ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯ ಇಸ್ರೋ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಭಾರತ ರಷ್ಯಾ ನೆರವು ಕೋರಿದೆ ಎಂದು ತಿಳಿದುಬಂದಿದೆ.
ಅಂತರಿಕ್ಷ ವಿಜ್ಞಾನದಲ್ಲಿ ರಷ್ಯಾ ಈಗಾಗಗಲೇ ಭಾರತಕ್ಕಿಂತ ಸಾಕಷ್ಟು ಮುಂದಿದ್ದು, 2022 ಕ್ಕೂ ಮುನ್ನ ಬಾಹ್ಯಾಕಾಶಕ್ಕೆ ಗಗನಯಾತ್ರಿಯನ್ನು ಕಳುಹಿಸಬೇಕು ಎಂಬ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ನೆರವು ನೀಡುವಂತೆ ರಷ್ಯಾಗೆ ಭಾರತ ಮನವಿ ಮಾಡಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಾನವಸಹಿತ ಗಗನಯಾನ ಯೋಜನೆಗೆ ಸಕಲ ಸಿದ್ಧತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಗಗನ ಯಾತ್ರಿಗಳಿಗೆ ತರಬೇತಿ ನೀಡುವುದು, ಗಗನ ಯಾತ್ರಿಗಳನ್ನು ಹೊತ್ತೊಯ್ಯುವ ಕೋಶವನ್ನು ಅಭಿವೃದ್ಧಿ ಪಡಿಸುವುದು ಮತ್ತು ಗಗನಯಾತ್ರಿಗಳು ಅಂತರಿಕ್ಷದಲ್ಲಿ ಬದುಕುಳಿಯಲು ಅವಶ್ಯವಿರುವ ಸಾಧನಗಳನ್ನು ಅಭಿವೃದ್ಧಿಪಡಿಸಲು ನೆರವು ನೀಡುವಂತೆ ಭಾರತದಿಂದ ಕೋರಿಕೆ ಸಲ್ಲಿಸಲಾಗಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಭಾರತದ ಮನವಿಗೆ ರಷ್ಯಾ ಕೂಡ ಸಾಕಾರಾತ್ಮಕವಾಗಿ ಸ್ಪಂಧಿಸಿದ್ದು, ಯೋಜನೆಗೆ ನೆರವು ನೀಡಲು ತಾನು ಸಿದ್ಧ ಎಂದು ಘೋಷಣೆ ಮಾಡಿದೆ.
ಕಳೆದ ನಾಲ್ಕು ದಶಕಗಳಿಂದಲೂ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ರಷ್ಯಾ ನೆರವು ನೀಡುತ್ತಾ ಬಂದಿದೆ. ಚಂದ್ರಯಾನ ಮತ್ತು ಮಂಗಳಯಾನ ಯೋಜನೆಯಲ್ಲೂ ಇಸ್ರೋಗೆ ರಷ್ಯಾ ನೆರವು ನೀಡಿದೆ. ಜತೆಗೆ ಭಾರತದ ಆರ್ಯಭಟ ಮತ್ತು ಭಾಸ್ಕರ ಉಪಗ್ರಹಗಳನ್ನು ರಷ್ಯಾ ಉಡಾವಣೆ ಮಾಡಿತ್ತು. ಇದಲ್ಲದೆ 2004ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮಿಸಿದ್ದಾಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 25ರಂದು ದೆಹಲಿಯ ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಭಾರತ ಸ್ವತಂತ್ರಗೊಂಡು 75 ವರ್ಷ ಪೂರ್ಣಗೊಳ್ಳುವ ಮುನ್ನ ಅಂದರೆ 2022ರ ಒಳಗಾಗಿ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನನೌಕೆ ಕಳಿಸುವಂತಾಗಬೇಕು. ರಾಷ್ಟ್ರಧ್ವಜ ಹಿಡಿದು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಬೇಕು ಎಂಬುದು ನಮ್ಮ ಕನಸಾಗಿದೆ ಎಂದಿದ್ದರು. ಇದಕ್ಕೂ ಪೂರಕವಾಗಿ ಇಸ್ರೋ ಯೋಜನೆ ರೂಪಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos