ಆರ್.ಅಶೋಕ್ 
ರಾಜಕೀಯ

31 ಲಕ್ಷ ಬೋಗಸ್‌ ವೋಟರ್ ಐಡಿ ಪ್ರಿಂಟ್; ಕಾಂಗ್ರೆಸ್ ಸರ್ಕಾರದಿಂದ ₹20 ಕೋಟಿ ಬೃಹತ್ ಹಗರಣ: ಆರ್.ಅಶೋಕ್

ವೋಟ್‌ ಚೋರಿ ಎನ್ನುವ ರಾಹುಲ್‌ ಗಾಂಧಿಯವರೇ ಈಗ ಬೆಂಗಳೂರಿಗೆ ಬಂದು ಹೊಸ ಕಾರ್ಡ್‌ಗಳನ್ನು ವಿತರಣೆ ಮಾಡಬೇಕು. ಏಕೆಂದರೆ ಬೆಂಗಳೂರಿನಲ್ಲಿ ವಾಸ್ತವದಲ್ಲಿ 59 ಲಕ್ಷ ಮತದಾರರಿದ್ದರೆ, ಆದರೆ ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಕಾರ್ಡ್‌ ಮುದ್ರಿಸಲಾಗಿದೆ. ಇದು ಅತಿ ದೊಡ್ಡ ಹಗರಣ.

ಬೆಂಗಳೂರು: ಎಸ್‌ಐಆರ್‌ ನಡೆಯಲಿದೆ ಎಂದು ಗೊತ್ತಿದ್ದರೂ ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಿ 20 ಕೋಟಿ ರೂ. ಹಗರಣ ನಡೆಸಲಾಗಿದೆ. ಈ ಹಗರಣದಲ್ಲಿ ಕಾಂಗ್ರೆಸ್‌ ಸರ್ಕಾರ ಭಾಗಿಯಾಗಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಚುನಾವಣಾ ಆಯೋಗದ ಮೂಲಕ ಸರ್ಕಾರ ನಡೆಸಿರುವ ಹಗರಣ, ಟೆಂಡರ್‌ ದಾಖಲೆಗಳನ್ನು ಅಶೋಕ ಅವರು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ಮೂರೂವರೆ ವರ್ಷಗಳಿಂದ ಕಾಂಗ್ರೆಸ್‌ ಸರ್ಕಾರ ಸರಣಿ ಹಗರಣಗಳನ್ನು ಮಾಡುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಅಬಕಾರಿ ಸೇರಿದಂತೆ ಹಲವಾರು ಅಕ್ರಮಗಳು ನಡೆದಿವೆ. ಬೆಂಗಳೂರಿನ ಕಸ ಹಗರಣಕ್ಕೆ ಸಂಬಂಧಿಸಿದಂತೆ ನಾನು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದರ ಬದಲು ಕಾಂಗ್ರೆಸ್‌ ನಾಯಕರು ದೆಹಲಿಗೆ ಹೋಗಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಉತ್ಸವ ಮಾಡಲು ಮುಂದಾಗಿದ್ದಾರೆ. ಇವರು ಎಸ್‌ಐಆರ್‌ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರೆ, ರಾಜ್ಯದಲ್ಲಿ ಚುನಾವಣಾ ಆಯೋಗದ ಮೂಲಕ ಕಾಂಗ್ರೆಸ್‌ ಸರ್ಕಾರ 20 ಕೋಟಿ ರೂ. ಮೊತ್ತದ ಹಗರಣ ನಡೆಸಿದೆ ಎಂದರು.

ಗುರುತಿನ ಚೀಟಿ ಮುದ್ರಣ

ಬೆಂಗಳೂರಿನ ಮತದಾರರಿಗೆ ಎಸ್‌ವಿಐಸಿ ಕಾರ್ಡ್‌ ಎಂದರೆ ಮತದದಾರರ ಗುರುತಿನ ಚೀಟಿ ನೀಡಲು ರಾಜ್ಯ ಚುನಾವಣಾ ಆಯೋಗದಿಂದ ಕ್ರಮ ವಹಿಸಲಾಗಿದೆ. 90 ಲಕ್ಷ ಕಾರ್ಡ್‌ ಮುದ್ರಿಸಲು ಸಿಂಗಲ್ ಟೆಂಡರ್‌ ಕರೆಯಲಾಗಿದೆ. ಆದರೆ ಆರ್ಥಿಕ ಇಲಾಖೆಯ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಪ್ರತಿ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿ, ಫೋಟೋ ಸೆರೆಹಿಡಿದು ನಂತರ ಮುದ್ರಣ ಮಾಡಬೇಕು. ಆದರೆ ಎಲ್ಲಿಗೂ ಹೋಗದೆ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ಆಧರಿಸಿ ಪ್ರಿಂಟ್ ಮಾಡಲಾಗಿದೆ. 2026 ರ ಮೇ 14 ರಂದು ಕೇಂದ್ರ ಚುನಾವಣಾ ಆಯೋಗದಿಂದ ಎಸ್‌ಐಆರ್‌ ಮಾಡಲಾಗುವುದು ಎಂದು ಆದೇಶ ನೀಡಲಾಗಿತ್ತು. ಆದರೆ ಮೇ 15 ರಂದು ರಾಜ್ಯ ಚುನಾವಣಾ ಆಯೋಗದಿಂದ ಟೆಂಡರ್‌ ಕರೆಯಲಾಗಿದೆ. ಮೇ 29 ರಂದು ಕಾರ್ಯಾದೇಶ ನೀಡಲಾಗಿದೆ. ಇದೇ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿದ್ದು, ಎಸ್‌ಐಆರ್‌ ಬಳಿಕ ಮತದಾರರ ಹೊಸ ಪಟ್ಟಿ ಬಂದ ಬಳಿಕ ಸ್ಥಳೀಯ ಚುನಾವಣೆ ನಡೆಸುತ್ತೇವೆ ಎಂದು ಹೇಳಲಾಗಿದೆ ಎಂದರು.

ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿಯಿಂದಲೇ ಚುನಾವಣೆ ನಡೆಯುವಾಗ, ರಾಜ್ಯ ಚುನಾವಣಾ ಆಯೋಗದಿಂದ ಪ್ರತ್ಯೇಕವಾಗಿ ಹೊಸ ಕಾರ್ಡ್‌ಗಳನ್ನು ಮುದ್ರಿಸಲಾಗಿದೆ. ಬೆಂಗಳೂರಿನಲ್ಲಿ ಎಸ್‌ಐಆರ್‌ ನಂತರ ಒಟ್ಟು 59,09,775 ಮತದಾರರಿದ್ದಾರೆ. ವಿಳಾಸ ಬದಲಾದವರ, ಸ್ಥಳಾಂತರಗೊಂಡವರ ಹೆಸರ ತೆಗೆದುಹಾಕಲಾಗಿದೆ. ಆದರೆ ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಗುರುತಿನ ಚೀಟಿ ಮುದ್ರಿಸಲಾಗಿದೆ ಎಂದರೆ, ಇದರಲ್ಲಿ ಹಗರಣ ನಡೆದಿರುವುದು ಖಚಿತವಾಗಿದೆ. ಈ ಕಾರ್ಡ್‌ಗಳನ್ನು ಈಗ ಯಾರಿಗೆ ವಿತರಣೆ ಮಾಡಲಾಗುತ್ತದೆ? ಮುದ್ರಣವಾಗಿ ಇಷ್ಟು ದಿನಗಳಾದರೂ ಯಾಕೆ ವಿತರಣೆ ಮಾಡಿಲ್ಲ? ಇದಕ್ಕೆ 20 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಈ ಹಣ ಪೂರ್ತಿಯಾಗಿ ವ್ಯರ್ಥವಾಗಿದೆ ಎಂದರು.

31 ಲಕ್ಷ ಬೋಗಸ್‌ ಕಾರ್ಡ್‌, ವೋಟ್‌ ಚೋರಿ

ವೋಟ್‌ ಚೋರಿ ಎನ್ನುವ ರಾಹುಲ್‌ ಗಾಂಧಿಯವರೇ ಈಗ ಬೆಂಗಳೂರಿಗೆ ಬಂದು ಹೊಸ ಕಾರ್ಡ್‌ಗಳನ್ನು ವಿತರಣೆ ಮಾಡಬೇಕು. ಏಕೆಂದರೆ ಬೆಂಗಳೂರಿನಲ್ಲಿ ವಾಸ್ತವದಲ್ಲಿ 59 ಲಕ್ಷ ಮತದಾರರಿದ್ದರೆ, ಆದರೆ ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಕಾರ್ಡ್‌ ಮುದ್ರಿಸಲಾಗಿದೆ. ಇದು ಅತಿ ದೊಡ್ಡ ಹಗರಣವಾಗಿದ್ದು, ಸರ್ಕಾರದಿಂದ ಇದಕ್ಕೆ ಉತ್ತರ ನೀಡಬೇಕು. ಅಂದರೆ ವೋಟ್‌ ಚೋರಿಗೆ ಹಾಗೂ 31 ಲಕ್ಷ ಜನರಿಗೆ ಬೋಗಸ್‌ ಕಾರ್ಡ್‌ ನೀಡಲು ಕಾಂಗ್ರೆಸ್‌ ಕಾರಣವಾಗಿದೆ. 31 ಲಕ್ಷ ಮತದಾರರು ಎಲ್ಲಿದ್ದಾರೆ ಎಂಬುದನ್ನು ಈಗ ಸರ್ಕಾರ ಪತ್ತೆ ಮಾಡಬೇಕಿದೆ ಎಂದು ಆಗ್ರಹಿಸಿದರು.

ಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು. 31 ಲಕ್ಷ ಜನರ ಬೋಗಸ್‌ ಕಾರ್ಡ್‌ಗಳನ್ನು ಏಕೆ ಮುದ್ರಿಸಲಾಗಿದೆ ಎಂದು ಎಲ್ಲರಿಗೂ ತಿಳಿಯಬೇಕಿದೆ. ಎಸ್‌ಐಆರ್‌ ಮುಗಿದಿರುವುದರಿಂದ ಕೇಂದ್ರ ಚುನಾವಣಾ ಆಯೋಗದಿಂದ ಹೊಸ ಕಾರ್ಡ್‌ ನೀಡಲಾಗುತ್ತದೆ. ಜಿಬಿಎ ಚುನಾವಣೆಯಲ್ಲಿ ಅಕ್ರಮ ಮಾಡಲು ಕಾಂಗ್ರೆಸ್‌ ಸರ್ಕಾರ ಇದನ್ನು ಮಾಡಿಸಿದೆ. ಒಂದು ವೇಳೆ ತಪ್ಪಿಲ್ಲವಾದರೆ ಸರ್ಕಾರದಿಂದ ಈ ಗುರುತಿನ ಚೀಟಿಗಳನ್ನು ಕೂಡಲೇ ವಿತರಣೆ ಮಾಡಬೇಕು ಎಂದರು.

ಕೇಂದ್ರ ಸಚಿವ ಅಮಿತ್‌ ಶಾ ಅವರು ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಸ್ಟಿಂಗ್‌ ಆಪರೇಶನ್‌ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿಗೆ ಅನ್ಯಾಯವಾಗಿದ್ದು, ಅದರ ಬಗ್ಗೆ ಸರಿಯಾಗಿ ತನಿಖೆ ನಡೆಯಬೇಕು. ಕೇವಲ ಹಂಚಿದವರನ್ನು ಅಲ್ಲ, ವಿಡಿಯೋ ಮಾಡಿಸಿದವರನ್ನು ಪತ್ತೆ ಮಾಡಬೇಕಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದಲ್ಲಿ 'ಶೂನ್ಯ'; ಬ್ಯಾಲೆಟ್ ಪೇಪರ್‌ನಲ್ಲಿ ನಡೆದ 28 MLC ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೆಷ್ಟು? ಪ್ರಧಾನಿ ಮೋದಿ ಲೇವಡಿ

ವೃತ್ತಿಜೀವನಕ್ಕೆ ತಂದೆ ಯಾವುದೇ ಸಹಾಯ ಮಾಡಿಲ್ಲ; ಸಿಂಗಲ್ ಮದರ್ ಜತೆ ವಾಸಿಸುತ್ತಿದ್ದೇನೆ: ಸೈಫ್ ವಿರುದ್ಧ ಸಿಡಿದೆದ್ದ ಸಾರಾ ಅಲಿ ಖಾನ್

ಮಾಜಿ ಶಾಸಕನಿಗೆ ಹನಿಟ್ರ್ಯಾಪ್​​ ಆತಂಕ, ವಿಡಿಯೋ ಪ್ರಸಾರ ಮಾಡುವ ಬೆದರಿಕೆ: ನಿರ್ಬಂಧಕಾಜ್ಞೆ ಕೋರಿ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಕೆ!

ಪಾಕಿಸ್ತಾನಕ್ಕೆ ಮತ್ತೆ ICC ಶಾಕ್: ಸ್ಟಾರ್ ವೇಗಿಗೆ ದುಬಾರಿ ದಂಡ, ಡಿಮೆರಿಟ್ ಅಂಕ ಏರಿಕೆ, ಅಮಾನತು ಭೀತಿ!

ಕರ್ನಾಟಕದಲ್ಲಿ ಮೇಜರ್ ಸರ್ಜರಿ: ಬರೊಬ್ಬರಿ 87 KAS ಅಧಿಕಾರಿಗಳ ವರ್ಗಾವಣೆ, CM ಡಿಕೆಶಿ ಮಾಸ್ಟರ್‌ ಪ್ಲ್ಯಾನ್‌!