ವಿಶೇಷ

ಕ್ಯಾಲೆಂಡರ್ ಬದಲಾಯಿತು ಕಾಲವೂ ಬದಲಾಗಲಿ

Lakshmi R

ಕ್ಯಾಲೆಂಡರ್ ಬದಲಿಸುವ ಸಮಯ. ಹಳೆ ಕ್ಯಾಲೆಂಡರನ್ನು ಕಿತ್ತು ಅಂಗಡಿ ಕೊಟ್ಟೆ ಕಟ್ಟಲೋ, ರದ್ದಿಗೋ ಕೊಡುವ ಮೊದಲು ಒಮ್ಮೆ ಮೈದಡವಿದೆ.

ಎಷ್ಟೊಂದು ಕೊಟ್ಟಿದೆ- ಅನುಭವಗಳ ಹೂರಣ ಬದಕಿನದ್ದಕ್ಕೂ ಪಾಠವಾಗಿ, ನಲಿವಾಗಿ, ನೆನಪಾಗಿ, ಬದುಕೇ ಆಗಿ ಜೊತೆಗೆ ಇರುವಷ್ಟು. ನನ್ನ ಹುಟ್ಟುಹಬ್ಬದ ಕೇರ್ ಮೇಲೆ ಒಂದು ಕ್ಯಾಂಡಲ್ ಹೆಚ್ಚು, ಅಜ್ಜನ ತಿಥಿ ಊಟದ ಹೆಸರಲ್ಲಿ ಒಂದು ಊಟ ಹೆಚ್ಚು. ಬದುಕಿನ ಬಂಡಿಗೆ ನೋವುನಲಿವುಗಳು ಸಮಾನಾಂತರ ಹಳಿಗಳು.

ಆದರೂ ದೇಶದ, ವಿಶ್ವದ ನಿಟ್ಟುಸಿರಿಗೆ ಕಿವಿಗೊಟ್ಟರೆ, ಹೊರಹೊಮ್ಮಿದ ಕಾರ್ಬನ್ ಡೈ ಆಕ್ಸೈಡ್‌ನಲ್ಲಿ ನೋವಿನ ಎಳೆಗಳೇ ಹೆಚ್ಚು. ಎಲ್ಲವೂ ತಮ್ಮ ನೋವಿಗೆ ಮುಲಾಮಾಗಿ ಬದಲಾಗುವ ಇಸವಿಯತ್ತ, ಹೊರಳುತ್ತಿರುವ ಕಾಲನತ್ತ ಕಣ್ಣಿನಲ್ಲಿ ಸಣ್ಣದೊಂದು ಆಶಾಕಿರಣ ಇಟ್ಟುಕೊಂಡು ನೋಡುತ್ತಿವೆ.

ಕಾಲಕ್ಕೆ ಮಾತ್ರ ಎಂಥದೇ ಗಾಯ ಮಾಯಿಸುವ ಶಕ್ತಿ ಇರುವುದು. ಹೀಗಾಗಿ ಕಾಲನಲ್ಲಿ ಮೊರೆ ಹೋಗಿವೆ- ತಪ್ಪುಗಳಿಗೆ, ನೋವುಗಳಿಗೆ, ಸಾವುಗಳಿಗೆ, ಅನಾಚಾರಗಳಿಗೆ 'ಗಳಿಗೆ' ಬದಲಾಗುವುದೇ ಪರಿಹಾರವಾಗಲಿ. ಕಾಲ ಎಲ್ಲಕ್ಕೂ ವಿದಾಯ ಹೇಳಲಿ.

ಆದರೆ ಈ ನಿಶ್ಕಲ್ಮಶ ಮೊರೆಗೆ ಕಾಲ ಕರಗುತ್ತದೆಯೇ? ನಂಬಿಕೆಯಿಲ್ಲ. ಏಕೆಂದರೆ ಕಾಲ ಕೆಟ್ಟು ಹೋಗಿದೆ. ಹಸಿವಿಗೆ ಪ್ರಾಣ ಕಸಿಯುವ ಕ್ರೂರ ಕಾಲಕ್ಕೆ ಇನ್ನೂ ಅನೇಕ ಘನಘೋರ ದುಶ್ಚಟಗಳಿವೆ. ಅವನ್ನೆಲ್ಲ ಬಿಡಿಸಲು ಒಮ್ಮೆ ಅದನ್ನು ಒಳ್ಳೆಯ ಡಿಅಡಿಕ್ಷನ್ ಸೆಂಟರ್‌ಗೆ ಸೇರಿಸಬೇಕಿದೆ.

ಒಮ್ಮೆ ಬರ ತಂದಿಟ್ಟು ಮಜ ನೋಡುವ, ಇನ್ನೊಮ್ಮೆ ಭೋರ್ಗರೆವ ಮಳೆಯೊಂದಿಗೆ ಜೀವ ಕಸಿವ ಕಾಲನಿಗೆ ವ್ಯಕ್ತಿತ್ವ ವಿಕಸನ ಪಾಠ ಮಾಡೋಣ. ಕಾಲನ ವ್ಯಕ್ತಿತ್ವ ಬದಲಿಸಲು ಇರುವ ಒಂದೇ ಸೂತ್ರ, ನಾವು ಬದಲಾಗುವುದು. ಹೊಸ ಪೀಳಿಗೆಗೆ ಸರಿದಾರಿ ತೋರುವುದು. ಪ್ರಕೃತಿಯ ನಿಯಮ ಪಾಲಿಸುತ್ತಲೇ ಮಾನವೀಯತೆಯ ವಿಶ್ವಪಥ ನಿರ್ಮಿಸೋಣ.

ಹಳೆದ ವರ್ಷದ ನೋವಿನ ಕಲೆಗಳನ್ನು ತೋರಿಸಿ ಕಾಲಕ್ಕೆ ಹೊಸದಾರಿ ಹಿಡಿಯಲು ಕಿವಿಹಿಂಡಿ ಹೇಳೋಣ. ಹಸುಗೂಸುಗಳಿಂದ ಹಿಡಿದು ಮುದುಕಿಯವರೆಗೆ ವಿಕೃತಮನಸ್ಸುಗಳ ತೃಷೆಗೆ ಬಲಿಯಾದ ಸಾವಿರಾರು ಮುಗ್ಧ ಜೀವಗಳ ಶಾಪ 2014ರ 'ಕಾಮ'ರಾಜ್ಯಕ್ಕೆ ತಟ್ಟಲಿ.

2015ರಲ್ಲಾದರೂ ಅತ್ಯಾಚಾರಗಳು ಫುಲ್‌ಸ್ಟಾಪ್ ಕಾಣಲಿ. ಉಗ್ರರ ಕೃತ್ಯಕ್ಕೆ ಮುಗ್ಧ ಕಂದಮ್ಮಗಳು ಸಾಲಿನಲ್ಲಿ ಬಲಿಯಾಗುವಾಗ, ಇಸಿಸಿ ಉಗ್ರರ ದಾಹಕ್ಕೆ ಸಾವಿರಾರು ಜೀವಗಳು ಆರ್ತನಾದ ಹೊಮ್ಮಿಸಿ ದೇಹ ಬಿಟ್ಟು ಹಾರುವಾಗ, ನೂರಾರು ಜನರ ತಲೆ ಕಡಿಯುವಾಗ, ಸೆಕ್ಸ್ ಜಿಹಾದ್ ಹೆಸರಿನಲ್ಲಿ ಹೆಣ್ಣುಮಕ್ಕಳ ಬದುಕನ್ನು ಟೇಕನ್ ಫಾರ್ ಗ್ರಾಂಟೆಡ್ ಎಂದುಕೊಳ್ಳುವಾಗ, ಬಾಂಬ್‌ಗಳೊಡನೆ ತೊಗಲು ಮಾಂಸಗಳು ಸಿಡಿದು, ರಕ್ತರಾಜ್ಯ ನಿರ್ಮಾಣವಾಗುವಾಗ ವಿರಕ್ತನಂತೆ ಕುಳಿತು ಕಠಿಣಹೃದಯಿ ಕಾಲ ಬದಲಾಗಲಿ.

ಕಾಲನ ಹೃದಯ ಮಾನವೀಯತೆಗೆ ಕರಗಲಿ. ಭಯೋತ್ಪಾದನೆಯ ಭೂತ ದಹನ ನಡೆಯಲಿ. ಕ್ಯಾನ್ಸರ್, ಏಡ್ಸ್, ಟ್ಯೂಮರ್ ಇತ್ಯಾದಿ ಇರುವವೇ ಸಾಲದೆಂಬಂತೆ ಹೊಸದಾಗಿ ಹುಟ್ಟಿಕೊಳ್ಳುವ ಎಬೋಲಾದಂತ ಕಾಯಿಲೆಗಲಿಗೆ 2015 ಜನವರಿ ಒಂದರಿಂದಲೇ ತಡೆಗೋಡೆ ನಿರ್ಮಾಣವಾಗಲಿ. ಹಳೆ ಕಾಯಿಲೆಗಳ ಮಾರಣಹೋಮ ನಡೆಸಲಿ.

ಕಾಲಕ್ಕಿದೆಯಾ ಇದನ್ನೆಲ್ಲ ಮಾಡುವ ಗುಂಡಿಗೆ? ಅಥವಾ ನಮಗಿದೆಯಾ? ಹದಿನೈದರ ಹದಿಹರೆಯದ ಉನ್ಮಾದ ಮರಳಲಿ. ಹಳೆಯದರ ಕೊಳೆ ತೊಳೆವ ಆವೇಶ ಕೂಡ ಮರಳಲಿ. ಕೆಡಕುಗಳು ಶಾಶ್ವತ ವಿದಾಯ ಹೇಳಲಿ.

- ರೇಶ್ಮಾರಾವ್ ಸೊನ್ಲೆ

SCROLL FOR NEXT