ಸಾನ್ ಫ್ರಾನ್ಸಿಸ್ಕೊ: ತಿಂಗಳಲ್ಲಿ ಸಕ್ರಿಯವಾಗಿ ಫೇಸ್ ಬುಕ್ ಬಳಕೆದಾರರ ಸಂಖ್ಯೆ ಎರಡು ಶತಕೋಟಿಗೂ ಅಧಿಕ ದಾಟಿದೆ. ಅಂದರೆ ವಿಶ್ವದ ಕಾಲು ಭಾಗಕ್ಕಿಂತಲೂ ಅಧಿಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ ಎಂದರ್ಥ.
ಇಂದು ಬೆಳಗ್ಗಿನ ಹೊತ್ತಿಗೆ ಫೇಸ್ ಬುಕ್ ನಲ್ಲಿ 2 ಶತಕೋಟಿ ಜನರು ಸಕ್ರಿಯರಾಗಿದ್ದಾರೆ ಎಂದು ಫೇಸ್ ಬುಕ್ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್ ಬರ್ಗ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ವಿಶ್ವದ ಜನರನ್ನು ಸಂಪರ್ಕಿಸುವ ಮೂಲಕ ನಾವು ಬೆಳವಣಿಗೆ ಸಾಧಿಸುತ್ತಿದ್ದೇವೆ. ಈ ಮೂಲಕ ನಾವು ಜಗತ್ತನ್ನು ಇನ್ನೂ ಹತ್ತಿರಕ್ಕೆ ತರೋಣ. ಈ ಪ್ರಯಾಣದಲ್ಲಿ ನಿಮ್ಮೊಂದಿಗಿರುವುದು ಹೆಮ್ಮೆ ತಂದಿದೆ ಎಂದು ಮಾರ್ಕ್ ಝುಕರ್ ಬರ್ಗ್ ಬರೆದಿದ್ದಾರೆ.
ಫೇಸ್ ಬುಕ್ ನಲ್ಲಿ ಪ್ರತಿ ತಿಂಗಳು ಶತಕೋಟಿಗೂ ಅಧಿಕ ಜನರು ಗುಂಪಿನಲ್ಲಿ ಸಕ್ರಿಯರಾಗುತ್ತಾರೆ. ಪ್ರತಿದಿನ ಸರಾಸರಿ 800 ದಶಲಕ್ಷಕ್ಕೂ ಅಧಿಕ ಮಂದಿ ಫೇಸ್ ಬುಕ್ ನಲ್ಲಿ ಏನಾದರೊಂದು ವಿಷಯಗಳನ್ನು ಲೈಕ್ ಮಾಡುತ್ತಾರೆ.
2004ರಲ್ಲಿ ಸ್ಥಾಪನೆಗೊಂಡ ಫೇಸ್ ಬುಕ್ 5 ವರ್ಷಗಳ ಹಿಂದೆ ಶತಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿತ್ತು.
ಟಿವಿ ಶೋಗಳು: ಇನ್ನಷ್ಟು ಜನರನ್ನು ತಲುಪಲು ಫೇಸ್ ಬುಕ್ ಅತಿ ಉನ್ನತ ಮಟ್ಟದ ಟೆಲಿವಿಷನ್ ಸರಣಿಗಳನ್ನು ಮತ್ತು ಗೇಮ್ ಶೋಗಳನ್ನು ಆರಂಭಿಸುದಾಗಿ ಮೊನ್ನೆ ಪ್ರಕಟಿಸಿತ್ತು. ಸಣ್ಣ ಸಹಭಾಗಿಗಳೊಂದಿಗೆ ಫೇಸ್ ಬುಕ್ ಬೇಸಿಗೆ ಕೊನೆಗೆ ಇನ್ನು ಹೆಚ್ಚಿನ ಕಂತುಗಳನ್ನು ಸರಣಿಗಳಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಅದರ ಮಾಧ್ಯಮ ಪಾಲುದಾರಿಕೆಯ ಉಪಾಧ್ಯಕ್ಷ ನಿಕ್ ಗ್ರುಡಿನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇತರ ಸಾಮಾಜಿಕ ಮಾಧ್ಯಮಗಳ ಸ್ಪರ್ಧೆಯ ನಡುವೆ ಫೇಸ್ ಬುಕ್ ಜನರ ವಾಕ್ ಸ್ವಾತಂತ್ರ್ಯವನ್ನು ಕಾಪಾಡುವ ಜೊತೆಗೆ ಸಮಾಜದಲ್ಲಿ ದ್ವೇಷ ಮೂಡಿಸುವ ಭಾಷಣ, ಉಗ್ರಗಾಮಿ ವಿಷಯಗಳು, ಟ್ರೋಲ್ಸ್, ತಪ್ಪು ಮಾಹಿತಿಗಳನ್ನು ನಿಭಾಯಿಸಬೇಕಾಗಿದೆ.
ಆನ್ ಲೈನ್ ನಲ್ಲಿ ಭಯೋತ್ಪಾದಕ ವಿಷಯಗಳನ್ನು ಹರಡುವುದನ್ನು ತಡೆಯೊಡ್ಡುವ ಉದ್ದೇಶದಿಂದ ಫೇಸ್ ಬುಕ್, ಮೈಕ್ರೊಸಾಫ್ಟ್, ಟ್ವಿಟ್ಟರ್ ಮತ್ತು ಯೂಟ್ಯೂಬ್ ಭಯೋತ್ಪಾದನೆ ವಿರೋಧಿ ಪಾಲುದಾರಿಕೆಯನ್ನು ಆರಂಭಿಸುವುದಾಗಿ ಫೇಸ್ ಬುಕ್ ಮೊನ್ನೆ ಘೋಷಿಸಿತ್ತು.
ಮ್ಯಾಂಚೆಸ್ಟರ್ ಮತ್ತು ಲಂಡನ್ ನಲ್ಲಿ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಫೇಸ್ ಬುಕ್ ಈ ತಿಂಗಳು ಭಯೋತ್ಪಾದನಾ ಸರಣಿ ಕ್ರಮಗಳನ್ನು ಆರಂಭಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos