ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಈ ನಡುವೆ ಸರ್ಕಾರ ಪ್ರಕಟಿಸಿರುವ ಅತ್ಯಲ್ಪ ಬರ ಪರಿಹಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.
ಬರದಿಂದ ತತ್ತರಿಸಿರುವ ರೈತರಿಗೆ ಪೂರ್ಣ ಊಟ ನೀಡುವ ಬದಲು ಸರ್ಕಾರ ಉಪ್ಪಿನಕಾಯಿ ನೀಡುತ್ತಿದೆ" ಎಂದು ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.
ರಾಜ್ಯ ಸರ್ಕಾರ ಘೋಷಿಸಿರುವ 2,500 ರೂ. ಬರ ಪರಿಹಾರ ಮೊತ್ತವನ್ನು ಅಲ್ಪ ಎಂದು ಟೀಕಿಸಿದ ಪ್ರತಿಪಕ್ಷ ಸದಸ್ಯರು ಬುಧವಾರ ವಿಧಾನ ಪರಿಷತ್‌ನಿಂದ ಹೊರನಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರೂ.2,500 ಬರ ಪರಿಹಾರಕ್ಕೆ ಮತ್ತೊಂದು ಸೊನ್ನೆ ಸೇರಿಸಿ ರೂ.25,000ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದರು.
“ಇದನ್ನು ತಕ್ಷಣವೇ ನೀಡಬೇಕಿಲ್ಲ. ಆದರೆ, ಮೊದಲ ಕಂತಿನಲ್ಲಿ ಕನಿಷ್ಠ ರೂ.10,000 ನೀಡಿ. ಕೇಂದ್ರ ಸರ್ಕಾರದಿಂದ ಅನುದಾನ ಪಡೆಯಲು ನಾವು ಪ್ರಯತ್ನಿಸೋಣ. ಉಳಿದ ಪರಿಹಾರವನ್ನು ನಂತರ ನೀಡಬಹುದು ಎಂದು ಹೇಳಿದರು.
ಇದೇ ವೇಳೆ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಹಣದ ಕೊರತೆಯಿಲ್ಲ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿರುವುದನ್ನು ಉಲ್ಲೇಖಿಸಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೆ. ಕೇಶವ ಪ್ರಸಾದ್ ಅವರು, ಬರ ಪರಿಹಾರಕ್ಕಾಗಿ ಕೇವಲ ರೂ.1,250 ಕೋಟಿ ಘೋಷಿಸಿರುವುದು ರಾಜ್ಯದ ದುರ್ಬಲ ಆರ್ಥಿಕ ಪರಿಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದರು. ಅಲ್ಲದೆ, ರಾಜ್ಯದ ಆರ್ಥಿಕ ಸ್ಥಿತಿಗತಿಯ ಕುರಿತು ಶ್ವೇತಪತ್ರ ಹೊರಡಿಸುವಂತೆ ಅವರು ಒತ್ತಾಯಿಸಿದರು.
ಈ ವೇಳೆ ಪ್ರತಿಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಸರ್ಕಾರದಿಂದ ಅನುದಾನವನ್ನು ಪಡೆದುಕೊಳ್ಳಬೇಕು. ಕೇಂದ್ರದಿಂದ ಹಣ ತರಲು ಸಾಧ್ಯವಾದರೆ 70:30 ಅಥವಾ 60:40ರ ಅನುಪಾತದಲ್ಲಿ ರಾಜ್ಯ ಮತ್ತು ಕೇಂದ್ರದ ಹಣಕಾಸು ವ್ಯವಸ್ಥೆ ರೂಪಿಸುವುದಾಗಿ ಭರವಸೆ ನೀಡಿದರು. ಬಳಿಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಬರ ಪರಿಹಾರಕ್ಕೆ ರೂ.1 ಲಕ್ಷ ನೀಡಲು ಮುಂದಾದ ಬಿಜೆಪಿ ಸದಸ್ಯ
ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೆ. ಕೇಶವ ಪ್ರಸಾದ್ ಅವರು ಬರ ಪರಿಹಾರಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ.1 ಲಕ್ಷದ ಚೆಕ್ ನೀಡಲು ಮುಂದಾದರು. ಚೆಕ್ ಅನ್ನು ಸಭಾಪತಿ ಸಲೀಂ ಅಹ್ಮದ್ ಅವರಿಗೆ ಹಸ್ತಾಂತರಿಸಿದರು.
ರೈತರು ತೀವ್ರ ಸಂಕಷ್ಟದಲ್ಲಿದ್ದು, ಎಲ್ಲ ಶಾಸಕರು ಹಾಗೂ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ಬರ ಪರಿಹಾರಕ್ಕೆ ನೀಡಬೇಕು ಎಂದು ಪ್ರಸಾದ್ ಸಲಹೆ ನೀಡಿದರು. ಬರ ಸಂಬಂಧಿತ ಚಟುವಟಿಕೆಗಳಿಗೆ ಸಿಎಸ್‌ಆರ್ ನಿಧಿ ಬಳಸಿಕೊಳ್ಳುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ಆದರೆ, ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ‘ಬರ ಪರಿಹಾರ’ಕ್ಕಾಗಿ ಪ್ರತ್ಯೇಕ ಶೀರ್ಷಿಕೆ ಇಲ್ಲದ ಕಾರಣ ಸಭಾಪತಿಗಳು ಬಳಿಕ ಚೆಕ್ ಅನ್ನು ಪ್ರಸಾದ್ ಅವರಿಗೆ ಹಿಂದಿರುಗಿಸಿದರು. ಪ್ರತ್ಯೇಕ ಶೀರ್ಷಿಕೆ ತೆರೆದ ಬಳಿಕ ಚೆಕ್ ಅನ್ನು ಮರುಸಲ್ಲಿಸುವಂತೆ ಸೂಚಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಗತ್ಯವೇ?
ಗ್ಯಾರಂಟಿ ಯೋಜನೆಗಳ ಪ್ರಯೋಜನಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿರುವಾಗ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಗತ್ಯವೇನು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಪ್ರಶ್ನಿಸಿದರು.
ಬರ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಮನೆಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಮಿತಿಯ ಪಾತ್ರವೇನು ಎಂದು ಪ್ರಶ್ನಿಸಿದ ಅವರು, ಸರ್ಕಾರ ಸಮಿತಿಗಾಗಿ ವಾರ್ಷಿಕ ರೂ.68 ಕೋಟಿ ಖರ್ಚು ಮಾಡುತ್ತಿದೆ ಎಂದು ಹೇಳಿದರು.
ಸರ್ಕಾರದ ವೆಚ್ಚವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದ ಕೌಟಿಲ್ಯ, ಸಾಂಪ್ರದಾಯಿಕ ಜಾತಿ ಆಧಾರಿತ ವೃತ್ತಿಗಳನ್ನು ಅವಲಂಬಿಸಿರುವ ಕುಟುಂಬಗಳಿಗೂ ರೈತರಂತೆ ರೂ.25,000 ನೆರವು ನೀಡಬೇಕು ಎಂದು ಆಗ್ರಹಿಸಿದರು.
ಬರಪೀಡಿತ ಪ್ರದೇಶಗಳ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಾಹಾರವನ್ನೂ ನೀಡಬೇಕು. ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶದ ಕಿಟ್‌ಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.