ವಿಶೇಷ

ನಿರುಪಯುಕ್ತರೆಂದು ಸಮಾಜ ಕಡೆಗಣಿಸಿದ ವಯೋವೃದ್ಧರಿಗೆ ಆರ್ಥಿಕ ಸ್ವಾವಲಂಬನೆ ದಾರಿ ತೋರುವ ಸ್ವನಿರ್ಭರ್ ಸ್ಟಾರ್ಟಪ್

Harshavardhan M

ರಾಂಚಿ: ವಯಸ್ಸಾದ ಮೇಲೆ ಎಲ್ಲವನ್ನೂ ಬಿಸಾಕುವ ನಾವುಗಳು ಮನುಷ್ಯರನ್ನೂ ಬಿಟ್ಟಿಲ್ಲ. ಹಿರಿಯರನ್ನೂ ನಿರುಪಯುಕ್ತರೆಂದು ಬಗೆದು ಸಮಾಜದಿಂದ ಹೊರಗಿಟ್ಟಿದ್ದೇವೆ. 

ಅವರನ್ನು ನೋಡಿಕೊಳ್ಳಲಾಗದೆ ವೃದ್ಧಾಶ್ರಮಗಳಲ್ಲಿ ಇರಿಸಿದ್ದೇವೆ. ಆದರೆ ನಿರುಪಯುಕ್ತರೆಂದು ಸಮಾಜದಿಂದ ಕಡೆಗಣನೆಗೆ ಒಳಗಾಗಿರುವ ವರ್ಗಕ್ಕೆ ಸ್ವಾವಲಂಬನೆಯ ಪಾಠ ಮಾಡಿ ಕೊನೆಯುಸಿರು ಇರುವವರೆಗೂ ಅರ್ಥಪೂರ್ಣ ಜೀವನ ನಡೆಸಿದ ಸಾರ್ಥಕ್ಯ ನೀಡುವ ಕೆಲಸ ಜಾರ್ಖಂಡ್ ರಾಜ್ಯದಲ್ಲಿ ಆಗುತ್ತಿದೆ. 

ರಾಂಚಿಯಲ್ಲಿನ ಆಪ್ ಕಿ ಲತಿ ಟೆಕ್ನಾಲಜೀಸ್ ಎನ್ನುವ ಸ್ಟಾರ್ಟಪ್ ಸಂಸ್ಥೆ ಹಿರಿಯರಿಗೆ ಆರ್ಥಿಕವಾಗಿ ಸ್ವತಂತ್ರರಾಗುವ ಮಾರ್ಗವನ್ನು ತೋರುತ್ತಿದೆ. ಈ ವಯಸ್ಸಿನಲ್ಲಿ ಅವರಿಗೆ ಅವರ ಆಸಕ್ತಿಗಳಿಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಿ ಅವರಿಂದ ಉತ್ಪನ್ನ ತಯಾರಿಕೆ ಉದ್ಯಮವನ್ನು ಸಂಸ್ಥೆ ನಡೆಸುತ್ತಿದೆ. ನಂತರ ಆ ಉತ್ಪನ್ನಗಳನ್ನು ಮಾರಾಟ ಮಾಡಲೂ ವೇದಿಕೆ ಕಲ್ಪಿಸಿಕೊಡುತ್ತಿದೆ.  

ಹಿರಿಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಈ ಕಾರ್ಯಕ್ರಮಕ್ಕೆ ಸ್ವನಿರ್ಭರ್ ಎನ್ನುವ ಹೆಸರು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಆತ್ಮ ನಿರ್ಭರ್ ಎನ್ನುವ ಹೊಸ ಕನಸನ್ನು ದಯಪಾಲಿಸಿದ್ದರು. ಅದನ್ನೇ ಸ್ಫೂರ್ತಿಯನ್ನಾಗಿ ಪರಿಗಣಿಸಿ ರಾಂಚಿಯ ಯುವಕರು ವಯಸ್ಕರ ಸ್ವಾವಲಂಬನೆಗಾಗಿ ಒಂದುಗೂಡಿದ್ದಾರೆ ಎನ್ನುವುದು ಶ್ಲಾಘನಾರ್ಹ ಸಂಗತಿ.

SCROLL FOR NEXT