣೆಯ ಮುನ್ಸೂಚನೆ ಎಂದು ಅವರು ಹೇಳುತ್ತಿದ್ದಾರೆ. ಹಾಗಾದರೆ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಉಪ ಚುನಾವಣೆಗಳ ಫಲಿತಾಂಶವೂ ಮುಂದಿನ ಚುನಾವಣೆಯ ಮುನ್ಸೂಚನೆಯಾಗಿತ್ತೇ? ಪ್ರತಿಪಕ್ಷಗಳು ಆ ಫಲಿತಾಂಶಗಳ ಬಗ್ಗೆಯೂ ಮಾತನಾಡಬೇಕಲ್ಲವೇ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಬಿಜೆಪಿಯ ಮೂವರು ಹಾಗೂ ಜೆಡಿಎಸ್‌ನ ಒಬ್ಬ ಅಭ್ಯರ್ಥಿ ಕಣಕ್ಕಿಳಿದಿದ್ದರು. ನಾಲ್ವರೂ ಗೆಲುವು ಸಾಧಿಸುವ ಮೂಲಕ ಮೈತ್ರಿಕೂಟವು ಎಲ್ಲ ಸ್ಥಾನಗಳನ್ನೂ ತನ್ನದಾಗಿಸಿಕೊಂಡಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ್ ಅವರು ಕಾಂಗ್ರೆಸ್‌ನ ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ ಅವರನ್ನು ಸೋಲಿಸಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಸತತ ಐದನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರನ್ನು 3,297 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ನಮೋಶಿ 15,596 ಮತಗಳನ್ನು ಪಡೆದರೆ, ಶರಣಪ್ಪ ಮಟ್ಟೂರು 12,299 ಮತಗಳನ್ನು ಗಳಿಸಿದರು.
ಕಲಬುರಗಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸುಮಾರು 30,253 ಮತದಾರರು ಮತದಾನದಲ್ಲಿ ಭಾಗವಹಿಸಿದ್ದರು. ಈ ಪೈಕಿ 28,380 ಮತಗಳು ಸಿಂಧುವಾಗಿದ್ದು, 1,873 ಮತಗಳು ತಿರಸ್ಕೃತಗೊಂಡಿವೆ.
ಇನ್ನು ಪದವೀಧರರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಎಸ್.ವಿ. ಸಂಕನೂರ ಮತ್ತು ಕೆ.ಎಂ. ಸುರೇಶ್ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಎನ್‌ಡಿಎ ಮೈತ್ರಿಕೂಟವು ನಾಲ್ಕೂ ಸ್ಥಾನಗಳನ್ನು ಗೆದ್ದುಕೊಂಡಿದೆ.
ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರನ್ನು ಸೋಲಿಸುವ ಮೂಲಕ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.