ಕವಿತೆ ಯಾರ್ ಕೊಳ್ತಾರೆ ಸ್ವಾಮಿ
ಕಳೆದ ಬೇಸಿಗೆಯ (ಮಾರ್ಚ್-೨೦೧೪) ಶುರುವಾದ ಕನಸೊಂದು ಈಗ ನನಸಾಗಿದೆ. ಆ ಕನಸು ಯಾವುದೆಂದರೆ ‘ಕವಿತೆ ಯಾರ್ ಕೊಳ್ತಾರೆ ಸ್ವಾಮಿ?’ ಅಂಡ್ರಾಯಿಡ್ ಆ್ಯಪ್.
ಫೇಸ್ಬುಕ್-ನಲ್ಲಿ ಕನ್ನಡ ಕವಿತೆ ಸಂಕಲನವನ್ನು ಅಂಡ್ರಾಯಿಡ್ ಆ್ಯಪ್ ರೂಪದಲ್ಲಿ ತರುವ ಯೋಜನೆ ಹಂಚಿಕೊಂಡಾಗ ಹಲವರು ಕವಿಗಳು, ಚಿತ್ರ ಕಲಾವಿದರು, ಸಾಫ್ಟ್ವೇರ್ ಇಂಜಿನಿಯರ್-ಗಳು ಸಹಕಾರದ ಭರವಸೆ ನೀಡಿದರು. ಎಲ್ಲರ ಸಹಕಾರ, ಸಂಯೋಜನೆಯಿಂದಾಗಿ ಕನ್ನಡವನ್ನು ಹೊಸ ತಂತ್ರಜ್ಞಾನ ಬಳಸಿಕೊಂಡು ಬೆಳೆಸುವ, ಪ್ರಸರಣ ಮಾಡುವ ಯೋಜನೆ ಇದೀಗ ಫಲ ಕೊಟ್ಟಿದೆ.
ಇದರಲ್ಲಿ ಹೊಸತೇನಿದೆ ಸ್ವಾಮೀ?
ಹೊಸ ದಾರಿ, ಹೊಸ ಹೂಗಳು, ಅದೇ ಕಾವ್ಯದ ಹಳೆ ಘಮಲು… ಅಷ್ಟೇ!
ನಾವು ಈ ಯೋಜನೆ ಹಾಕಿಕೊಂಡಾಗ ನಮ್ಮ ತಂಡದ ಮುಂದೆ ನಾಲ್ಕು ಮುಖ್ಯ ಗುರಿಗಳಿದ್ದವು :
ಕನ್ನಡ ಸಾಹಿತ್ಯದ ಪ್ರಸರಣ ಹೊಸ ಮಾರ್ಗದ ಅನ್ವೇಷಣೆ,
ಅಂತರ್ಜಾಲದಲ್ಲಿ ಮುಖ್ಯವಾಗಿ ಅಂಡ್ರಾಯಿಡ್ ಲೋಕದಲ್ಲಿ ಕನ್ನಡ ಹೆಜ್ಜೆಗುರುತು ಮೂಡಿಸುವುದು,
‘ಕವಿತೆ ಯಾರು ಕೊಳ್ತಾರೆ ಸ್ವಾಮೀ?’ ಎಂಬ ಪುಸ್ತಕ ಪ್ರಕಾಶನಗಳ ನಿರಾಶಾದಾಯಕ ಪ್ರಶ್ನೆಗೆ ಉತ್ತರ ಅನ್ವೇಶಿಸುವುದು ಮತ್ತು
ಕನ್ನಡ ಪುಸ್ತಕ ಸುಲಭವಾಗಿ ಸಿಗದೇ ಪರಿತಪಿಸುವ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ ಉತ್ತಮ ಕಾವ್ಯ ತಲುಪಿಸುವುದು
ಇತ್ತೀಚಿಗಷ್ಟೇ ನಮ್ಮನ್ನು ಅಗಲಿದ ಜ್ಞಾನಪೀಠ ಪುರಸ್ಕೃತ, ಕನ್ನಡ ನಾಡು ಕಂಡ ಮಹಾನ್ ಸೃಜನಶೀಲ ಸಾಹಿತಿ ಡಾ. ಯು. ಆರ್. ಅನಂತ ಮೂರ್ತಿಯವರ ಸವಿನೆನಪಿಗೆ ಅರ್ಪಿಸಲಾಗಿದೆ.
ಡೌನ್ಲೋಡ್ ಮಾಡುವುದು ಎಲ್ಲಿಂದ?
ನಮ್ಮ ಅಂಡ್ರಾಯಿಡ್ ಆ್ಯಪ್-ನ್ನು ಉಚಿತವಾಗಿ ಗೂಗಲ್ ಪ್ಲೇ ಸ್ಟೋರ್-ನಿಂದ ಯಾವುದೇ ಅಂಡ್ರಾಯಿಡ್ ಮೊಬೈಲ್, ಟ್ಯಾಬ್ಲೆಟ್ ಮತ್ತಿತರ ಪರಿಕರಗಳಲ್ಲಿ ಬಳಸಬಹುದು.
https://play.google.com/store/apps/details?id=com.solutionfinder.kyks
ಕನ್ನಡ ಕಾವ್ಯ ಭವ್ಯ ಪರಂಪರೆಯ ಬಗ್ಗೆ ಹೇಳುವುದೇ ಬೇಡ, ಅಷ್ಟು ವಿಶಾಲ ಮತ್ತು ಸಮೃದ್ಧವಾಗಿದೆ. ಹಳೆಗನ್ನಡ, ನಡುಗನ್ನಡ ಮತ್ತು ಹೊಸ ಕನ್ನಡದಲ್ಲಿ ಕಾವ್ಯ ತನ್ನ ನಿರಂತರತೆಯನ್ನು ಕಾಯ್ದು ಕೊಂಡಿದೆ. ಪಂಪ, ರನ್ನ, ಜನ್ನ ಹರಿಹರ, ರಾಘವಾಂಕ, ಕುಮಾರವ್ಯಾಸ, ವಚನಕಾರರು, ಪುರಂದರ-ಕನಕ ದಾಸರ ಭಕ್ತಿ ಸಾಹಿತ್ಯ, ಕುವೆಂಪು, ಬೇಂದ್ರೆ, ಪುತಿನ, ಅಡಿಗರು, ಕೆಸ್ಸ್ಎನ್ನ್, ಹೆಚೆಸ್ವಿ, ಜಿಎಸ್ಸ್ ಶಿವರುದ್ರಪ್ಪ, ಕಂಬಾರರು, ಸಿದ್ದಲಿಂಗಯ್ಯ ಮುಂತಾದವರಿಂದ ಕನ್ನಡ ಕಾವ್ಯ ಸಮೃದ್ಧವಾಗಿದೆ.
ಯಾವುದೇ ಸಾಹಿತ್ಯ ಆಸಕ್ತರು ತಮ್ಮ ಮೊದಲ ಬರವಣಿಗೆ ಶುರು ಮಾಡುವುದು ಕವಿತೆಯಿಂದಲೇ. ಹದಿಹರೆಯದ ವಯಸ್ಸಿನಲ್ಲಿ ಕವಿತೆಯನ್ನು ಬರೆಯದ ಸಾಹಿತ್ಯಾಸಕ್ತರೆ ಇಲ್ಲವೆನ್ನಬೇಕು. ಉತ್ತಮ ಕವಿತೆಗಳ ಗುಚ್ಛವನ್ನು ಹಿಡಿದು ಪುಸ್ತಕ ಪ್ರಕಾಶಕರ ಮುಂದೆ ನಿಲ್ಲುವ ಕವಿಗೆ ಸಾಮಾನ್ಯವಾಗಿ ಕಿವಿಗೆ ಬೀಳುವ ನಿರುತ್ಸಾಹದ ಮಾತು ‘ಕವಿತೆಗಳ ಪುಸ್ತಕಕ್ಕೆ ಮಾರುಕಟ್ಟೆ ಇಲ್ಲಾರೀ… ಕವಿತೆ ಯಾರ್ ಕೊಳ್ತಾರೆ ಸ್ವಾಮಿ?’.
ಇಂತಹ ನಿರುತ್ಸಾಹದ ಕಾರ್ಮೋಡಗಳನ್ನ ಹೊಡೆದೋಡಿಸಲು ಕನ್ನಡ ಯುವ ಕವಿಗಳಿಗೆ ಜೊತೆಯಾಗಿದ್ದು ಅಂತರ್ಜಾಲ ತಂತ್ರಜ್ಞಾನ. ಹಾಗಾಗಿ ಬ್ಲಾಗ್, ಫೇಸ್ಬುಕ್-ನಲ್ಲಿ ಹೊಸ ಕಾವ್ಯಧಾರೆ ಹರಿಯುತ್ತಿದೆ. ಜೊಳ್ಳು, ಪೊಳ್ಳು, ಗಟ್ಟಿ, ಮಹತ್ವಾಕಾಂಕ್ಷೆ ಕಡಿಮೆ ಎಂಬ ವಿಮರ್ಶೆಯ ಮಾತನ್ನೆಲ್ಲಾ ಬದಿಗಿಟ್ಟು ನೋಡಿದರೆ ಕನ್ನಡದ ದೃಷ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆ.
ಈ ಪ್ರಯೋಗಕ್ಕೆ, ಈ ಅಂಡ್ರಾಯಿಡ್ ಆ್ಯಪ್ ಸೃಷ್ಟಿಗೆ ‘ಕವಿತೆ ಯಾರ್ ಕೊಳ್ತಾರೆ ಸ್ವಾಮಿ?’ ‘ಅಯ್ಯೋ ಫೇಸ್ಬುಕ್ ಕವಿಗಳು’ ಎಂಬ ನಿರುತ್ಸಾಹದ ಮಾತುಗಳೇ ಸ್ಫೂರ್ತಿ. ಇದು ನಿಂತ ನೀರಾಗುತ್ತಿರುವ ಮುದ್ರಣ ಮಾಧ್ಯಮವನ್ನು ಮೀರಿ ನಿಲ್ಲುವ ಪ್ರಯತ್ನವೂ ಹೌದು. ಅದರ ವಿರುದ್ಧವಲ್ಲವಾದರೂ, ಮುದ್ರಣ ಮಾಧ್ಯಮದ ಜೊತೆ ಜೊತೆಗೆ ಓದಿನ, ಪ್ರಕಟಣೆಯ, ಓದುಗರ ತಲುಪುವ, ಕನ್ನಡ ಕಾವ್ಯದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುವ ಆಶಯ ನಮ್ಮ ತಂಡಕ್ಕಿದೆ.
ಈ ಪ್ರಯೋಗಕ್ಕೆ ಕನ್ನಡದ ಪ್ರಮುಖ ಯುವ ಕವಿಗಳು, ಕವಯತ್ರಿಯರು, ಕನ್ನಡ ನಾಡಿನ ಯುವ ಸಾಫ್ಟ್ವೇರ್ ತಂತ್ರಜ್ಞರು ಜೊತೆಯಾಗಿದ್ದು ನನ್ನ ಸೌಭಾಗ್ಯ ( ಅವರ ವಿವರಗಳು ಈ ಅಂಡ್ರಾಯಿಡ್ ಆ್ಯಪ್-ನ ನಮ್ಮ ತಂಡದ ಪುಟದಲ್ಲಿದೆ). ಈ ಪ್ರಯತ್ನಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು. ಕನ್ನಡದ ಮಟ್ಟಿಗೆ ಇದು ಪುಟ್ಟ ಹೆಜ್ಜೆಯಾದರೂ, ಇನ್ನಷ್ಟು ಮತ್ತಷ್ಟು ಪ್ರಯತ್ನಗಳು ಈ ದಿಕ್ಕಿನಲ್ಲಿ ನಡೆದರೆ ಅಲ್ಲಿಗೆ ನಮ್ಮ ಶ್ರಮ ಸಾರ್ಥಕ.
ಅಂದ ಹಾಗೆ ಈ ಪ್ರಾಜೆಕ್ಟ್ ನಮ್ಮ ತಂಡದ ಶ್ರಮದಾನದಿಂದಾಗಿ ಸೊನ್ನೆ ರೂಪಾಯಿ ಬಜೆಟ್ನಲ್ಲಿ ಹೊರಬಂದಿದೆ. ಇದೂ ಸಾಧ್ಯವಾಗಿದ್ದು ನಮ್ಮ ತಂಡದ ಅದಮ್ಯ ಕನ್ನಡ ಮತ್ತು ಕನ್ನಡ ಕಾವ್ಯ ಪ್ರೀತಿಯಿಂದ. ಹಾಗಾಗಿ ನಾವು ಕನ್ನಡದ ಭವಿಷ್ಯದ ಬಗ್ಗೆ ಆಶಾಭಾವನೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು ಎಂಬ ಭರವಸೆ ಕೊಡಬಲ್ಲೆ.
ಈ ಪ್ರಾಜೆಕ್ಟ್’ಗೆ ಯಾವುದೇ ಪ್ರತಿಫಲ ಅಭಿಲಾಷೆಯಿಲ್ಲದೆ ದುಡಿದ ಎಲ್ಲರನ್ನೂ, ಕವಿಗಳನ್ನು ಗೌರವಿಸುವ ಹಂಬಲವಿದೆ, ಆಸಕ್ತರು, ಕನ್ನಡ ಅಭಿಮಾನಿಗಳು, ಧನ ಸಹಾಯ ಮಾಡಲು ಇಚ್ಛಿಸುವರು, ಸಂಘ ಸಂಸ್ಥೆಗಳು ದಯವಿಟ್ಟು ಇಮೇಲ್ (vidyashankar.h@gmail.com) ಮುಖಾಂತರ ಸಂಪರ್ಕಿಸಿ. ನಿಮ್ಮ ಪ್ರೋತ್ಸಾಹ, ಸಹಾಯ ನಮ್ಮ ಮುಂದಿನ ಪ್ರಾಜೆಕ್ಟ್’ ಗೂ ಸಹಾಯಕ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ!