ಅಮೀರ್ ಖಾನ್ ಜತೆ ನಿಹಾಲ್ ( ಕೃಪೆ: ಫೇಸ್ ಬುಕ್ )
ಕಲಿಕೆಯಲ್ಲಿ ಗಮನ ಹರಿಸಲಾಗದೆ ವೈಫಲ್ಯದಿಂದ ಬಳಲುತ್ತಿದ್ದ ಪೋರ ಇಶಾನ್. ಇದನ್ನು ಅರ್ಥ ಮಾಡಿಕೊಳ್ಳಲಾಗದ ಹೆತ್ತವರು ಮತ್ತು ಶಿಕ್ಷಕರು ಆತನನ್ನು ಬೈದರು, ಶಿಕ್ಷೆಗೊಳಪಡಿಸಿದರು. ಅಂಥಾ ಹೊತ್ತಲ್ಲಿ ದೇವಧೂತನಂತೆ ಆ ಶಿಕ್ಷಕನ ಪ್ರವೇಶ. ಶಾಲೆಯ ಕಲಾ ಶಿಕ್ಷಕನಾಗಿದ್ದ ಆತ ಇಶಾನ್‌ನ ಸಮಸ್ಯೆಯನ್ನು ಮನಗಂಡು ಅವನಿಗೆ ಪ್ರೋತ್ಸಾಹ ನೀಡಿದರು. ಹಾಗೆ ವರ್ಣಮಯವಾದ ಜಗತ್ತನ್ನು ಅವನಿಗೆ ತೋರಿಸಿ, ಇಂಥಾ ಮಕ್ಕಳನ್ನು ದೂರುವ ಮುನ್ನ ಅವರ ಸಮಸ್ಯೆ ಅರ್ಥ ಮಾಡಿಕೊಳ್ಳಿ ಎಂಬ ಸಂದೇಶವನ್ನು ನೀಡಿದ ಸಿನಿಮಾ ತಾರೇ ಜಮೀನ್ ಪರ್. ಎಲ್ಲರನ್ನು ಕಣ್ಣೀರುಗೆರೆಯುವಂತೆ ಮಾಡಿ ಹಿಟ್ ಆದ ಬಾಲಿವುಡ್ ಸಿನಿಮಾ ಅದು.
ಆದರೆ ನಿಹಾಲ್ ಬಿಟ್ಲಾ ಎಂಬ ಈ ಪೋರನಿಗೆ ತಾರೇ ಜಮೀನ್ ಪರ್ ಎಂಬುದು ಕೇವಲ ಸಿನಿಮಾ ಮಾತ್ರ ಅಲ್ಲ, ಅಮೀರ್ ಖಾನ್ ಕೇವಲ ನಟನಲ್ಲ. ಅನಾರೋಗ್ಯದಿಂದ ನಿಶ್ಶಕ್ತಿಗೊಂಡ ದೇಹದಲ್ಲಿ ಹೊಸ ಚೈತನ್ಯವನ್ನು ನೀಡಲು ಸಹಾಯ ಮಾಡಿದ ಶಕ್ತಿಯಾಗಿತ್ತು ಆ ಸಿನಿಮಾ.
ನಿಹಾಲ್‌ನ ವಯಸ್ಸು 14. ಆದರೆ ತ್ವಚೆಯಲ್ಲಿ ನೆರಿಗೆಗಳು ಮತ್ತು ಒಣಗಿದ ದೇಹದಿಂದಾಗಿ ಆತ ಅಕಾಲ ವೃದ್ದಾಪ್ಯಕ್ಕೆ ಈಡಾಗಿದ್ದಾನೆ. ಈತನಿಗೆ ಪ್ರೊಗೇರಿಯಾ ಎಂಬ ಅಪೂರ್ವ ಕಾಯಿಲೆಯಿದೆ.
ಕೆಲವು ದಿನಗಳ ಹಿಂದೆಯಷ್ಟೇ ಹ್ಯೂಮನ್ಸ್ ಆಫ್ ಬಾಂಬೆ ಎಂಬ ಫೇಸ್‌ಬುಕ್ ಸಂಘಟನೆ ನಿಹಾಲ್‌ನ ಆಸೆಯನ್ನು ಫೇಸ್‌ಬುಕ್ ಪುಟದಲ್ಲಿ ಪ್ರಕಟ ಮಾಡಿತ್ತು. ತಾರೇ ಜಮೀನ್ ಪರ್ ಎಂಬ ಸಿನಿಮಾ ತನ್ನ ಜೀವನಕ್ಕೆ ಪ್ರಚೋದನೆ ನೀಡಿದೆ. ಅಮೀರ್ ಖಾನ್ ರನ್ನು ಮುಖತಃ ಭೇಟಿಯಾಗಿ ಥ್ಯಾಂಕ್ಸ್ ಹೇಳಬೇಕೆಂದಿದ್ದೆ. ಆದರೆ ಅದು ಇಲ್ಲಿಯವರೆಗೆ ಸಾಧ್ಯವಾಗಲಿಲ್ಲ ಎಂದು ನಿಹಾಲ್ ಹೇಳಿರುವುದು ಫೇಸ್‌ಬುಕ್‌ನಲ್ಲಿ ಪ್ರಕಟವಾಗಿತ್ತು.
ಇತ್ತ ಫೇಸ್‌ಬುಕ್ ಪೋಸ್ಟ್ ನೋಡಿದ ಅಮೀರ್ ಖಾನ್ ನಿಹಾಲ್‌ನ್ನು ಅರಸಿ ಆತನ ಮನೆಗೆ ಬಂದುಬಿಟ್ಟಿದ್ದರು. ನಿಹಾಲ್ ಹೀಗೆಲ್ಲಾ ಅಗುತ್ತದೆ ಎಂದು ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ನಿಹಾಲ್ ಜತೆ ಒಂದಷ್ಟು ಕಾಲ ಕಳೆದ ಅಮೀರ್ ಖಾನ್ ಒಂದಷ್ಟು ಸಿಡಿ ಮತ್ತು ಆಟಿಕೆಗಳನ್ನು ಉಡುಗೊರೆಯಾಗಿ ಕೊಟ್ಟರು. ಸದಾ ಖುಷಿಯಾಗಿರಿ, ಸದಾ ನಗುತ್ತಾ ಇರಿ ಎಂದು ಬರೆದು ಅಮೀರ್ ಉಡುಗೊರೆ ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ನಿಹಾಲ್ ತಾನು ರಚಿಸಿದ ಗಣಪತಿಯ ಚಿತ್ರವೊಂದನ್ನು ಅಮೀರ್‌ಗೆ ಉಡುಗೊರೆಯಾಗಿ ನೀಡಿದ್ದಾನೆ.
ನನ್ನ ಕನಸನ್ನು ನನಸು ಮಾಡಿದ ಅಮೀರ್ ಅಂಕಲ್‌ಗೆ ಥ್ಯಾಂಕ್ಸ್. ನನ್ನ ಜೀವನದ ಕಷ್ಟಗಳನ್ನು ಎದುರಿಸಲು ಕಲಿಸಿದ್ದು ನಿಮ್ಮ ಸಿನಿಮಾ. ಒಂದು ದಿನ ನಮ್ಮ ನಿಮ್ಮ ಭೇಟಿಯಾಗುತ್ತದೆ ಎಂದು ನಾನು ನಂಬಿದ್ದೆ. ಈಗ ನಾನು ಆಶಾವಾದಿಯಾಗಿದ್ದೇನೆ. ಭಾರತದಲ್ಲಿ ಇದೇ ರೋಗ ಬಾಧಿಸಿರುವ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ಪ್ರೊಗೇರಿಯಾ ರಿಸರ್ಚ್ ಫೌಂಡೇಶನ್ ಗೆ ನೀವು ಸಹಾಯ ಮಾಡುತ್ತೀರಿ ಎಂದು ನಾನು ಭಾವಿಸಿದ್ದೀನಿ. ನನ್ನ ಮತ್ತು ನನ್ನ ಕುಟುಂಬದೊಂದಿಗೆ ಕೆಲವು ಕಾಲ ಕಳೆದಿರುವುದಕ್ಕೆ ಮತ್ತೊಮ್ಮೆ ಧನ್ಯವಾದ ಹೇಳುತ್ತಿದ್ದೇನೆ. ನಾನು ನಿಮಗೆ ಉಡುಗೊರೆ ನೀಡಿದ ಚಿತ್ರ ನಿಮ್ಮಲ್ಲಿ ಸದಾ ಇರುತ್ತದೆ ಎಂಬ ನಂಬಿಕೆ ನನ್ನದು. ಈ ಅವಕಾಶ ಕಲ್ಪಿಸಿದ ಹ್ಯೂಮನ್ಸ್ ಆಫ್ ಬಾಂಬೆಗೆ ನನ್ನ ಅಂತರಾಳದ ನಮನಗಳು ಎಂದು ನಿಹಾಲ್ ಥ್ಯಾಂಕ್ಸ್ ಹೇಳಿದ್ದಾರೆ.