ಚಿತ್ರದುರ್ಗ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿಗ ಸಚಿವರ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ.
ಡಿಕೆ ಶಿವಕುಮಾರ್ ಅವರ ಆಸ್ತಿ ಸಂಪಾದನೆ ವೈಯಕ್ತಿಕ ವಿಚಾರ. ಆದರೆ ಡಿಕೆಶಿಗಿಂತ ನಾಲ್ಕು ಪಟ್ಟು ಹೆಚ್ಚು ಆಸ್ತಿ ಎಚ್ ಡಿ ಕುಮಾರಸ್ವಾಮಿ ಅವರ ಬಳಿ ಇದೆ ಎಂದು ಸಚಿವ ಚಲುವರಾಯಸ್ವಾಮಿ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಏರ್ ಪೋರ್ಟ್ ರಸ್ತೆಯಲ್ಲಿ ಮತ್ತು ನೆಲಮಂಗಲ ರಸ್ತೆಯಲ್ಲೂ ಕುಮಾರಸ್ವಾಮಿ ಅವರ ಆಸ್ತಿ ಇದೆ. ಇದನ್ನೆಲ್ಲ ಎಚ್ ಡಿಕೆ ಎಲ್ಲಿಂದ ಸಂಪಾದನೆ ಮಾಡಿದರು. ನಾವು ಯಾವತ್ತಾದರೂ ಈ ಬಗ್ಗೆ ಪ್ರಶ್ನೆ ಮಾಡಿದ್ದೇವಾ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಸ್ತಿ ಹಾಗೂ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎನ್. ಚಲುವರಾಯಸ್ವಾಮಿ ನೀಡಿರುವ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಮಾಡಿ ಓಡಿ ಹೋದರು. ಆದರೆ ಡಿಕೆ ಶಿವಕುಮಾರ್ ಅವರು ಜನಾರ್ಶೀವಾದದಿಂದ ಮುಖ್ಯಮಂತ್ರಿ ಆದರು ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಯಾವುದೋ ಅನಿವಾರ್ಯ ಸಂದರ್ಭಗಳಲ್ಲಿ ಕುಮಾರಸ್ವಾಮಿ ಅವರು ಆಕಸ್ಮಿಕವಾಗಿ ಎರಡು ಬಾರಿ ಮುಖ್ಯಮಂತ್ರಿ ಆದರು. ಹೀಗಾಗಿ ಡಿಕೆ ಶಿವಕುಮಾರ್ ಅವರು ಕುಮಾರಸ್ವಾಮಿಯಿಂದ ಕಲಿಯಬೇಕಿಲ್ಲ. ಡಿಕೆಶಿ ಡನಾಮಿಕ್, ಬಂಡೆ ಮತ್ತು ಚಾಣಕ್ಯ ಎಂದು ಚಲುವರಾಯಸ್ವಾಮಿ ಹಾಡಿ ಹೊಗಳಿದ್ದಾರೆ.