ಮಂಡ್ಯ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬವನ್ನು ಮುಗಿಸುವುದಕ್ಕೆ 600 ಕೋಟಿ ಡೀಲ್ ಕೊಡೋದಕ್ಕೆ ನಮಗೆ ತಲೆಕೆಟ್ಟಿದೆಯಾ ಎಂದು ಪ್ರಶ್ನಿಸುವ ಮೂಲಕ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಮಂಡ್ಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಇನ್ನೊಬ್ಬರನ್ನು ತೇಜೋವಧೆ ಮಾಡೋದಕ್ಕೆ ಮಾಡುತ್ತಿದ್ದಾರೆ ವಿನಃ ಇನ್ಯಾರು ಮಾಡುತ್ತಿಲ್ಲ. ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಅವರೇ ಇದೆಲ್ಲ ಮಾಡಿಸಿಕೊಂಡು ಬಂದಿರುವ ಇತಿಹಾಸವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರು ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ರೈಲ್ವೇ ಸ್ಟೇಷನ್ ಗೆ ನಮ್ಮನ್ನೆಲ್ಲ ಕರೆದುಕೊಂಡು ಹೋಗಿ ಹೋರಾಟ ಮಾಡಿದ್ದು ಇದೇ ಕುಮಾರಸ್ವಾಮಿ. ಸಿದ್ದರಾಮಯ್ಯ ಅವರನ್ನು ಉಚ್ಚಾಟನೆ ಮಾಡಿದ್ದು ಯಾರು? ಇದೇ ಕುಮಾರಸ್ವಾಮಿ. ಜೆ ಹೆಚ್ ಪಾಟೀಲ್ ಅವರನ್ನು ಡಿಸ್ಟರ್ಬ್ ಮಾಡಿದ್ದು ಯಾರು? ಇದುವರೆಗೂ ಇದೆಲ್ಲ ಮಾಡ್ಕೊಂಡು ಬಂದಿರೋರು ಅವರೇ ಎಂದು ಗುಡುಗಿದರು.
ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಕುಮಾರಸ್ವಾಮಿಗೆ 350 ಹೆಣ್ಣು ಮಕ್ಕಳಿಗೆ ಅನ್ಯಾಯ ಆಗಿದ್ದು ಬೇಕಿಲ್ಲ. ಆದರೆ ಪೆನ್ ಡ್ರೈವ್ ಬಿಡುಗಡೆ ಮಾಡಿದವರ ವಿರುದ್ಧ ಕ್ರಮಕ್ಕೆ ಹೋರಾಟ ಮಾಡ್ತಿದ್ದಾರೆ. ಸಂತ್ರಸ್ತರ ಬಗ್ಗೆ ಅನುಕಂಪ ಇಲ್ಲ, ಪೆನ್ ಡ್ರೈ ಬಿಟ್ಟವರ ಬಗ್ಗೆ ಮಾತನಾಡುತ್ತಾರೆ ಎಂದು ಸಚಿವರು ಕಿಡಿಕಾರಿದರು.
ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದೆ ಎನ್ನಲಾದ ಮಾರುವೇಷದ ಕಾರ್ಯಾಚರಣೆ ಇನ್ನೂ ಸಾಬೀತಾಗಿಲ್ಲ. ಸದ್ಯಕ್ಕೆ ಧ್ವನಿಮುದ್ರಣ ಇದೆ ಅಷ್ಟೇ. ತನಿಖೆಯಲ್ಲಿ ಸಾಬೀತಾದರೆ ನೋಡೋಣ ಎಂದರು. ವಿಡಿಯೊ ಬಿಡುಗಡೆ ಸಂಬಂಧ ಶೇ 90ರಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದವರ ಪ್ರಯಾಣ, ಫೋನ್ ಖರೀದಿ ಸೇರಿದಂತೆ ದಾಖಲೆಗಳು ಲಭ್ಯವಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಅವುಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ಸಿಎಂನೇ ಒಪ್ಪಲ್ಲ ಅಂದವರು ಸಿಎಂಗೆ ಪತ್ರ ಬರೆದಿದ್ದಾರೆ, ನನಗೆ ಕನ್ಫ್ಯೂಸ್ ಆಗ್ತಿದೆ: ಕುಮಾರಸ್ವಾಮಿ ಪತ್ರಕ್ಕೆ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. ಸಿಎಂಗೆ ಪತ್ರ ಬರೆದಿದ್ದಾರೆ, ಬಹಳ ಸಂತೋಷ. ಅವರಿಗೆ ಅಭಿನಂದನೆಗಳು. ಸಿಎಂನ ಒಪ್ಪಿಲ್ಲ ಅಂದಿದ್ರು. ಡಿಕೆಶಿ ಅನ್ನ ಮುಖ್ಯಮಂತ್ರಿ ಆಗಿ ನಾನು ಒಪ್ಪಲ್ಲ ಅಂದಿದ್ರು. ಅದು ಹೇಗೆ ಪತ್ರ ಬರೆದಿದ್ದಾರೆ ಗೊತ್ತಿಲ್ಲಪ್ಪ. ಸಿಎಂನ ಒಪ್ಪಲ್ಲ ಅಂದವರು ಸಿಎಂಗೆ ಪತ್ರ ಬರೆದಿದ್ದಾರೆ, ನನಗೆ ಕನ್ಫ್ಯೂಸ್ ಆಗ್ತಿದೆ. ಬೇರೆಯವರಿಗೆ ಬರೆಯೋದಕ್ಕೆ ಹೋಗಿ ನಮ್ಮ ಸಿಎಂಗೆ ಬರೆದಿದ್ದಾರಾ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ರಾಷ್ಟ್ರದ ಖಾತೆ ಇಟ್ಟುಕೊಂಡು ಮಂಡ್ಯ ಬಿಟ್ರೆ ಬೆಂಗಳೂರು, ಬೆಂಗಳೂರು ಬಿಟ್ರೆ ಮಂಡ್ಯ. ಅವರು 100 ಎಕರೆ ಜಾಗ ಕೇಳಿದ್ದರು. ಡಿಸಿ ಹಾಗೂ ನಮಗೆ ಸಿಎಂ ಸೂಚನೆ ಕೊಟ್ಟಿದ್ದರು. ನಾವು 100 ಎಕರೆ ಭೂಮಿಯನ್ನು KDB ಕೊಡುತ್ತೇವೆ. ಕುಮಾರಸ್ವಾಮಿ ಅವರ ಲೆಟರ್ ಗೆ ನಮ್ಮ ಸಿಎಂ ತಕ್ಷಣವೇ ಸ್ಪಂದಿಸಿದ್ದಾರೆ. ಈಗ ಕುಮಾರಸ್ವಾಮಿ ಕೈಗಾರಿಕೆ ತರಲಿ ಎಂದು ಸವಾಲು ಹಾಕಿದರು.