ಎಚ್.ಡಿ. ಕುಮಾರಸ್ವಾಮಿ 
ರಾಜಕೀಯ

'ಪರನಿಂದನೆಯಲ್ಲಿ ಪರಮಾರ್ಥ ಕಾಣುವ ನಿಂದಕ ಮಂತ್ರಿ: ನಿಮ್ಮಪ್ಪ ಆಲ್ ಇಂಡಿಯಾ ಅಧ್ಯಕ್ಷರೆನ್ನುವ ಕಾರಣಕ್ಕೆ ಬೆಂಕಿಕಡ್ಡಿ ಗೀರಿ ಚಳಿ ಕಾಯಿಸಿಕೊಳ್ಳಬೇಡಿ'

ಸ್ಟಿಂಗ್ ಶೂಟಿಂಗ್ ಮಾಡಿದ ಪಾತಕಿಯ ರಕ್ಷಣೆಗೆ ನಿಂತಿದ್ದೀರಿ! ಯಾಕೆ ಖರ್ಗೆ ಅವರೇ..? ಸ್ಟಿಂಗ್ ಪಿನ್ ಜತೆ ನಿಮ್ಮದೇನು ನೆಂಟಸ್ತಿಕೆ? ಸ್ಟಿಂಗ್ ಸಾಮ್ರಾಟ + ಸ್ಟಿಂಗ್ ಪಿನ್ + ಸ್ಟಿಂಗ್ ಪಿನ್ ರಕ್ಷಕ = ಸ್ಟಿಂಗ್ ತ್ರಿವೇಣಿ ಸಂಗಮ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಬೆಂಗಳೂರು: ಗೃಹ ಮಂತ್ರಿಯಾಗಿ ರಾಜ್ಯದ ಆಡಳಿತಕ್ಕೆ ಗ್ರಹಣ ಹಿಡಿಸಿದ್ದೀರಿ. ಮಿದುಳು, ನಾಲಿಗೆ, ವಿವೇಕ ಮತ್ತು ಕೆಲಸ ಎಲ್ಲವೂ ಹಳಿತಪ್ಪಿ ಹಾದಿ ತಪ್ಪಿದ್ದೀರಿ. ಮೊದಲು ಚಿಕಿತ್ಸೆ ಪಡೆದುಕೊಳ್ಳಿ ನಿಂದಕ ಮಂತ್ರಿ ಪ್ರಿಯಾಂಕ್ ಖರ್ಗೆ ಅವರೇ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ನನ್ನ ಮಾತಿನ ಅರಿವು ನನಗಿದೆ. ನಿಮ್ಮ ಮಾತಿನ ಹರಿವು ನಿಮಗೆ ಗೊತ್ತಿಲ್ಲ. ದಿನಕ್ಕೊಂದು ಟಾರ್ಗೆಟ್ ಹುಡುಕುತ್ತಲೇ ಇರುತ್ತೀರಿ. ಒಮ್ಮೆ #RSS, ಇನ್ನೊಮ್ಮೆ #SIR, ಆಮೇಲೆ ಕುಮಾರಸ್ವಾಮಿ.. ಯಾರೂ ಸಿಗದಿದ್ದರೆ ಸ್ವಯಂ ಮೈ ಪರಚಿಕೊಳ್ಳುತ್ತೀರಿ. ಮಿತಿಮೀರಿದ ಬಾಯಿಚಪಲ, ಅಪರಿಮಿತ ಪ್ರಚಾರದ ಹಪಾಹಪಿ.. ಅಪ್ಪ #AICC ಅಧ್ಯಕ್ಷ ಎನ್ನುವ ಅಪಾರ ಹಮ್ಮು; ಇವು ನಿಮ್ಮನ್ನು ಥಕ ಥೈ ಥಕ ಥೈ ಅಂತ ಕುಣಿಸುತ್ತಿವೆ ಎಂದು ಲೇವಡಿ ಮಾಡಿದ್ದಾರೆ.

ನನ್ನ ಬೆರಳ ಮೇಲೆ ನಿಮ್ಮ ಕಣ್ಣಿದೆ ಎಂಬ ಮಾಹಿತಿ ನನಗಿದೆಯಪ್ಪಾ.. ಆದರೆ ನಿಮ್ಮ ನಿದ್ರೆ ಕೆಡಿಸಿದ್ದು ನಾನೇ ಎಂಬುದು ನಿಮಗೂ ಗೊತ್ತು. ಕೆಪಿಎಸ್ಸಿ ಕೋಲಾಹಲ ಹೇಗಿತ್ತು? ನೆನಪಿದೆಯಾ? ಆ ಕೊಳಕನ್ನು ತೊಳೆಯದೆ ಬಿಡುವುದಿಲ್ಲ ನಾನು. ಪಾಪ.. ನಿಮ್ಮದು ಮಾತು ಜಾಸ್ತಿ, ಕೆಲಸ ನಾಸ್ತಿ. ಪರನಿಂದನೆಯಲ್ಲಿ ಪರಮಾರ್ಥ ಕಾಣುತ್ತಿದ್ದೀರಿ! ಐಡೆಂಟಿಟಿ ಸಮಸ್ಯೆ ಅಂತ ಕಾಣುತ್ತೆ ನಿಮಗೆ!

ಮುರುಕಮನೆ ಕಾಂಗ್ರೆಸ್ ನಲ್ಲಿ ನಿಮ್ಮಪ್ಪ ಆಲ್ ಇಂಡಿಯಾ ಅಧ್ಯಕ್ಷರೆನ್ನುವ ಏಕೈಕ ಕಾರಣಕ್ಕೆ ಎಲ್ಲೆಲ್ಲಿ, ಹೇಗೆಲ್ಲಾ ಬೆಂಕಿಕಡ್ಡಿ ಗೀರಿ ಚಳಿ ಕಾಯಿಸಿಕೊಳ್ಳುತ್ತಿದ್ದೀರಿ ಅಂತ ಗೊತ್ತಿದೆ, ನಿಮ್ಮ ಪಾರ್ಟಿಯ ಮಂತ್ರಿಗಳು, ಶಾಸಕರಿಗೂ ಅದು ಗೊತ್ತಿದೆ. ಅವರೇ ನನಗೆ ಹೇಳುತ್ತಿದ್ದಾರೆ.

ತಂದಿಕ್ಕಿ ತಮಾಷೆ ನೋಡಲು ಹೋಗಿ ಬುಡಕ್ಕೆ ಬಿಸಿನೀರು ಬಿಟ್ಟುಕೊಂಡಿದ್ದೀರಿ ಖರ್ಗೆ ಅವರೇ.., ಸಿದ್ದರಾಮಯ್ಯ ಅವರ ಹೆಸರಿನ ರಕ್ಷಣೆ ಪಡೆಯಲು ಹೋಗಬೇಡಿ. ನಿಮ್ಮ ಮುಖ್ಯಮಂತ್ರಿ, ನಿಮ್ಮಪ್ಪ ಮತ್ತು ನೀವು; ಮೂವರೂ ಒಟ್ಟಾಗಿ ರಾಹುಲ್ ಗಾಂಧಿಗೆ ಟೋಪಿ ಹಾಕಿ ಸಿದ್ದರಾಮಯ್ಯರನ್ನು ಕುರ್ಚಿ ಕಾಲು ಎಳೆದಿರಿ. ಇದು ಹೈಕಮಾಂಡ್ ಅಂಡ್ ಲೋಕಮಾಂಡ್ ಕುಮ್ಮಕ್ಕಾಗಿ ನಡೆಸಿದ ಷಡ್ಯಂತ್ರ! ಏನಂತೀರಿ ಮಂತ್ರಿಗಳೇ? ಎಂದು ಪ್ರಶ್ನಿಸಿದ್ದಾರೆ.

ಅರೆಬರೆ ಮಾಹಿತಿ ಪಡೆದು ಮನಸೋಇಚ್ಛೆ ಹೇಳಿಕೆ ನೀಡುವ ನೀವು, ರಾಕೆಟ್ ವೇಗದಲ್ಲಿ ಅಪ್ಲೋಡ್ ಮಾಡಿದವರ ಬೆನ್ಹತ್ತಿದ್ದೀರಿ, ಸ್ಟಿಂಗ್ ಶೂಟಿಂಗ್ ಮಾಡಿದ ಪಾತಕಿಯ ರಕ್ಷಣೆಗೆ ನಿಂತಿದ್ದೀರಿ! ಯಾಕೆ ಖರ್ಗೆ ಅವರೇ..? ಸ್ಟಿಂಗ್ ಪಿನ್ ಜತೆ ನಿಮ್ಮದೇನು ನೆಂಟಸ್ತಿಕೆ? ಸ್ಟಿಂಗ್ ಸಾಮ್ರಾಟ + ಸ್ಟಿಂಗ್ ಪಿನ್ + ಸ್ಟಿಂಗ್ ಪಿನ್ ರಕ್ಷಕ = ಸ್ಟಿಂಗ್ ತ್ರಿವೇಣಿ ಸಂಗಮ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ನೀವು ಸಿದ್ದರಾಮಯ್ಯರನ್ನು ಭೇಟಿಯಾದಾಗ ಏನು ಹೇಳಿದರು? ಹೇಳಿದರಾ ಅಥವಾ ಝಾಡಿಸಿದರಾ? ಮಹಾಮಂಗಳಾರತಿ ಬಹಳ ಚೆನ್ನಾಗಿಯೇ ಆಯಿತು ಎನ್ನುವ ಮಾಹಿತಿ ನನಗಿದೆ, ನಿಜವಾ? ಅದನ್ನು ಬಹಿರಂಗವಾಗಿ ಹೇಳುವ ನೈತಿಕತೆ, ಧೈರ್ಯ ನಿಮಗಿದೆಯಾ?

ಕನ್ನಡಕ್ಕಾಗಿ ನಾನು ಅಕ್ಕ ಸಮ್ಮೇಳನಕ್ಕೆ ಹೋಗಿದ್ದೆ, ಮೋಜು ಮಸ್ತಿಗಲ್ಲ. ಬಹುಶಃ ಕನ್ನಡ ಸಮ್ಮೇಳನಕ್ಕೆ ಹೋಗಿ ಕರಾಮತ್ತು ನಡೆಸುವ ಕಲೆಗಾರಿಕೆ ಕಾಂಗ್ರೆಸ್ಸಿಗರಾದ ನಿಮಗೆ ಮಾತ್ರ ಕರಗತ. ನಿಮ್ಮ ಕಲೆಗಳನ್ನು ಇನ್ನೊಬ್ಬರಿಗೆ ಅಂಟಿಸುವ ಪ್ರಯತ್ನ ಬೇಡಿ. ಕನ್ನಡವನ್ನು ಅಪಮಾನಿಸುವ ಅಹಂಕಾರವನ್ನೂ ತೋರಬೇಡಿ.

ಸ್ಟಿಂಗ್ ಸುಳಿಯಲ್ಲಿರುವ ನೀವು ವಿಷಯಾಂತರದ ಮಾಸ್ಟರ್. ನನಗೆ ಗೊತ್ತು, ಸ್ಟಿಂಗ್ ಸಾಮ್ರಾಟನ ಒತ್ತಡ ನಿಮ್ಮ ಮೇಲೆ ಎಷ್ಟಿದೆ ಎಂದು. ಗಳ ಇರಿಯುವ ಕೆಲಸ ಬೇಡ ಗೃಹ ಮಂತ್ರಿಗಳೇ.. ಘನತೆ, ಗೌರವ; ಇಂತಹ ಭಾರೀ ಶಬ್ದಗಳು ನಿಮ್ಮ ಬಾಯಲ್ಲಿ ಬರಬಾರದು. ನಡವಳಿಕೆ, ನಿಯತ್ತು, ನಿರ್ಭೀತಿ ಇಲ್ಲದೆ ಸ್ಟಿಂಗ್ ಸಂಚುಕೋರರ ಜತೆ ಶಾಮೀಲಾಗಿರುವ ನಿಮ್ಮ ಯೋಗ್ಯತೆ, ಅಹಂಕಾರವನ್ನು ಕಾಲವೇ ನಿರ್ಣಯಿಸುತ್ತದೆ. ವಿನಾಶಕಾಲೇ ವಿಪರೀತ ಬುದ್ಧಿ ಎಂದು ಕುಮಾರಸ್ವಾಮಿ ಪೋಸ್ಟ್ ಹಾಕಿದ್ದಾರೆ.

ಶೂನ್ಯಕ್ಕಿಳಿದ ಕ್ರಾಸ್ ವೋಟ್ ಕಾಂಗ್ರೆಸ್ ಎಂದು ಜಾಡಿಸಿರುವ ಕುಮಾರಸ್ವಾಮಿ, ಗೆದ್ದ ನಮ್ಮವರು ನಾಲ್ವರು ಅಡ್ಡಮತ ಪಡೆದ ಅಭ್ಯರ್ಥಿಗಳಲ್ಲ. ಅಡ್ಡಕಸಬಿಗಳ ಆತ್ಮಾವಲೋಕನಕ್ಕೆ ಇದು ಸಕಾಲ. ಅಡ್ಡಮತದ ಫಲಾನುಭವಿಯನ್ನು ನಮ್ಮ ವೀರರು ಎದುರುಗೊಳ್ಳಲಿದ್ದಾರೆ ಎಂದಿದ್ದಾರೆ.

ಮಂಗನ ಕೈಗೆ ಮಾಣಿಕ್ಯ ಸಿಕ್ಕಿದರೆ ಏನಾಗುತ್ತದೆ? ಗೃಹ ಇಲಾಖೆ ದುಸ್ಥಿತಿ ಹಂಗಾಗಿದೆ. ತುಘಲಕ್ ಕೈಗೆ ಸಿಕ್ಕಿ ಪೊಲೀಸರು ಹೈರಾಣ ಆಗಿದ್ದಾರೆ. ಮಿಸ್ಟರ್ ತುಘಲಕ್.. ವಿಷಯಾಂತರ ಕಿಡಿಗೇಡಿಗಳ ಲಕ್ಷಣ. ವಿಷಯ ಬಿಟ್ಟು ಮಿಕ್ಕಿದ್ದೆಲ್ಲಾ ಏಕೆ? ನೇರವಾಗಿ ಯುದ್ಧ ಮಾಡಿ. ಪಲಾಯನ ಏಕೆ? ಪಡಿಪಾಟಲು ಯಾಕೆ?

ಸುಳ್ಳುಸುದ್ದಿ ಶೂರ..ನೀವು ಏನೇನು ಮಾಡುತ್ತಿದ್ದೀರಿ? ಪ್ರಕರಣದ ದಿಕ್ಕು ತಪ್ಪಿಸಲು ಎಷ್ಟೊಂದು ಬಸ್ಕಿ ಹೊಡೆಯುತ್ತಿದ್ದೀರಿ? ನೀವು, ನಿಮ್ಮಪ್ಪ, ನಿಮ್ಮ ಸಿಎಂ ಹೊಸೆದ ಕುತಂತ್ರಕ್ಕೆ ಬಲಿಯಾದವರಿಗೇ ಕ್ಲೀನ್ ಚಿಟ್!! ಕ್ಲೀನ್ ಚಿಟ್ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಲ್ಲ. ಅರೆರೆ.. ಎಂಥಾ ಐನಾತಿ ಐಡಿಯಾ? ಅತಿಜಾಣ ಗ್ರಹಣ ಮಂತ್ರಿ!!

ನನ್ನ ಅನುಮಾನ ಏನೆಂದರೆ, ನಿಮ್ಮ ತನಿಖೆಯೇ ಸ್ಟಿಂಗ್ ಆಗುತ್ತಿದೆ! ಲೀಕ್ ಆಗುತ್ತಿರುವ ಸುದ್ದಿಗಳು ಅದಕ್ಕೆ ರೇಖಿ ಹಿಡಿಯುತ್ತಿವೆ. ರೀ ತುಘಲಕ್.. ನೀವು ಆರಂಭ ಮಾಡಿದ್ದೀರಿ, ನಾನು ಮುಗಿಸುತ್ತೇನೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಿರುದ್ಧ INDIA ಒಕ್ಕೂಟ ಹೊಸ ಅಸ್ತ್ರ; ‘ಸಾರ್ವಜನಿಕ ದೋಷಾರೋಪಣೆ’ಗೆ ಸಜ್ಜು; ಇಂದು ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ

ನೀರಿಗೇ ರೂ.30-35 ಕೊಡ್ತೀರಿ, ಹಾಲಿನ ಬೆಲೆ ಹೆಚ್ಚಾದರೆ ವಿರೋಧವೇಕೆ?: ದರ ಏರಿಕೆ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್

'ನೋಡಲು ಅಸಹ್ಯವಾಗಿದ್ದೀಯ, ಮೊದಲು ದೇಹದ ಆಕಾರ ಸರಿಪಡಿಸಿಕೋ': ಆರೋಗ್ಯದ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಟ್ರಂಪ್ ಅವಮಾನ..!

ರಾಜಮನೆತನದ ವಿರುದ್ಧ ಹೇಳಿಕೆ: ಮೈಸೂರಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಭುಗಿಲೆದ್ದ ತೀವ್ರ ಪ್ರತಿಭಟನೆ..!

ದೇಶದಲ್ಲಿ ಅರಾಜಕತೆ ಸೃಷ್ಟಿಸಲು I.N.D.I.A ಒಕ್ಕೂಟ ಯತ್ನ: ಶೋಭಾ ಕರಂದ್ಲಾಜೆ ಆರೋಪ