ಬೆಂಗಳೂರು: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ನಡೆದ ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಬಿಜೆಪಿ ತಿರುಗೇಟು ನೀಡಿದೆ.
ಕಾಂಗ್ರೆಸ್ ಭಾರತೀಯ ಪರಂಪರೆಗೆ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದೆ. ಪ್ರಧಾನಿ 'ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಮಯವಿದ್ದರೂ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಮೌನವಾಗಿದ್ದಾರೆ ಎಂಬ ಸಚಿವರ ಹೇಳಿಕೆಗೆ ಬಿಜೆಪಿ ಕಿಡಿಕಾರಿದೆ.
ಹೌದು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ಭಜನೆ ಕ್ಲಬ್ಬಿಂಗ್'ಗೆ ಸಮಯವಿದೆ, ಆದರೆ ಚುನಾವಣಾ ಆಯೋಗದ ಮೂಲಕ ಪ್ರಜಾಪ್ರಭುತ್ವ ಹತ್ತಿಕ್ಕುವ ಕುರಿತಾದ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲು ಸಮಯವಿಲ್ಲ. ಪ್ರಧಾನಿ ಕಳೆದ 13 ವರ್ಷಗಳಿಂದ ಪ್ರಶ್ನೆಗಳಿಂದ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಳೆದ 13 ವರ್ಷಗಳಿಂದ ಒಂದು ಪರಿಚಿತ ಮಾದರಿ ಕಂಡುಬರುತ್ತಿದೆ. ಸರ್ಕಾರ ಕಠಿಣ ಪ್ರಶ್ನೆಗಳನ್ನು ಎದುರಿಸಿದಾಗ, ಅವುಗಳಿಗೆ ಉತ್ತರಿಸುವ ವಿಷಯದಲ್ಲಿ ಪ್ರಧಾನಿ ಕಾಣುವುದಿಲ್ಲ. ಸಂಭ್ರಮಾಚರಣೆಗಳಿಗೆ ಅವರು ಇರ್ತಾರೆ. ಆದರೆ ಹೊಣೆಗಾರಿಕೆಯ ವಿಷಯದಲ್ಲಿ ಅವರು ಮೌನಿಯಾಗಿರುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಸಚಿವರು ಭಾರತದ 'ಭಜನೆ' ಮತ್ತು 'ಭಕ್ತಿ'ಯ ಪರಂಪರೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ ಮತ್ತು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಮತ್ತೊಮ್ಮೆ ಭಾರತದ ಭಜನೆ ಮತ್ತು ಭಕ್ತಿಯ ಅದ್ಭುತ ನಾಗರಿಕ ಪರಂಪರೆಯನ್ನು ಅಪಹಾಸ್ಯ ಮಾಡಿದೆ ಮತ್ತು ಅವಮಾನಿಸಿದೆ. ಸ್ವಾರ್ಥಿ ಕಾಂಗ್ರೆಸ್‌ನ 'ಮೊದಲ ಕುಟುಂಬ'ದ (ಗಾಂಧಿ ಕುಟುಂಬದ) ಗುಣಗಾನ ಮಾಡುವುದರಲ್ಲಿ ಮಾತ್ರ ಹೆಸರುವಾಸಿಯಾಗಿರುವ ಹೊಂದಿರುವ ಜೂನಿಯರ್ ಖರ್ಗೆಯಿಂದ ಇದಕ್ಕಿಂತ ಉತ್ತಮವಾದದ್ದನ್ನು ನಿರೀಕ್ಷಿಸಲು ಸಾಧ್ಯವೇ?" ಎಂದು ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಪೋಸ್ಟ್ ಮಾಡಿದ್ದಾರೆ.