ಹಾಸನ: ಹೇಮಾವತಿ ಜಲಾಶಯದಿಂದ ನೀರು ಬಿಟ್ಟರೂ ಕೆರೆಗಳಿಗೆ ನೀರು ತಲುಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು ತಮ್ಮ ಸ್ವಂತ ದುಡ್ಡಿನಲ್ಲಿ ಕಾಲುವೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.
ನಾಲೆ ಬ್ಲಾಕ್ ಆಗಿರುವ ಕಾರಣ ಡ್ಯಾಂನಿಂದ ನೀರು ಬಿಟ್ಟರೂ ಶ್ರೀರಾಮದೇವರ ಕಟ್ಟೆಯ ದಕ್ಷಿಣ ನಾಲೆಗೆ ನೀರು ತಲುಪುತ್ತಿಲ್ಲ. ಹೀಗಾಗಿ ರೇವಣ್ಣ ಅವರು ಮಲ್ಲಪ್ಪನಹಳ್ಳಿ, ತಿರಮಪುರ, ಹೊನ್ನಿಕೊಪ್ಪಲು, ಗೊಂದಿಮಲ್ಲೇನಹಳ್ಳಿ, ತಟ್ಟೆಕರೆ ಭಾಗದಲ್ಲಿ ಕಾಲುವೆ ದುರಸ್ತಿ ಕಾರ್ಯ ಮಾಡಿಸಲು ಮುಂದಾಗಿದ್ದಾರೆ. ಆ ಮೂಲಕ ಸರ್ಕಾರದ ಅನುದಾನಕ್ಕೆ ಕಾಯದೆ ತಮ್ಮದೇ ಹಣದಲ್ಲಿ ಕಾಲುವೆ ದುರಸ್ತಿ ಮಾಡಿಸುವ ಮೂಲಕ ಸರ್ಕಾರದ ನಡೆಗೆ ಅವರು ಠಕ್ಕರ್ ಕೊಟ್ಟಿದ್ದಾರೆ.
ರೈತರ ಸಾಲಮನ್ನಾಗೆ ಎಚ್ ಡಿ ಕುಮಾರಸ್ವಾಮಿ ಮತ್ತು ಅವರ ಅಣ್ಣನ ಆಸ್ತಿಯನ್ನು ಶೇರ್ ಮಾಡಲಿ ಎಂದು ಸಚಿವ ಎಚ್ ಸಿ ಬಾಲಕೃಷ್ಣ ಅವರು ಹೇಳಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ. ರೇವಣ್ಣ ಅವರು ನೆಲಮಂಗಲ ಬಳಿ ನನ್ನದು, ಮಗನದ್ದು ಹತ್ತತ್ತು ಎಕರೆ ಆಸ್ತಿ ಇದೆ. ರಾಜ್ಯ ಸರ್ಕಾರ ಏನಾದ್ರೂ ದಿವಾಳಿ ಆಗಿದ್ದರೆ ರಾಜ್ಯದ ಹಿತ ದೃಷ್ಟಿಯಿಂದ ನನ್ನ ಆಸ್ತಿ ಬೇಕಾದ್ರೆ ಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಜನರು ಉಳಿಯಬೇಕು, 10 ಎಕರೆ ಇಟ್ಟುಕೊಂಡು ಏನ್ಮಾಡೋಣ. ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ, ಬರ್ಬಾದ್ ಆಗಿದೆ. ಎಚ್.ಡಿ.ರೇವಣ್ಣ ಅವರೇ 10 ಎಕರೆ ಕೊಡಿ ಅಂದರೆ ಕೊಡೋಣ ಎಂದು ರೇವಣ್ಣ ಲೇವಡಿ ಮಾಡಿದ್ದಾರೆ.