ಬೆಂಗಳೂರು: ಕನ್ನಡದ ಸ್ಥಿತಿಗತಿಗಳನ್ನು ಚರ್ಚಿಸಿರುವ `ಕಾಡಹಾದಿಯ ಹೂಗಳು' ಸಿನಿಮಾ ಶ್ರವಣಬೆಳಗೊಳದಲ್ಲಿ ನಡೆಯುವ 81ನೇ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡು ಪ್ರದರ್ಶನಗೊಳ್ಳಲಿದೆ.
ಬಾಲಕಿ ಮುದ್ದು ತೀರ್ಥಹಳ್ಳಿ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಬಿಡುಗಡೆಯಾಗಿ ಸಾವಿರಾರು ಪ್ರೇಕ್ಷಕರ ಗಮನ ಸೆಳೆಯುತ್ತಿರುವುದಾಗಿ ನಿರ್ದೇಶಕ ಪ್ರೊ.ಎಲ್.ಎನ್. ಮುಕುಂದರಾಜ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆರೇಳು ಕನ್ನಡ ಸಂಘಟನಾಕಾರರು ಹೆಚ್ಚಿನ ಮೊತ್ತದ ಹಣ ನೀಡಿದ್ದರೆ, ಉಳಿದಂತೆ ಕನ್ನಡ ಮೇಷ್ಟ್ರುಗಳೇ ರು.1000 ದಿಂದ ರು.20,000 ತನಕ ಹಣ ಹಾಕಿ ನಿರ್ಮಿಸಿರುವ ಚಿತ್ರವಿದಾಗಿದ್ದು, ಈ ಚಿತ್ರ ವೀಕ್ಷಿಸಿದ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವರೆಂಬ ಆಶಯ ನಮ್ಮದಾಗಿದೆ ಎಂದರು.
ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಹಾಗೂ ಟೀಚರ್ಸ್ ಸಿನಿಮಾ ಬ್ಯಾನರಿನಡಿಯಲ್ಲಿ ಫೆ. 3ಕ್ಕೆ ಮಧ್ಯಾಹ್ನ 2 ಗಂಟೆಗೆ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಇದಕ್ಕೆ ಅವಕಾಶ ಕಲ್ಪಿಸಿದ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ ಎಂದು ಹೇಳಿದರು. ಕವಿ ಭೂಹಳ್ಳಿ ಪುಟ್ಟಸ್ವಾಮಿ, ಕಾರ್ಯಕಾರಿ ನಿರ್ಮಾಪಕ ಸೂರ್ಯ ಮುಕುಂದರಾಜ್, ನಟ ಪ್ರಕಾಶ್ ಅರಸ್, ಸಹ ನಿರ್ದೇಶಕ ಪ್ರದೀಪ್ ತಿಪಟೂರು ಉಪಸ್ಥಿತರಿದ್ದರು.