ವಿಶೇಷ

ಅಂತಾರಾಷ್ಟ್ರೀಯ ಮಹಿಳಾ ದಿನ: ಅಸ್ತಿತ್ವಕ್ಕೆ ಬಂದ ಇತಿಹಾಸ ಮತ್ತು ಪ್ರಾಮುಖ್ಯತೆ

Srinivas Rao BV
ಮಾ.8, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.  ಸ್ತ್ರೀತ್ವವನ್ನು, ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಾಧನೆಗಳನ್ನು, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ. 
1977 ರಲ್ಲಿ ವಿಶ್ವಸಂಸ್ಥೆಯಿಂದ ಅಳವಡಿಸಿಕೊಳ್ಳಲಾದ ಈ ದಿನಾಚರಣೆಯ ಇತಿಹಾಸ ಪುಟಗಳು ನಮ್ಮನ್ನು 20 ನೇ ಶತಮಾನದಲ್ಲಿ ಉತ್ತರ ಅಮೆರಿಕ ಹಾಗೂ ಯುರೋಪ್ ಗಳಲ್ಲಿ ಪ್ರಾರಂಭವಾದ ಕಾರ್ಮಿಕ ಚಳುವಳಿಗೆ ಕರೆದೊಯ್ಯುತ್ತವೆ. ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಅಧಿಕೃತವಾಗಿ ಅಳವಡಿಸಿಕೊಳ್ಳುವುದಕ್ಕೂ ಮುನ್ನ ಮಹಿಳಾ ದಿನಾಚರಣೆಯನ್ನು ಸಮಾಜವಾದಿ ಹಾಗೂ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತಿತ್ತು. ಆಗೆಲ್ಲಾ ಇದನ್ನು ಗುರುತಿಸುತ್ತಿದ್ದದ್ದು ಅಂತಾರಾಷ್ಟ್ರೀಯ ಕಾರ್ಯನಿರತ ಮಹಿಳಾ ದಿನಾಚರಣೆ ಎಂದು. 1909 ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಸಮಾಜವಾದಿ-ರಾಜಕೀಯ ಕಾರ್ಯಕ್ರಮ ಮಹಿಳಾ ದಿನಾಚರಣೆ ಇತಿಹಾಸದಲ್ಲಿ ಮಹತ್ವದ ಮಜಲು. ಆ ದಿನಗಳಿಂದಲೂ  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜಾಗತಿಕವಾಗಿ ಹೊಸ ಆಯಾಮ ಪಡೆದುಕೊಂಡು ಅಭಿವೃದ್ಧಿಶೀಲ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಆಚರಣೆ ಮಾಡಲಾಗುತ್ತಿದೆ. 
ಸುಸ್ಥಿರ ಅಭಿವೃದ್ಧಿ, ಶಾಂತಿ, ಸುರಕ್ಷತೆಯನ್ನು ಸಾಧಿಸಲು ಮಹಿಳೆಯರ ಭಾಗಿತ್ವವನ್ನು ಪುರುಷ ಸಮಾನವಾಗಿ ಉತ್ತೇಜಿಸಲು ಹಲವು ವರ್ಷಗಳಿಂದ ವಿಶ್ವಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಮಹಿಳಾ ದಿನಾಚರಣೆಯನ್ನು ಉತ್ತೇಸುತ್ತಿವೆ. ಅಷ್ಟೇ ಅಲ್ಲದೇ ಲಿಂಗ ಸಮಾನತೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವುದಕ್ಕೂ ಸಹ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ. 
ಪ್ರತೀ ವರ್ಷವೂ ಹೊಸ ವಿಷಯವನ್ನಿಟ್ಟುಕೊಂಡು ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷ "ಥಿಂಕ್ ಈಕ್ವಲ್, ಬಿಲ್ಡ್ ಸ್ಮಾರ್ಟ್, ಇನೋವೇಟ್ ಫಾರ್ ಚೇಂಜ್" ಮಹಿಳಾ ದಿನಾಚರಣೆಯ ಥೀಮ್ ಆಗಿದೆ. 
SCROLL FOR NEXT