ವಾಷಿಂಗ್ ಟನ್ ಪರಸ್ಪರ ಸಂಪರ್ಕದಲ್ಲಿರುವುದಕ್ಕೆ ಸಾಮಾಜಿಕ ಜಾಲತಾಣಗಳಿದ್ದರೂ ಯುವಜನತೆ ಇ-ಮೇಲ್ ಕಳಿಸುವ ಅಭ್ಯಾಸವನ್ನು ಮುಂದುವರೆಸಿದ್ದಾರೆ ಎಂದು ಸಂಶೋಧನೆಯೊಂದು ತಿಳಿಸಿದೆ.
ಜಾಗತಿಕ ಸಾಫ್ಟ್ ವೇರ್ ಕಂಪನಿ ಅಡೋಬ್ ಪ್ರಚಾರ ತಂಡದ ಸಂಶೋಧನೆ ಪ್ರಕಾರ, 1980 ರ ನಂತರ ಹುಟ್ಟಿದ ಜನರು ಬೇರೆಯವರಿಗಿಂತಲೂ ಹೆಚ್ಚು ಇ-ಮೇಲ್ ಬಳಸುತ್ತಾರಂತೆ. ಈ ಪೈಕಿ ಅತಿ ಹೆಚ್ಚು ಜನ ಕಚೇರಿ ಅವಧಿಯ ನಂತರವೂ ಇ-ಮೇಲ್ ಪರಿಶೀಲಿಸುತ್ತಾರೆ. ಮೂರನೇ ಒಂದು ಭಾಗದ ಜನರು ಮ್ಯಾನೇಜರ್ ಅಥವಾ ಹಿರಿಯ ಕಾರ್ಯನಿರ್ವಾಹಕರೊಂದಿಗೆ ಮಾತನಾಡಲು ಇ-ಮೇಲ್ ಹೆಚ್ಚು ಅನುಕೂಲಕರ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಅಡೋಬ್ ನ ಇ-ಮೇಲ್ ವಿಭಾಗದ ನಿರ್ದೇಶಕ ಕ್ರಿಸ್ಟಿನ್ ನರಗಾನ್ ಹೇಳಿದ್ದಾರೆ.
ಇಮೇಲ್ ಬಳಕೆ ಬಗ್ಗೆ 18 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ 400 ಯುಎಸ್ ಮೂಲದ ಉದ್ಯೋಗಿಗಳನ್ನು ಸಂದರ್ಶನ ನಡೆಸಲಾಗಿದೆ. ಈ ಪೈಕಿ ಅತಿ ಹೆಚ್ಚು ಜನರು ತಾವು ಸಾಮಾಜಿಕ ಜಾಲತಾಣಗಳಿದ್ದರೂ ಹೆಚ್ಚು ಇ-ಮೇಲ್ ಬಳಸುವುದಾಗಿ ತಿಳಿಸಿದ್ದಾರೆ.
ಪ್ರತಿ ವ್ಯಕ್ತಿಯೂ ದಿನದಲ್ಲಿ 6 ಗಂಟೆ, ವಾರಕ್ಕೆ 30 ಗಂಟೆಗಳ ಕಾಲ ಇ-ಮೇಲ್ ಬಳಕೆ ಮಾಡುತ್ತಾನೆ ಎಂದು ಅಧ್ಯಯನ ವರದಿ ತಿಳಿಸಿದೆ. 10 ಜನರಲ್ಲಿ ಒಬ್ಬ ಕಚೇರಿಯ ಇ ಮೇಲ್ ನ್ನು ಮನೆಯಲ್ಲಿ ಹಾಗೂ ಖಾಸಗಿ ಇ ಮೇಲ್ ಗಳನ್ನು ಕಚೇರಿಯಲ್ಲಿ ನೋಡುತ್ತಾನಂತೆ. ಈ ಪೈಕಿ 8 ನೇ ಒಂದು ಭಾಗದಷ್ಟು ಜನರು ಒಂದಕ್ಕಿಂತ ಹೆಚ್ಚು ಇ ಮೇಲ್ ಗಳನ್ನು ಬಳಕೆ ಮಾಡುತ್ತಿದ್ದಾರೆ.