ವಿಶೇಷ

2021ಕ್ಕೆ ಸ್ವಾಗತ: ನಿನ್ನೆಯಿಂದ ಕಲಿತು, ಈ ದಿನ ಬಾಳಿ, ನಾಳೆಯ ಬಗ್ಗೆ ವಿಶ್ವಾಸದಿಂದ ಹೆಜ್ಜೆ ಇಡೋಣ

Sumana Upadhyaya

12 ವರ್ಷದ ನನ್ನ ಮಗಳು ಮೊನ್ನೆ ಕೇಳಿದಳು, ಅಮ್ಮ ಎಲ್ಲರೂ 2021 ಬರಬೇಕು, ಹೊಸ ವರ್ಷಕ್ಕೆ ಕಾಯುತ್ತಿದ್ದೇನೆ, 2020 ಸಾಕಾಗಿ ಹೋಯ್ತು, ಒಮ್ಮೆ 2020ನೇ ಇಸವಿ ಮುಗಿದರೆ ಸಾಕು ಎನ್ನುತ್ತಿದ್ದಾರೆ ಯಾಕಮ್ಮ ನನಗೆ ಅರ್ಥವಾಗುತ್ತಿಲ್ಲ, 2021 ಬಂದ ತಕ್ಷಣ ಏನು ಕೊರೋನಾ ಹೋಗಿಬಿಡುತ್ತಾ, ಕಷ್ಟಗಳೆಲ್ಲಾ ದೂರವಾಗುತ್ತಾ ಅಂತ.

ಸದ್ಯದ ಪರಿಸ್ಥಿತಿಯಲ್ಲಿ ಈ ಮನೋಭಾವ ಕಾಣುವುದು ಸಹಜ, ಸದ್ಯ ಇಸವಿಯೊಂದು ಬದಲಾಗಿದೆ, ಕೊರೋನಾ ಸೋಂಕಿನ ತೀವ್ರತೆ ತಗ್ಗಿದೆ, ಹಿಂದಿನ ಚಟುವಟಿಕೆಗಳಿಗೆ, ಸಹಜತೆಗೆ ಜನಜೀವನ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಆದರೆ ಈ ಸಂದರ್ಭದಲ್ಲಿ ಮೈಮರೆತರಂತೂ ಅಪಾಯ ಕಟ್ಟಿಟ್ಟ ಬುತ್ತಿ. ಕೊರೋನಾ ಇಲ್ಲ, ಏನೂ ಇಲ್ಲ ಎಂದು ಬೇಕಾಬಿಟ್ಟಿ ವರ್ತಿಸತೊಡಗಿದರೆ ನಮ್ಮ ಜೀವ, ಜೀವನಕ್ಕೆ ಅಪಾಯ.

ಇಡೀ ಜಗತ್ತಿಗೆ ಕೋವಿಡ್-19 ಸಾಂಕ್ರಾಮಿಕ ಹರಡಿ 2020ನೇ ಸಾಲಿನಲ್ಲಿ ಬಹುದೊಡ್ಡ ಆರೋಗ್ಯ ಸವಾಲು ಜನತೆಗೆ ಎದುರಾಗಿತ್ತು. ಇದೀಗ 2021ನೇ ವರ್ಷ ಕಾಲಿಟ್ಟಿದೆ. 2020ನೇ ಸಾಲಿನ ಕಹಿ ಘಟನೆಗಳನ್ನು, ಅನುಭವಗಳನ್ನು ಮರೆತು ಕನಸು, ಆಕಾಂಕ್ಷೆಗಳನ್ನು ಹೊತ್ತು ಮುಂದಡಿಯಿಡುವ ಸಮಯ ಇದಾಗಿದೆ.

ಹಾಗಾದರೆ 2020 ಬರೀ ಕಹಿ ಘಟನೆಗಳನ್ನು ಮಾತ್ರ ನಮಗೆ ಕೊಟ್ಟು ಹೋಗಿದೆಯೇ ಎಂದು ಕೇಳಿದರೆ ಖಂಡಿತಾ ಇಲ್ಲ, ಹಲವು ಅನುಭವಗಳ ಮೂಟೆ ಹೊತ್ತು, ಆ ಅನುಭವಗಳಿಂದ ಭವಿಷ್ಯದಲ್ಲಿ ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಂಡು ಜೀವನ ನಡೆಸಲು ಬೇಕಾಗುವ ಅನೇಕ ಪಾಠಗಳನ್ನು ಕಲಿಸಿದೆ.

ಅನಿರೀಕ್ಷಿತವಾದದ್ದು ನಮ್ಮ ಜೀವನದಲ್ಲಿ ಹೇಗೆ ಬರುತ್ತದೆ, ಜೀವನದಲ್ಲಿ ಯಾವ ರೀತಿ ತಿರುವುಗಳು ಬರುತ್ತವೆ, ಕಷ್ಟದ ಸಮಯಗಳಲ್ಲಿ ಯಾವ ರೀತಿ ಪರಿಸ್ಥಿತಿ, ಸಮಯ-ಸಂದರ್ಭಗಳಿಗೆ ಹೊಂದಿಕೊಳ್ಳಬೇಕು, ಪ್ರತಿನಿತ್ಯದ ಬದುಕು ಎಷ್ಟು ಮುಖ್ಯವಾಗಿರುತ್ತದೆ, ಮನುಷ್ಯ ಸಮಾಜ ಜೀವಿ ಹೇಗೆ, ಈ ಸಮಾಜದಲ್ಲಿ ಒಬ್ಬರಿಗೊಬ್ಬರ ಅನಿವಾರ್ಯತೆ ಎಷ್ಟರ ಮಟ್ಟಿಗೆ ಇದೆ, ಕೃಷಿ, ಹಳ್ಳಿ ಬದುಕು ಎಷ್ಟು ಸುಂದರ, ಆಧುನಿಕತೆ ನಮ್ಮ ಜೀವನಕ್ಕೆ ಎಷ್ಟು ಬೇಕು, ಹೇಗೆ ಅನಿವಾರ್ಯತೆ ಇದೆ, ಕುಟುಂಬದ ಮೌಲ್ಯ, ಜೀವನದಲ್ಲಿ ಹಣ ಎಷ್ಟು ಮುಖ್ಯ ಹೀಗೆ ಪ್ರತಿಯೊಂದು ವಿಚಾರಗಳು ಕೂಡ ಮನುಷ್ಯನಿಗೆ ಕಳೆದ ಏಳೆಂಟು ತಿಂಗಳು ಅರ್ಥವಾಗಿರಬೇಕು. 

ಹಿಂದಿನ ಪಾಠ, ಅನುಭವಗಳನ್ನು ಕಲಿತು ಮುಂದೆ ಇಡುವ ಹೆಜ್ಜೆಗಳು ಎಚ್ಚರಿಕೆಯಿಂದರಬೇಕು, ಹಿಂದಿನ ಅನುಭವ ಇರುವುದರಿಂದ ಮುಂದೆ ಸವಾಲುಗಳನ್ನು ಎದುರಿಸುವುದು ಸುಲಭ ಕೂಡ ಹಲವರಿಗೆ ಆಗಬಲ್ಲದು.2021ನೇ ಇಸವಿಯಲ್ಲಿ ದೇಶದ ನಾಗರಿಕರ ಮುಂದಿರುವ ಬಹುದೊಡ್ಡ ಭರವಸೆ ಕೋವಿಡ್-19 ಲಸಿಕೆ ಮಾರುಕಟ್ಟೆಗೆ ಬರಬಹುದು ಎಂಬುದು. ದೇಶದ ಆರೋಗ್ಯ ವಲಯದ ಕಾರ್ಯಕರ್ತರು, ತಜ್ಞರು, ವೈದ್ಯರು, ಸರ್ಕಾರ ಎಲ್ಲರೂ ಸೇರಿ ಸಾಕಷ್ಟು ಶ್ರಮಿಸುತ್ತಿದ್ದು ಶೀಘ್ರವೇ ಲಸಿಕೆ ಹೊರತರುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಕೂಡ ನಿನ್ನೆಯ ಭಾಷಣದಲ್ಲಿ ಆದಷ್ಟು ಶೀಘ್ರವೇ ಭಾರತ ಲಸಿಕೆ ಹೊರಡಿಸಲಿದೆ ಎಂಬ ಭರವಸೆ ಹುಟ್ಟಿಸುವ ಮಾತುಗಳನ್ನಾಡಿದ್ದಾರೆ.

ಈ ವರ್ಷ ಆರೋಗ್ಯ ಬಜೆಟ್ ಮಂಡಿಸುವುದಾಗಿ ಕರ್ನಾಟಕದ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಇತ್ತೀಚೆಗೆ ಹೇಳಿದ್ದಾರೆ. ಅದು ಕ್ರಾಂತಿಕಾರಕವಾಗಿರಲಿದೆ ಎಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಬೇಕು, ಪ್ರತಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಅತ್ಯಾಧುನಿಕ ವೈದ್ಯಕೀಯ ಸೇವೆಗಳು, ನುರಿತ ವೈದ್ಯರು, ದಾದಿಯರನ್ನು ಒದಗಿಸುವ ಭರವಸೆಯನ್ನು ಸರ್ಕಾರ ನೀಡುತ್ತಿದೆ. ಈ ಕೊರೋನಾದಂತಹ ಸಾಂಕ್ರಾಮಿಕ ಸನ್ನಿವೇಶಗಳು ಎದುರಾದರೆ ಇವು ಜನತೆಗೆ ಅನಿವಾರ್ಯವಾಗಿರುತ್ತದೆ.

ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಹೈಟೆಕ್ ಸೌಲಭ್ಯಗಳೊಂದಿಗೆ ನವೀಕರಿಸಲಾಗುವುದು ಮತ್ತು 24/7 ಕಾರ್ಯನಿರ್ವಹಿಸಲಿದೆ. ರಾಜ್ಯ ಆರೋಗ್ಯ ನೋಂದಾವಣೆಯನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇದು ಸಾಕ್ಷ್ಯ ಆಧಾರಿತ ನೀತಿ ತಯಾರಿಕೆಗೆ ಸಹಾಯ ಮಾಡುತ್ತದೆ. ಹೊಸ ಆರೋಗ್ಯ ಸೌಧವು 53 ಕಚೇರಿಗಳನ್ನು ಒಂದೇ ಸೂರಿನಡಿ ತರುವ ಮೂಲಕ ಆರೋಗ್ಯ ಇಲಾಖೆಯಲ್ಲಿ ಉತ್ತಮ ಏಕೀಕರಣ ಮತ್ತು ಸಮನ್ವಯಕ್ಕೆ ಅನುಕೂಲವಾಗಲಿದೆ ಎಂದು ಆರೋಗ್ಯ ಸಚಿವರು ಇತ್ತೀಚೆಗೆ ಹೇಳಿದ್ದರು.

ಬೆಂಗಳೂರಿನ ಜಯದೇವ, ಮೈಸೂರು ಮತ್ತು ಕಲಬುರಗಿಯಂತಹ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸುವುದು ಬಹಳ ಮುಖ್ಯವಾದ ಕ್ರಮವಾಗಿದೆ. ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಸಂಖ್ಯೆಯನ್ನು 700 ರಿಂದ 1,000 ಕ್ಕೆ ಹೆಚ್ಚಿಸುವ ಅವಶ್ಯಕತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ಹೃದಯ ಸಂಬಂಧಿ ರೋಗಗಳು ವಿಶೇಷವಾಗಿ ಯುವ ಜನಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಟೆಲಿಮೆಡಿಸಿನ್ ಅನೇಕ ರೋಗಗಳಿಗೆ ಸಮಯೋಚಿತ ಸಹಾಯವನ್ನು ನೀಡುತ್ತದೆ, ಮರಣ ಪ್ರಮಾಣವನ್ನು ಸಹ ಕಡಿಮೆ ಮಾಡುತ್ತದೆ ಎಂದು ಹೃದ್ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ -19 ಸಂಬಂಧಿತ ವಿಷಯಗಳ ಬಗ್ಗೆ ಮಾತ್ರವಲ್ಲದೆ ಬಯೋಫಾರ್ಮಾ ಮತ್ತು ಬಯೋಟೆಕ್ ಆವಿಷ್ಕಾರಗಳ ಬಗ್ಗೆಯೂ ನಮ್ಮ ರಾಜ್ಯ ಮತ್ತು ದೇಶದಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶವಿದೆ ಎಂದು 2020 ವರ್ಷವು ತೋರಿಸಿದೆ. ಆರೋಗ್ಯವೇ ಭಾಗ್ಯ, ಮಾನಸಿಕ ಮತ್ತು ದೈಹಿಕ ಆರೋಗ್ಯ ಮನುಷ್ಯ ಜೀವನದಲ್ಲಿ ಅತಿ ಮುಖ್ಯ, ಆರೋಗ್ಯ, ಸಂತೋಷ, ನೆಮ್ಮದಿ ಜೀವನದಲ್ಲಿ ಇದ್ದರೆ ಮನುಷ್ಯ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟ 2020ರ ಅನುಭವದ ಬುತ್ತಿಯೊಂದಿಗೆ 2021ನೇ ಇಸವಿಯನ್ನು ಕಳೆಯೋಣ.

SCROLL FOR NEXT