ಸಿಯಾಚಿನ್, ಕಾರ್ಗಿಲ್ ಮೊದಲಾದ ಹಿಮಾವೃತ ಪ್ರದೇಶಗಳಲ್ಲಿ ಕರ್ತವ್ಯ ನಿರತರಾಗಿರುವ ಸೈನಿಕರನ್ನು ದುರಂತದಿಂದ ರಕ್ಷಿಸುವುದಕ್ಕಾಗಿ ಭಾರತೀಯ ಸೇನೆಯ ಇಂಜಿನಿಯರ್ ಜೆಟ್ ಪ್ಯಾಕ್‌ನ್ನು ತಯಾರಿಸಿದ್ದಾರೆ. 9 ವರುಷಗಳಿಂದ ಭಾರತೀಯ ಸೇನೆಯಲ್ಲಿ ಇಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕ್ಯಾನಿಕಲ್ ಎಂಜಿನಿಯರ್ಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೇಜರ್ ಲಕ್ಷ್ಯಜಿತ್ ಸಿಂಗ್ ಚೌಹಾಣ್ ಎಂಬವರು ಈ ಜೆಟ್‌ಪ್ಯಾಕ್ ನಿರ್ಮಾಣದ ಹಿಂದಿರುವ ಶಕ್ತಿ.
ಈ ಜೆಟ್ ಪ್ಯಾಕ್‌ಗಳನ್ನು ಧರಿಸುವ ಮೂಲಕ ಸೈನಿಕರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಕ್ಕಿಯಂತೆ ಹಾರಬಹುದು. ತಮಗೆ ಬೇಕಾದ ಜಾಗದಲ್ಲಿ ಇಳಿಯಬಹುದು. ಇದರ ಸಂಪೂರ್ಣ ನಿಯಂತ್ರಣ ಸೈನಿಕರ ಕೈಯಲ್ಲೇ ಇರುತ್ತದೆ. ಹಿಮ ಪರ್ವತವನ್ನು ಹತ್ತುವ ಕಷ್ಟ ಮತ್ತು ಹಿಮಪಾತ ದುರಂತಗಳಿಂದ ರಕ್ಷಿಸಲು ಜೆಟ್ ಪ್ಯಾಕ್ ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಹಿಮ ಆವರಿಸಿದ ಗಡಿ ಪ್ರದೇಶಗಳಲ್ಲಿ ಮಾತ್ರವಲ್ಲ ಸಂಘರ್ಷ ಸ್ಥಳಗಳಲ್ಲಿ ಪರಿಶೋಧನೆ ನಡೆಸಲು, ಇತರ ರಕ್ಷಣಾ ಕಾರ್ಯಗಳನ್ನು ನಡೆಸುವುದಕ್ಕೂ ಈ ಜೆಟ್ ಪ್ಯಾಕ್ ಸಹಾಯವಾಗಲಿದೆ ಅಂತಾರೆ ಐಐಟಿ ಮದ್ರಾಸ್‌ನಲ್ಲಿ ಎಂಟೆಕ್ ಪದವಿಗಳಿಸಿದ ಇಂಜಿನಿಯರ್ ಲಕ್ಷ್ಯಜಿತ್ ಸಿಂಗ್ ಚೌಹಾಣ್.
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಇನ್‌ಪ್ರಿಂಟ್ ಇಂಡಿಯಾ ಯೋಜನೆಯ ಅಂಗವಾಗಿ ಜೆಟ್ ಪ್ಯಾಕ್ ಯೋಜನೆಯನ್ನು ರೂಪಿಸುವುದಾಗಿ ಈ ಹಿಂದೆ ಸೂಚನೆ ಲಭಿಸಿತ್ತು.
ಜೆಟ್ ಪ್ಯಾಕ್‌ನ ಸಹಾಯದಿಂದ 0.7 ಕಿಮಿಯಿಂದ ಒಂದು ಕಿಮೀ ದೂರದ ವರೆಗೆ ಹಾರಲು ಸೈನಿಕರಿಗೆ ಸಾಧ್ಯವಾಗಲಿದೆ. ಯೋಧರು ಜೆಟ್ ಪ್ಯಾಕ್ ಬಳಸುವಂತಾದರೆ ಸೇನೆಯ ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಐಐಟಿ ಮದ್ರಾಸ್‌ನ ನೇತೃತ್ವದಲ್ಲಿ ನಿರ್ಮಿಸಿದ ಜೆಟ್ ಪ್ಯಾಕ್ ಅಮೆರಿಕ ನಿರ್ಮಿತ ಜೆಟ್ ಪ್ಯಾಕ್‌ಗಳಿಗಿಂತಲೂ ಸಾಮರ್ಥ್ಯವುಳ್ಳವುಗಳಾಗಿವೆ ಎಂದು ಹೇಳಲಾಗುತ್ತಿದೆ.
50 ಕಿ.ಗ್ರಾಂ ತೂಕವಿರುವ ಜೆಟ್ ಪ್ಯಾಕ್‌ಗಳು 55 -60 ಕಿಲೋಗ್ರಾಂ ತೂಕವಿರುವ ಸೈನಿಕನನ್ನು ಮತ್ತು 20 ಕಿ. ಗ್ರಾಂ ತೂಕವಿರುವ ಇತರ ವಸ್ತುಗಳನ್ನು ಎತ್ತಿಕೊಂಡು ಹಾರಲು ಸಾಮರ್ಥ್ಯವುಳ್ಳದ್ದಾಗಿದೆ. ಭಾರತದಲ್ಲೇ ಜೆಟ್ ಪ್ಯಾಕ್ ನಿರ್ಮಿಸುವುದಾದರೆ ರು. 1.2 ಕೋಟಿ ನಿರ್ಮಾಣ ವೆಚ್ಚ ಬೇಕಾಗಿಲ್ಲ, ಇಲ್ಲಿ ರು. 30 ಲಕ್ಷ ಇದ್ದರೆ ಸಾಕು. ಆದಾಗ್ಯೂ ಇವುಗಳ ನಿರ್ಮಾಣ ಮಾಡಲು ಅನುಮತಿ ನೀಡಬೇಕೆಂದು ಕೋರಿ ಸಿಕಂದರಾಬಾದ್ ಇಎಂಇ, ಮಿಲಿಟರಿ ಕಾಲೇಜ್ ಆರ್ಮಿ ಟೆಕ್ನಾಲಜಿ ಮಂಡಳಿಗೆ ಅರ್ಜಿ ಸಲ್ಲಿಸಿದ್ದು, ಅನುಮತಿಗಾಗಿ ಕಾಯುತ್ತಿದೆ.